ಕೊಡಗಿನ ಹುಡುಗನ ಗೋಕಾರ್ಟ್ ಆವಿಷ್ಕಾರ!

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಸೆಪ್ಟೆಂಬರ್ 19: ಸಾಧನೆ ಮಾಡುವ ಮನಸ್ಸಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಸಮೀಪದ ಬಿಳಿಗೇರಿ ನಿವಾಸಿ ನೀರ್ಕಜೆ ಎನ್.ಎಂ.ಕುಮಾರ್ ಮತ್ತು ಗಾಯತ್ರಿ ದಂಪತಿ ಪುತ್ರ ಆಕಾಶ್ ತೋರಿಸಿಕೊಟ್ಟಿದ್ದಾರೆ.

ಇಷ್ಟಕ್ಕೂ ಆಕಾಶ್ ಮಾಡಿದ ಸಾಧನೆ ಏನು ಎಂಬ ಕುತೂಹಲ ಮೂಡಿರಬಹುದಲ್ಲವೆ? ಇದಕ್ಕೆ ಅವರು ತಮ್ಮ ಮನೆಯಲ್ಲೇ ನಿರ್ಮಾಣ ಮಾಡಿರುವ ಗೋ ಕಾರ್ಟ್ ಮತ್ತು ಮಿನಿ ಬೈಕ್ ಕಣ್ಮುಂದೆ ನಿಂತಿವೆ. ಆಸಕ್ತಿಯಿದ್ದು, ಏನಾದರೂ ಸಾಧಿಸಬೇಕೆಂಬ ಹಠವಿದ್ದರೆ, ಹೆತ್ತವರ ಪ್ರೋತ್ಸಾಹವಿದ್ದರೆ ಸಾಧನೆಗೆ ಯಾವುದೂ ಅಡ್ಡಿಯಾಗಲಾರದು ಎಂಬುದು ಆಕಾಶ್ ಆವಿಷ್ಕರಿಸಿದ ಯಂತ್ರಗಳು ತೋರಿಸಿಕೊಟ್ಟಿವೆ.[ಕಲುಷಿತ ನೀರಿಗೆ ಜಲಚಿಕಿತ್ಸೆ, ಸಪ್ತಗಿರಿ ವಿದ್ಯಾರ್ಥಿಗಳ ಸಾಧನೆ]

Gokart Akash

ಚಿಕ್ಕಂದಿನಿಂದ ಕಾಫಿ, ಏಲಕ್ಕಿ, ಕರಿಮೆಣಸು ಮೊದಲಾದ ಕೃಷಿಯನ್ನು ನೋಡುತ್ತಾ ಬೆಳೆದ ಆಕಾಶ್ ಕೃಷಿ ಚಟುವಟಿಕೆಗೆ ಬಳಸುವ ಯಂತ್ರಗಳನ್ನು ಸಂಶೋಧಿಸುತ್ತಿದ್ದಾರೆ. ಕಾಫಿ ತೋಟಗಳ ನಡುವೆ ಸಂಚರಿಸಲು ಅನುಕೂಲವಾಗುವಂತೆ ಗೋಕಾರ್ಟ್ ಮತ್ತು ಮಿನಿ ಬೈಕ್ ನಿರ್ಮಿಸಿದ್ದು, ಎಲ್ಲರ ಗಮನಸೆಳೆಯುತ್ತಿದೆ.

ಹಾಗೆ ನೋಡಿದರೆ ಗೋಕಾರ್ಟ್ ವಾಹನಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಬೇಡಿಕೆಯಿದೆ. ಮತ್ತು ಪ್ರವಾಸಿಗರು ಸುತ್ತಾಡಲು ಅದನ್ನು ಬಳಸುತ್ತಾರೆ. ಆದರೆ ಅದನ್ನೇ ಕೃಷಿಗೆ ಬಳಸಿಕೊಳ್ಳಬಹುದು ಎಂಬುದನ್ನು ಆಕಾಶ್ ತೋರಿಸಿಕೊಟ್ಟಿದ್ದಾರೆ.[ಕೊಪ್ಪಳ ರೈತನ ಮುಖದಲ್ಲಿ ಕಳೆ ತಂದ ಬಾಳೆ, ತರಕಾರಿ]

gokart

3 ಅಡಿ ಅಗಲ, 4.5 ಅಡಿ ಉದ್ದವನ್ನು ಹೊಂದಿರುವ ಗೋಕಾರ್ಟ್ ಗೆ 5.5 ಎಚ್.ಪಿ. ಮೋಟಾರ್, 160 ಸಿಸಿ ಸಾಮರ್ಥ್ಯ, ಮೆಕ್ಯಾನಿಕಲ್ ಸ್ಟೇರಿಂಗ್ ಸಿಸ್ಟಂ ಬಳಸಲಾಗಿದೆ. ಇದಕ್ಕೆ ಬೇಕಾದ ಬಿಡಿಭಾಗಗಳು ನಮ್ಮ ದೇಶದಲ್ಲಿ ದೊರೆಯದ ಕಾರಣ ಅಮೆರಿಕಾದಿಂದ ತರಿಸಿಕೊಂಡು ಅಳವಡಿಸಿದ್ದಾರೆ.

ಸುಮಾರು ಎಂಟು ತಿಂಗಳ ಪರಿಶ್ರಮದಿಂದ ಗೋಕಾರ್ಟ್ ನಿರ್ಮಾಣವಾಗಿದೆ. ಇದಕ್ಕಾಗಿ ಸುಮಾರು 85 ಸಾವಿರ ರುಪಾಯಿಯನ್ನು ವೆಚ್ಚ ಮಾಡಲಾಗಿದೆ. ಇನ್ನು ಇವರು 10 ದಿನದಲ್ಲಿ ಮಿನಿ ಬೈಕ್ ತಯಾರು ಮಾಡಿದ್ದು, ಆರಾಮವಾಗಿ ಇದರಲ್ಲಿ ಸಂಚರಿಸಬಹುದು.[ಪಾಲಿಹೌಸ್ ನಲ್ಲಿ ಟೊಮ್ಯಾಟೋ ಬೆಳೆದ ಕಲಬುರಗಿ ರೈತನ ಕಥೆ]

mini bike

ಗೋಕಾರ್ಟ್ ಮತ್ತು ಮಿನಿಬೈಕ್ ತಯಾರಿಸಿರುವ ಆಕಾಶ್ ಮಂಗಳೂರಿನಲ್ಲಿ ಐಟಿಐ ವ್ಯಾಸಂಗ ಮಾಡಿದ್ದು, ಶಿಕ್ಷಣದ ಹಂತದಲ್ಲಿರುವಾಗಲೇ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ವೈಜ್ಞಾನಿಕ ಮಾದರಿ ತಯಾರಿ ಸ್ಪರ್ಧೆಯಲ್ಲಿ ಆಟೋ ಮ್ಯಾಟಿಕ್ ವೈಪರ್ ಸಿಸ್ಟಂ ಪ್ರದರ್ಶಿಸಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಗಮನಸೆಳೆದವರು.

ಶಿಕ್ಷಣದ ನಂತರ ವಿವಿಧ ಕಂಪೆನಿಗಳಲ್ಲಿ ಆಕಾಶ್ ಕೆಲಸ ಮಾಡಿದರಾದರೂ ಏನಾದರೊಂದು ಸಾಧಿಸಬೇಕೆಂಬ ಛಲ, ಅವರ ಮನಸ್ಸಿನಲ್ಲಿದ್ದ ತವಕ ಮತ್ತೆ ಮನೆಯತ್ತ ಮುಖ ಮಾಡುವಂತೆ ಮಾಡಿತ್ತು. ಮತ್ತೆ ಮನೆಗೆ ಬಂದ ಅವರು ಗೋಕಾರ್ಟ್ ಮತ್ತು ಮಿನಿ ಬೈಕ್ ನಿರ್ಮಾಣಕ್ಕಿಳಿದರು. ಮನೆಯವರ ಪ್ರೋತ್ಸಾಹ ಸಾಧನೆಗೆ ನೀರೆರೆಯಿತು. ಆಕಾಶ್ ಅವರಿಗೆ ಇನ್ನಷ್ಟು ಸಾಧನೆ ಮಾಡುವ ಕನಸುಗಳಿದ್ದು, ಅದು ನನಸಗಾಗಲಿ..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Akash, biligeri resident, Kodagu district invented gokart and mini bikes which are useful in coffee plantation. Gokart vehicles have huge demand in international market.
Please Wait while comments are loading...