ಕೊಡಗಿನಲ್ಲಿ ಪತ್ತೆಯಾಗದ ಹುಲಿಗಾಗಿ ತೀವ್ರ ಕಾರ್ಯಾಚರಣೆ; ನಿಲ್ಲದ ಉಪಟಳ
ಮಡಿಕೇರಿ, ನವೆಂಬರ್ 13: ಕೊಡಗಿನಲ್ಲಿ ಹುಲಿಯ ಉಪಟಳದಿಂದಾಗಿ ಜನ ಭಯಭೀತರಾಗಿದ್ದು, ಈಗಾಗಲೇ ದಕ್ಷಿಣಕೊಡಗಿನ ವಿರಾಜಪೇಟೆಗೆ ಸಮೀಪವಿರುವ ಮಗ್ಗುಲ, ಐಮಂಗಲ, ಚಂಬೆ ಬೆಳ್ಳೂರು, ಪುದುಕೋಟೆ, ಕುಕ್ಲೂರು ಈ ಭಾಗದಲ್ಲಿ ಒಂದು ಕಳೆದ ಒಂದು ವಾರದಿಂದ ಹುಲಿ ಅಲ್ಲಲ್ಲಿ ಕಾಣಸಿಗುತ್ತಿದ್ದು ಜನಭಯಭೀತರಾಗಿದ್ದಾರೆ. ಜತೆ, ಜತೆಗೆ ಜಾನುವಾರುಗಳನ್ನು ತಿಂದು ಹಾಕುತ್ತಿದ್ದು ಆತಂಕದಲ್ಲಿ ದಿನಕಳೆಯುವಂತಾಗಿದೆ.
ಈಗಾಗಲೇ ರಸ್ತೆ ಬದಿ ರಾತ್ರಿ ವೇಳೆಯಲ್ಲಿ ವಾಹನ ಸವಾರರಿಗೆ ಹುಲಿ ಗೋಚರವಾಗುತ್ತಿದ್ದು ಗ್ರಾಮಸ್ಥರ ನಿದ್ದೆ ಕೆಡಿಸಿದೆ. ಅಲ್ಲದೇ ಮಗ್ಗುಲ ಮತ್ತು ಐಮಂಗಲ, ಪುದುಕೋಟೆ ಗ್ರಾಮದ ಹಲವರ ಕಾಫಿತೋಟ ಮತ್ತು ಗದ್ದೆಗಳಲ್ಲಿ ಹುಲಿಹೆಜ್ಜೆಗಳು ಕಂಡು ಬಂದಿರುವುದರಿಂದ ತೋಟಕ್ಕೆ ಹೋಗಿ ಕೆಲಸ ಮಾಡಲು ಕೂಲಿಕಾರ್ಮಿಕರು ಭಯಪಡುತ್ತಿದ್ದಾರೆ. ಇಷ್ಟರಲ್ಲಿಯೇ ಹುಲಿಯನ್ನು ಸೆರೆ ಹಿಡಿಯಲು ನಡೆಸಿದ ಕಾರ್ಯಾಚರಣೆಗಳು ಫಲಕೊಟ್ಟಿಲ್ಲ.

ಹೀಗಾಗಿ ಈ ನಿಟ್ಟಿನ್ನಲ್ಲಿ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಮತ್ತು ಡಿ.ಸಿ.ಎಫ್ ಜಗನ್ನಾಥ್ ಅವರ ನೇತೃತ್ವದಲ್ಲಿ ಮಗ್ಗುಲ, ಐಮಂಗಲ ಗ್ರಾಮದಲ್ಲಿ ಹುಲಿ ಪತ್ತೆ ಕಾರ್ಯಾಚರಣೆಯನ್ನು ನವೆಂಬರ್ 8ರಂದು ಆರಂಭ ಮಾಡಿದ್ದರು. ಆಗ ಕಾಣಿಸದ ಹುಲಿ ಹೆಜ್ಜೆಗಳು ಮತ್ತು ಘರ್ಜನೆ ಈಗ ಪುದುಕೋಟೆ ಗ್ರಾಮದಲ್ಲಿ ಕೇಳಿಬಂದಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.
ಇದೀಗ ಚಂಬೆ ಬೆಳ್ಳೂರು ಗ್ರಾಮದ ಭದ್ರಕಾಳಿ ದೇವಾಲಯದ ಬಳಿ ಸಭೆ ಸೇರಿದ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಹಾಗೂ ಡಿಸಿಎಫ್ ಜಗನ್ನಾಥ್ ಮತ್ತು ಗ್ರಾಮಸ್ಥರು ಹುಲಿ ಕಾರ್ಯಚರಣೆ ಬಗ್ಗೆಗೆ ಕೆಲಹೊತ್ತು ಚರ್ಚಿಸಿದ್ದು,. ಬಳಿಕ ಭದ್ರಕಾಳಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ವಿತರಿಸಿ ಬಳಿಕ ಹುಲಿ ಪತ್ತೆ ಕಾರ್ಯಾಚರಣೆ ಆರಂಭ ಮಾಡಿದ್ದಾರೆ. ಕಾರ್ಯಾಚರಣೆ ನಡೆಸುತ್ತಿರುವ ತಂಡದಲ್ಲಿ ಎಪ್ಪತ್ತು ಅರಣ್ಯ ಸಿಬ್ಬಂದಿಗಳಿದ್ದು ಏಳು ತಂಡಗಳಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಮಗ್ಗುಲ, ಐಮಂಗಲ, ಪುದುಕೋಟೆ, ಚಂಬೆಬೆಳ್ಳೂರು, ಕುಕ್ಲೂರು, ಬಿಟ್ಟಂಗಾಲ ಗ್ರಾಮದಲ್ಲಿ. ಪಟಾಕಿ ಸಿಡಿಸುತ್ತಾ, ಪಿಪೀ ಸದ್ದು ಮಾಡುತ್ತಾ ಕಾರ್ಯಾಚರಣೆ ನಡೆಸಿದ್ದಾರೆ.

ಇದೇ ಸಂದರ್ಭದಲ್ಲಿ ಇಲ್ಲಿನ ಭದ್ರಕಾಳಿ ದೇವಾಲಯದ ಪಕ್ಕದ ತೋಟದಲ್ಲಿ ರಸ್ತೆಯಂಚಿನ್ನಲ್ಲಿಯೇ ಹುಲಿ ಹೆಜ್ಜೆಗಳು ಪತ್ತೆಯಾಗಿದ್ದು, ಈ ಸಂಬಂಧ ಮಾಹಿತಿ ನೀಡಿರುವ ಡಿಸಿಎಫ್ ಜಗನ್ನಾಥ್ ಅವರು, ಹಲವಾರು ದಿನಗಳಿಂದ ವನ್ಯಪ್ರಾಣಿಗಳ ಉಪಟಳ ಅತ್ಯಂತ ಹೆಚ್ಚಾಗಿದೆ. ಕಳೆದ ವಾರ ಮಗ್ಗುಲ ಗ್ರಾಮದಲ್ಲಿ ಹುಲಿ ಇರುವುದು ಖಾತ್ರೀ ಆಗಿದೆ.
ಕಳೆದ 15 ದಿನಗಳಿಂದ ಈ ಭಾಗದಲ್ಲಿ ಹುಲಿಯ ಚಲನವಲನ ಪತ್ತೆಯಾಗಿದೆ. ನಾವು ಈಗ ಎಪ್ಪತ್ತು ಸಿಬ್ಬಂದಿಯಿಂದ ಕಾರ್ಯಚರಣೆ ಆರಂಭಮಾಡಿದ್ದೀವಿ. ಹೆಚ್ಚುವರಿ ಆಗಿ ಬೇಕಾದರೆ ಸಿಬ್ಬಂದಿಗಳನ್ನು ಕರೆಸಿಕೊಳ್ಳುತ್ತೇವೆ. ಈ ಹುಲಿ ಕ್ಯಾಮೆರಾದಲ್ಲಿ ಟ್ರ್ಯಾಪ್ ಆದ ಕೂಡಲೇ ಸೆರೆ ಹಿಡಿಯಲು ಅನುಮತಿ ಪಡೆಯುತ್ತೇವೆ ಎಂದು ಹೇಳಿದ್ದಾರೆ.
ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಮಾತನಾಡಿ ಈ ಭಾಗದಲ್ಲಿ ಹುಲಿ ಸಂಚಾರ ಇರುವ ಬಗ್ಗೆ ಮಾಹಿತಿ ಬಂದಿದೆ. ಅಲ್ಲದೇ ಈ ಭಾಗದಲ್ಲಿ ಕಾಡಾನೆ ಹಾವಳಿ ಕೂಡ ಜಾಸ್ತಿಯಿದೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರ ನಿರ್ದೇಶನದ ಮೇರೆಗೆ ಹುಲಿ ಕಾರ್ಯಚರಣೆ ಮಾಡಲು ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸಿಎಫ್ ಜಗನ್ನಾಥ್ ಅವರು ಕಾರ್ಯಾಚರಣೆ ನೇತೃತ್ವ ವಹಿಸುವುದಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.
ಕಾರ್ಯಾಚರಣೆ ಸ್ಥಳದಲ್ಲಿ ಚೆಂಬೆಬೆಳ್ಳೂರು ಗ್ರಾಮದ ಕೋಳೇರ ರನ್ನ, ಊರಿನ ಮುಖ್ಯಸ್ಥ ಚಾರಿಮಂಡ ಪ್ರಕಾಶ್, ಕೊಳುವಂಡ ಹರೀಶ್, ಉಳಿಯಡ ಜೀವನ್, ಮುತ್ತಪ್ಪ, ನಾಮನಿರ್ದೇಶನ ಪುರಸಭಾ ಸದಸ್ಯ ಶಬರೀಶ್ ಶೆಟ್ಟಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್, ವಲಯ ಅರಣ್ಯಾಧಿಕಾರಿ ಕೆ.ವಿ ಶಿವರಾಂ, ಉಪವಲಯ ಅರಣ್ಯಾಧಿಕಾರಿ ಆನೆ ಕಾರ್ಯಪಡೆ ಪ್ರಶಾಂತ್, ಅರಣ್ಯ ರಕ್ಷಕ ನಾಗರಾಜ್ ರಡರಟ್ಟಿ ಸೇರಿದಂತೆ ಅರಣ್ಯ ಸಿಬ್ಬಂದಿ ಇದ್ದರು.












Click it and Unblock the Notifications