ಮಕ್ಕಳ ಖಾತೆಗೆ ವರ್ಷಕ್ಕೆ 48 ಸಾವಿರ ಸ್ಕಾಲರ್ ಶಿಪ್, ಸಂದೇಶ ತಂದ ಗೊಂದಲ
ಮಡಿಕೇರಿ, ಸೆಪ್ಟೆಂಬರ್ 22: ತಂದೆ ಇಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ 48 ಸಾವಿರ ರೂ. ಸ್ಕಾಲರ್ ಶಿಫ್ ಸೌಲಭ್ಯವಿದ್ದು, ಅರ್ಜಿ ಸಲ್ಲಿಕೆ ಮಾಡಿ ಎಂಬ ಸಂದೇಶ ಕೊಡಗು ಜಿಲ್ಲೆಯಲ್ಲಿ ವಾಟ್ಸಪ್‌ಗಳಲ್ಲಿ ಹರಿದಾಡುತ್ತಿದೆ. ಈ ಮಾದರಿ ಸಂದೇಶವನ್ನು ನೋಡಿ ಜನರು ಸಹ ಗೊಂದಲಗೊಂಡಿದ್ದಾರೆ. ಈ ರೀತಿಯ ಸಂದೇಶಕ್ಕೆ ಹಾಗೂ ಆಮಿಷಗಳನ್ನು ನಂಬಿ ಮದ್ಯವರ್ತಿಗಳಿಗೆ ಹಣ ನೀಡಿ ಮೋಸ ಹೋಗಬಾರದು ಎಂದು ಜನರಿಗೆ ಮನವಿ ಮಾಡಲಾಗಿದೆ.
ಕೊಡಗು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಈ ಕುರಿತು ಜನರಿಗೆ ಮನವಿ ಮಾಡಿದೆ. ಜಿಲ್ಲೆಯಾದ್ಯಂತ ತಂದೆ ಇಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ 48 ಸಾವಿರ ರೂ. ಸ್ಕಾಲರ್ ಶಿಪ್ ಸೌಲಭ್ಯವಿದ್ದು, ಜನಸಾಮಾನ್ಯರಿಗೆ ಈ ವಿಚಾರ ತಿಳಿದೇ ಇಲ್ಲ. ಆದ್ದರಿಂದ ತಮಗೆ ಗೊತ್ತಿರುವ ಯಾವುದಾದರೂ ತಂದೆ ಇಲ್ಲದ ಮಕ್ಕಳಿದ್ದಲ್ಲಿ ಅವರ ಪೋಷಕರಿಗೆ ಕೂಡಲೇ ಅರ್ಜಿ ಸಲ್ಲಿಸಲು ತಿಳಿಸಿ ಎಂಬ ಸಂದೇಶ ವಾಟ್ಸಾಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎಂದು ಹೇಳಿದೆ.

ಈ ಸಂದೇಶ ನೋಡಿದ ಜನರು ಗೊಂದಲಗೊಂಡಿದ್ದಾರೆ. ಆದ್ದರಿಂದ ಜನರು ಈ ರೀತಿಯ ಸಂದೇಶ ಹಾಗೂ ಆಮಿಷಗಳನ್ನು ನಂಬಿ ಹಣ ನೀಡಿ ಮೋಸ ಹೋಗಬಾರದು ಎಂದು ಕರೆ ನೀಡಲಾಗಿದೆ. ಈ ಯೋಜನೆಯ ಸೌಲಭ್ಯ ಪಡೆಯಲು ಯಾವುದೇ ಶುಲ್ಕವನ್ನು ಪಾವತಿಸುವ ಅಗತ್ಯವಿರುವುದಿಲ್ಲ. ಈ ಸಂದೇಶವನ್ನು ನೋಡಿದ ಸಾರ್ವಜನಿಕರು ಜಿಲ್ಲಾಧಿಕಾರಿ ಅವರ ಕಚೇರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿಗಳಿಗೆ ಅಲೆದಾಡುತ್ತಿರುವುದು ಗಮನಕ್ಕೆ ಬಂದಿರುತ್ತದೆ ಎಂದು ಘಟಕ ಹೇಳಿದೆ.
ಏನಿದು ಯೋಜನೆ?; ಈ ಮಾದರಿಯ ಯೋಜನೆ ಇರುವುದು ಹೌದು. 18 ವರ್ಷದೊಳಗಿನ ಮಕ್ಕಳನ್ನು ಕೌಟುಂಬಿಕ ಹಾಗೂ ವಿಸ್ತೃತ ಕುಟುಂಬದ ವಾತಾವರಣದಲ್ಲಿ ಆರೈಕೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಿಷನ್ ವಾತ್ಸಲ್ಯ ಯೋಜನೆಯಲ್ಲಿ ಪ್ರಾಯೋಜಕತ್ವ ಕಾರ್ಯಕ್ರಮವನ್ನು ಪ್ರತಿ ಜಿಲ್ಲೆಯಾದ್ಯಂತ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಅನುಷ್ಠಾನ ಮಾಡಲಾಗುತ್ತಿದೆ.
ಮಕ್ಕಳನ್ನು ಗುರುತಿಸಲು ಕೆಲವು ವಿಶೇಷ ಮಾನದಂಡಗಳಿದ್ದು, 18 ವರ್ಷದ ಒಳಗಿನ ಮಕ್ಕಳಿಗೆ ಈ ಯೋಜನೆ ಅನ್ವಯಿಸುತ್ತದೆ. ತಾಯಿ ವಿಧವೆ ಅಥವಾ ವಿಚ್ಛೇದಿತೆ ಅಥವಾ ಕುಟುಂಬದಿಂದ ಪರಿತ್ಯಜಿಸಲ್ಪಟ್ಟಿದ್ದರೆ, ಮಕ್ಕಳು ಅನಾಥರಾಗಿದ್ದರೆ ಹಾಗೂ ವಿಸ್ತೃತ ಕುಟುಂಬದೊಡನೆ ಜೀವಿಸುತ್ತಿದ್ದರೆ, ಪೋಷಕರು ಜೀವಕ್ಕೆ ಬೆದರಿಕೆಯೊಡ್ಡುವ, ಗಂಭೀರ ಸ್ವರೂಪದ ಖಾಯಿಲೆಯ ಸಂತ್ರಸ್ತರಾಗಿದ್ದರೆ, ಪೋಷಕರು ಅಶಕ್ತರಾಗಿದ್ದರೆ ಅಥವಾ ಮಕ್ಕಳನ್ನು ನೋಡಿಕೊಳ್ಳಲು ಆರ್ಥಿಕವಾಗಿ ಹಾಗೂ ದೈಹಿಕವಾಗಿ ಅಸಮರ್ಥವಾಗಿದ್ದರೆ ಬಾಲನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015ರ ಪ್ರಕಾರ ಮಕ್ಕಳು ಪೋಷಣೆ ಮತ್ತು ರಕ್ಷಣೆಯ ಅಗತ್ಯ ಹೊಂದಿರಬೇಕು.
ವಸತಿ ರಹಿತರು, ಯಾವುದಾದರೂ ನೈಸರ್ಗಿಕ ವಿಕೋಪಗಳ ಸಂತ್ರಸ್ತರು, ಬಾಲ ಕಾರ್ಮಿಕರು, ಬಾಲ್ಯ ವಿವಾಹದ ಸಂತ್ರಸ್ತರು, ಮಾನವ ಕಳ್ಳಸಾಗಾಣೆ ಸಂತ್ರಸ್ತರು, ಎಚ್‍ಐವಿ/ ಏಡ್ಸ್ ಪರಿಣಾಮ ಪೀಡಿತ ಮಗು, ವಿಶೇಷಚೇತನ ಮಗು, ತಪ್ಪಿಸಿಕೊಂಡಿರುವ ಅಥವಾ ಓಡಿಬಂದಿರುವ ಮಗು, ಭಿಕ್ಷಾಟನೆ ಅಥವಾ ಬೀದಿಯಲ್ಲಿ ವಾಸಿಸುತ್ತಿರುವ ಮಗು ಮಾನದಂಡಗಳಿಗೊಳಪಟ್ಟ ಮಕ್ಕಳಿಗೆ ಮಾಸಿಕ ರೂ. 4 ಸಾವಿರ (ವರ್ಷಕ್ಕೆ ರೂ. 48 ಸಾವಿರ) ಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ಆದ್ದರಿಂದ ಅರ್ಹ ಫಲಾನುಭವಿಗಳು ಯಾವುದೇ ಮದ್ಯವರ್ತಿಗಳನ್ನು ಸಂಪರ್ಕಿಸದೇ ನೇರವಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಶಾಂತಿನಿಲಯ, ಕಾನ್ವೆಂಟ್ ಜಂಕ್ಷನ್, ಮಡಿಕೇರಿ ಈ ಕಛೇರಿಗೆ ಕಛೇರಿ ವೇಳೆಯಲ್ಲಿ ಭೇಟಿ ನೀಡಿ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಅರ್ಜಿಯನ್ನು ಭರ್ತಿ ಮಾಡಿ ದಾಖಲಾತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಛೇರಿಗೆ ಫಲಾನುಭವಿಗಳು ಅಥವಾ ಫಲಾನುಭವಿಗಳ ಪೋಷಕರು ನೇರವಾಗಿ ಸಲ್ಲಿಸಬಹುದು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಹೆಚ್ಚಿನ ಮಾಹಿತಿಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಛೇರಿ, ಶಾಂತಿ ನಿಲಯ, ಕಾನ್ವೆಂಟ್ ಜಂಕ್ಷನ್, ಮಡಿಕೇರಿ ಇವರನ್ನು ಸಂಪರ್ಕಿಸಿ, ದೂರವಾಣಿ ಸಂಖ್ಯೆ 08272-228800. ಸಾಮಾಜಿಕ ಜಾಲತಾಣದ ಸಂದೇಶಗಳಿಗೆ ಗಮನ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.












Click it and Unblock the Notifications