ಮತ್ತಿಗೋಡಿನಲ್ಲಿ ಖಾಸಗಿ ಬಸ್ ಡಿಕ್ಕಿಯಾಗಿ ರೌಡಿ ರಂಗ ಸಾವು
ಕೊಡಗು, ಅಕ್ಟೋಬರ್.08: ನಾಗರಹೊಳೆ ಅಭಯಾರಣ್ಯದ ಮತ್ತಿಗೋಡು ಆನೆಕ್ಯಾಂಪ್ ಬಳಿ ಕಣ್ಣನ್ನೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಲ್ಪಕ ಬಸ್ ಸಾಕಾನೆಯೊಂದಕ್ಕೆ ಡಿಕ್ಕಿ ಹೊಡೆದ ಕಾರಣ ಆನೆಯ ಸೊಂಟ ಮುರಿದು ಸಾವನ್ನಪ್ಪಿದ ಘಟನೆ ನಡೆದಿದೆ.
ಘಟನೆಯ ವಿವರ:
ಮತ್ತಿಗೋಡು ಆನೆಕ್ಯಾಂಪ್ ನಲ್ಲಿರುವ ನಲವತೈದು ವರ್ಷ ಪ್ರಾಯದ ಆನೆ ರಂಗನನ್ನು ಎಂದಿನಂತೆ ರಾತ್ರಿ ತಿರುಗಾಡಲು ಬಿಡಲಾಗಿತ್ತು. ಆಗ ಅಂದಾಜು 2ಗಂಟೆ ಸುಮಾರಿಗೆ ಬಂದ ಖಾಸಗಿ ಬಸ್ ಆನೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆನೆಯ ಸೊಂಟ ಮುರಿದು ಸ್ಥಳದಲ್ಲೇ ಕುಸಿದು ಬಿದ್ದಿದೆ.

ನಂತರ ಆನೆಕ್ಯಾಂಪ್ ನ ವೈದ್ಯ ಡಾ ಮುಜೀಬ್ ಮತ್ತು ಆನೆ ಮಾವುತರ ಸಹಕಾರದಿಂದ ಆನೆಯ ಶುಶ್ರೂಷೆ ನಡೆಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆನೆ ಇಂದು ಸೋಮವಾರ (ಅಕ್ಟೋಬರ್.08) ಬೆಳಗ್ಗೆ ಸಾವನ್ನಪ್ಪಿದೆ.

ಈ ಆನೆಯನ್ನು ಬೆಂಗಳೂರಿನ ಬಳಿ 3 ವರ್ಷಗಳ ಹಿಂದೆ ಸೆರೆಹಿಡಿದು ಪಳಗಿಸಲಾಗಿತ್ತು. ರೌಡಿ ರಂಗ ಎಂದು ಈ ಆನೆ ಹಿಂದೆ ಕುಖ್ಯಾತಿ ಪಡೆದಿತ್ತು. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಬಸ್ ಚಾಲಕನ ವಿಚಾರಣೆ ನಡೆಸುತ್ತಿದ್ದಾರೆ.











Click it and Unblock the Notifications