ಕೊಡಗಿನಲ್ಲಿ ಕೃಷಿಕರಿಗೆ ಸಂಕಷ್ಟ ತಂದೊಡ್ಡುತ್ತಿರುವ ಕಾಡಾನೆಗಳು
ಮಡಿಕೇರಿ, ಜುಲೈ 2: ಕೊಡಗಿನಲ್ಲಿ ಕಾಡಾನೆ ಮತ್ತು ಮಾನವರ ನಡುವಿನ ಸಂಘರ್ಷಕ್ಕೆ ತೆರೆಬೀಳುವ ಯಾವ ಲಕ್ಷಣಗಳೂ ಸದ್ಯಕ್ಕೆ ಕಾಣುತ್ತಿಲ್ಲ. ಇವತ್ತು ಕಾಡಿನಲ್ಲಿರಬೇಕಾದ ಹೆಚ್ಚಿನ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಫಸಲು ನಾಶ ಮಾಡುವುದರೊಂದಿಗೆ ಬೆಳೆಗಾರರ, ಕಾರ್ಮಿಕರ ಪ್ರಾಣ ತೆಗೆಯುತ್ತಿವೆ. ಇತ್ತೀಚೆಗೆ ನಡೆದ ಆನೆಗಳ ಸರ್ವೆಯಲ್ಲಿ ಅವುಗಳ ಸಂತತಿ ಹೆಚ್ಚಾಗಿರುವುದು ಕಂಡು ಬಂದಿದೆ.
ಕಾಫಿ ತೋಟಗಳ ಮೂಲಕವೇ ಒಂದೆಡೆಯಿಂದ ಮತ್ತೊಂದೆಡೆಗೆ ಸಾಗುವ ಕಾಡಾನೆಗಳು ತಾವು ಸಾಗಿದ ಹಾದಿಯಲ್ಲೆಲ್ಲ ಕಾಫಿ, ಬಾಳೆ, ಅಡಿಕೆ, ತೆಂಗನ್ನು ನಾಶ ಮಾಡುತ್ತಿರುವುದಲ್ಲದೆ, ಮನುಷ್ಯರನ್ನೂ ಕೊಂದು ಹಾಕುತ್ತಿವೆ. ಕಾಫಿ ತೋಟಗಳ ನಡುವೆ ಸೇರಿಕೊಂಡು ಉಪಟಳ ನೀಡುತ್ತಿದ್ದ ಹಲವು ಆನೆಗಳನ್ನು ಈಗಾಗಲೇ ಸೆರೆ ಹಿಡಿಯಲಾಗಿದೆ. ಆದರೂ ಯಾವಾಗ ಎಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತವೆ ಎನ್ನಲಾಗದು ಎನ್ನುವ ಪರಿಸ್ಥಿತಿ ಇದೀಗ ಸೃಷ್ಠಿಯಾಗಿದೆ.

ಕಾಡಾನೆಗಳ ದಾಳಿಯಿಂದ ಪ್ರಾಣ, ಮನೆ, ಬೆಳೆ ಹೀಗೆ ಹಲವು ರೀತಿಯಲ್ಲಿ ನಷ್ಟ ಅನುಭವಿಸಿದವರ ದೊಡ್ಡ ಸಂಖ್ಯೆಯೇ ಕೊಡಗಿನಲ್ಲಿದೆ. ಬೇಸಿಗೆಯಲ್ಲಿ ಅರಣ್ಯದಲ್ಲಿ ಮೇವು, ನೀರು ಸಿಗದ ಕಾರಣ ಅದನ್ನು ಹುಡುಕಿಕೊಂಡು ನಾಡಿನತ್ತ ಬರುವ ಕಾಡಾನೆಗಳು ನೇರವಾಗಿ ಕಾಫಿ ತೋಟವನ್ನು ಸೇರಿಕೊಂಡು ಲಂಗುಲಗಾಮು ಇಲ್ಲದೆ ಸುತ್ತಾಡುತ್ತವೆ. ಇನ್ನು ಮಳೆಗಾಲ ಆರಂಭವಾಗುತ್ತಿದ್ದಂತೆಯೇ ತೋಟಗಳಲ್ಲಿರುವ ಹಲಸಿನ ಹಣ್ಣುಗಳನ್ನು ತಿನ್ನುತ್ತಾ ಅಲ್ಲಿಯೇ ವಾಸ್ತವ್ಯ ಹೂಡಿ ಬಿಡುತ್ತವೆ. ಇದರಿಂದಾಗಿ ತೋಟಕ್ಕೆ ಹೋಗಲಾರದ ಸ್ಥಿತಿ ಕಾಫಿ ಬೆಳೆಗಾರರದ್ದಾಗಿದೆ.
ತೋಟದೊಳಗೆ ನಿರಾಯಾಸವಾಗಿ ಸಾಗುವ ಕಾಡಾನೆಗಳು ಕೆಲವೊಮ್ಮೆ ತೋಟದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗೆ ಸಿಕ್ಕಿ ಸಾವನ್ನಪ್ಪುತ್ತಿವೆ. ಇತ್ತೀಚೆಗೆ ನಡೆದ ಕಾಡಾನೆಗಳ(ಏಷಿಯನ್ ನೇಚರ್ ಕನ್ಸರ್ವೇಷನ್ ಫೌಂಡೇಷನ್) ಸರ್ವೆ ಪ್ರಕಾರ ಕೊಡಗಿನಲ್ಲಿ ಆನೆಗಳ ಸಂತತಿ ಹೆಚ್ಚಾಗಿದ್ದು, ಸುಮಾರು 300ಕ್ಕೂ ಹೆಚ್ಚು ಆನೆಗಳಿವೆ ಎನ್ನಲಾಗಿದೆ.

ಮೊದಲೆಲ್ಲ ಕೊಡಗಿನ ಪುಷ್ಟಗಿರಿ, ತಲಕಾವೇರಿ ಸುತ್ತಮುತ್ತಲ ಶ್ರೇಣಿ, ಬ್ರಹ್ಮಗಿರಿ, ನಾಗರಹೊಳೆ ಅಭಯಾರಣ್ಯಗಳಲ್ಲಷ್ಟೆ ಇದ್ದ ಕಾಡಾನೆಗಳು ಈಗ ಸಣ್ಣ ಕಾಡುಗಳ ಮೂಲಕ ಕಾಫಿ ತೋಟವನ್ನು ಆಶ್ರಯಿಸಿವೆ. ಜಿಲ್ಲೆಯ ದುಬಾರೆಯಲ್ಲಿ ಪ್ರಸಕ್ತ 29 ಸಾಕಾನೆಗಳು ಇವೆ. ವೀರಾಜಪೇಟೆ ಅರಣ್ಯ ವಲಯ ಪ್ರದೇಶದಲ್ಲಿ 69 ಕಾಡಾನೆಗಳು, ತಿತಿಮತಿ ಅರಣ್ಯ ವಲಯ ಪ್ರದೇಶದಲ್ಲಿ 54, ಪೊನ್ನಂಪೇಟೆ ಅರಣ್ಯ ವಲಯದಲ್ಲಿ 16 ಕಾಡಾನೆಗಳಿದ್ದು, ಮುಂಡ್ರೋಟು ಅರಣ್ಯ ವಲಯದಲ್ಲಿ ಎರಡು ಹಾಗೂ ಮಾಕುಟ್ಟ ವಲಯದಲ್ಲಿ ಒಂದು, ಉಪ ಅರಣ್ಯ ವಿಭಾಗದಲ್ಲಿ 86 ಕಾಡಾನೆಗಳು ಗಣತಿಗೆ ಸಿಕ್ಕಿವೆ.
ಇನ್ನು ತಲಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಗೋಚರವಾಗಿರುವ ಕಾಡಾನೆಗಳ ಸಂಖ್ಯೆ 36, ಕಾಡಿನಂಚಿನ ಪ್ರದೇಶಗಳಲ್ಲಿ 39 ಕಾಡಾನೆಗಳು ಕಾಣ ಸಿಕ್ಕಿವೆ.
ಒಟ್ಟಾರೆ ಜಿಲ್ಲೆ ವ್ಯಾಪ್ತಿಯ ಅರಣ್ಯಗಳಲ್ಲಿ ಕಾಡಾನೆಗಳ ಸಂಖ್ಯೆ ಹೆಚ್ಚಾಗಿರುವುದು ಇಲ್ಲಿನ ಕೃಷಿಕರ ಪಾಲಿಗೆ ಆತಂಕಕಾರಿ ಬೆಳವಣಿಗೆಯಾಗಿದೆ. ಇಲ್ಲಿನವರು ಕೃಷಿಯನ್ನೇ ನಂಬಿ ಬದುಕುತ್ತಿದ್ದು, ಅರಣ್ಯದಂಚಿನಲ್ಲಿ ಮನೆಗಳೂ ವಿರಳವಾಗಿದ್ದು ಆನೆಗಳು ಬಂದರೆ ಓಡಿಸಲೂ ಜನ ಹರಸಾಹಸ ಪಡುವಂತಾಗಿದೆ.












Click it and Unblock the Notifications