ವನವಾಸದಲ್ಲಿದ್ದ ಪಾಂಡವರು ಬಳಸಿದ್ದ ಈ ತರಕಾರಿ ಬಗ್ಗೆ ನಿಮಗೆ ಗೊತ್ತಾ?
ಮಡಿಕೇರಿ, ಆಗಸ್ಟ್ 27: ಮಲೆನಾಡಿನವರಿಗೆ ಕಾಡಿನಲ್ಲಿ ಏನೆಲ್ಲ ಸೊಪ್ಪು ತರಕಾರಿ, ಗೆಡ್ಡೆಗೆಣಸು ದೊರೆಯುತ್ತದೆ ಎಂಬುದು ಚೆನ್ನಾಗಿ ಗೊತ್ತಿರುತ್ತದೆ. ಅಷ್ಟೇ ಅಲ್ಲದೆ ಅವುಗಳನ್ನು ಕಾಡಿನಿಂದ ಮನೆಗೆ ತಂದು ಯಾವ ರೀತಿ ಬಳಸಬೇಕೆಂಬುದು ಕೂಡ ಗೊತ್ತಿರುತ್ತದೆ. ಇವತ್ತಿಗೂ ಬಹಳಷ್ಟು ಮಂದಿ ಕಾಡಿನಲ್ಲಿ ದೊರೆಯುವ ಪದಾರ್ಥಗಳನ್ನೇ ಸಾರು, ಪಲ್ಯಕ್ಕೆ ಬಳಸುತ್ತಿರುವುದನ್ನು ನಾವು ಕಾಣಬಹುದಾಗಿದ್ದು ಅದರಲ್ಲಿ ಪಾಂಡವರ ಹಾಗಲವೂ ಒಂದಾಗಿದೆ.
ಬಹಳಷ್ಟು ಮಂದಿಗೆ ಹಾಗಲ ಗೊತ್ತು ಆದರೆ ಇದ್ಯಾವುದಪ್ಪಾ ಪಾಂಡವರ ಹಾಗಲ ಎಂಬ ಆಲೋಚನೆಗಳು ಬರುವುದು ಸಹಜ. ಆದರೆ ಈ ತರಕಾರಿಗೆ ಪಾಂಡವರಹಾಗಲ ಎಂಬ ಹೆಸರಿದ್ದರೂ ಹೆಚ್ಚಿವರು ಮಡಹಾಗಲ ಎಂದು ಕರೆಯುತ್ತಾರೆ. ಇಷ್ಟೇ ಅಲ್ಲದೆ ಇದಕ್ಕೆ ಪಾವಕ್ಕ, ಕಾಡುಪೀರೆ ಎಂಬ ಹೆಸರುಗಳು ಇವೆ. ಪಾಂಡವರು ವನವಾಸದಲ್ಲಿದ್ದಾಗ ಇದನ್ನು ಸೇವಿಸಿದ್ದರೆಂದೂ ಹೀಗಾಗಿ ಪಾಂಡವರಹಾಗಲ ಎಂಬ ಹೆಸರು ಬಂದಿದೆ ಎಂದು ಕೆಲವರು ಹೇಳುತ್ತಾರೆ.

ಕೊಡಗು ಸೇರಿದಂತೆ ಮಲೆನಾಡಿನ ಮಂದಿಗೆ ಇದರ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ. ಜತೆಗೆ ಇದರ ರುಚಿ ಮತ್ತು ಆರೋಗ್ಯದ ಗುಣ ತಿಳಿದಿರುವುದರಿಂದ ಬಳಕೆಯನ್ನು ಹೆಚ್ಚಾಗಿ ಮಾಡುತ್ತಾರೆ. ಹಿಂದಿನವರಿಗೆ ಕಾಡಿನಲ್ಲಿ ಹೇರಳವಾಗಿ ದೊರೆಯುತ್ತಿದ್ದ ಮಡಹಾಗಲವನ್ನು ಮನೆಗೆ ಕೊಂಡೊಯ್ದು ಪದಾರ್ಥಕ್ಕೆ ಬಳಸುತ್ತಿದ್ದರು. ಹೀಗಾಗಿ ಅವುಗಳನ್ನು ನಾಡಿಗೆ ತಂದು ನೆಟ್ಟು ಬೆಳೆಸುವ ಪ್ರಯತ್ನವನ್ನು ಮಾಡಲೇ ಇಲ್ಲ. ಆದರೆ ಇತ್ತೀಚೆಗೆ ಸುಧಾರಿತ ತಳಿಗಳನ್ನು ಕಂಡು ಹಿಡಿಯಲಾಗಿದ್ದು, ಅವುಗಳನ್ನು ಬೆಳೆಯುವ ಕೆಲಸಗಳು ನಡೆಯುತ್ತಿವೆ.
ಹಾಗಲದ ಜಾತಿಗೆ ಸೇರಿದ್ದರೂ ಕಹಿಯಿಲ್ಲ
ಮಡಹಾಗಲದ ವಿಶೇಷತೆ ಏನೆಂದರೆ ಇದು ಹಾಗಲಕಾಯಿ ಜಾತಿಗೆ ಸೇರಿದ್ದರೂ ಕಹಿ ಗುಣವನ್ನು ಹೊಂದಿಲ್ಲದಿರುವುದು ಇದರ ವಿಶೇಷವಾಗಿದೆ. ಆಂಗ್ಲಭಾಷೆಯಲ್ಲಿ ಇದಕ್ಕೆ ಸ್ಪೈನ್ ಗಾರ್ಡ್ ಎಂಬ ಹೆಸರಿದೆ. ಒಂದು ಕಾಲದಲ್ಲಿ ಕಾಡಿನಲ್ಲಿ ಹುಟ್ಟಿ ಬೆಳೆದು ಕಾಯಿಬಿಟ್ಟು ಪ್ರಾಣಿ ಪಕ್ಷಿಗಳಿಗೆ ಆಹಾರವಾಗುತ್ತಿದ್ದ ಮಡಹಾಗಲ ಈಗ ಅಪರೂಪವಾಗಿದೆ. ಅದಕ್ಕೆ ಕಾರಣ ಕಾಡುಗಳು ನಾಶವಾಗುತ್ತಿವೆ. ಹೀಗಾಗಿ ಎಲ್ಲೆಂದರಲ್ಲಿ ಸಿಗುತ್ತಿದ್ದ ಕಾಲ ಮಾಯವಾಗಿದೆ. ಆದ್ದರಿಂದ ಇದರ ತಳಿಗಳನ್ನು ನಾಡಿನಲ್ಲಿ ಬೆಳೆಸಲು ಆರಂಭಿಸಿದ್ದಾರೆ.
ಕೆಲವೊಮ್ಮೆ ಕಾಡಿನಿಂದ ತಂದು ನಗರಗಳಲ್ಲಿ ಮಾರಾಟ ಮಾಡುವವರು ಇದ್ದಾರೆ. ಇದರ ಬಗ್ಗೆ ಅರಿತವರು ದುಬಾರಿ ಬೆಲೆಯಾದರೂ ಅದನ್ನು ನೀಡಿ ಕೊಂಡೊಯ್ಯುವುದು ಕಾಣಿಸುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಇದಕ್ಕೆ ಸದಾ ಬೇಡಿಕೆ ಇದ್ದೇ ಇರುತ್ತದೆ. ಹಿಂದೆ ಇದರ ಹಿಂದೆ ಮೂಢನಂಬಿಕೆಯ ಕಥೆಯೂ ಹರಿದಾಡುತ್ತಿತ್ತು. ಅದು ಏನೆಂದರೆ ಬಳ್ಳಿಯಾಗಿ ಹರಡಿ ಬೆಳೆಯುದರ ಜೊತೆಗೆ ನೆಲದಲ್ಲಿ ಗೆಡ್ಡೆಯ ಮೂಲಕ ಭೂಮಿಯಿಂದ ನೀರು ಗೊಬ್ಬರವನ್ನು ಹೀರಿಕೊಂಡು ಬೆಳೆಯುತ್ತದೆ. ಬಳ್ಳಿಯ ಬೆಳವಣಿಗೆಗೆ ತಕ್ಕಂತೆ ನೆಲದಲ್ಲಿರುವ ಅದರ ಗೆಡ್ಡೆ ದಪ್ಪವಾಗುತ್ತಾ ಹೋಗುತ್ತದೆ. ಈ ಗೆಡ್ಡೆ ದಪ್ಪವಾಗಿ ಗಿಡ ನೆಟ್ಟವನ ತಲೆಯಷ್ಟು ಗಾತ್ರವಾದರೆ, ಆತ ಸಾಯುತ್ತಾನಂತೆ.
ಇದು ಔಷಧೀಯ ಗುಣಗಳ ಆಗರ
ಹೀಗೊಂದು ಮಾತು ಪ್ರಚಲಿತದಲ್ಲಿತ್ತು. ಆದರೆ ಕೆಲವರು ತಲೆಗೆ ಬುಟ್ಟಿ ಹಾಕಿಕೊಂಡು ನೆಡುತ್ತಿದ್ದರಂತೆ. ಹಾಗೆ ಏಕೆ ಮಾಡುತ್ತಿದ್ದರೆಂದರೆ ಬುಟ್ಟಿಯಷ್ಟು ದೊಡ್ಡದಾಗಿ ಮಡಹಾಗಲದ ಗೆಡ್ಡೆ ಬೆಳೆಯಲ್ಲ ಹೀಗಾಗಿ ತಮಗೇನು ಆಗಲ್ಲ ಎಂಬುದು ಅವರ ನಂಬಿಕೆಯಾಗಿತ್ತು. ಇದೆಲ್ಲವೂ ಈಗ ತಮಾಷೆಯಾಗಿ ಕಂಡರೂ ಅವತ್ತಿನ ಜನರ ನಂಬಿಕೆ ಹಾಗಿತ್ತು. ಇದರ ವಂಶಾಭಿವೃದ್ಧಿಯನ್ನು ಗೆಡ್ಡೆ ಮತ್ತು ಬೀಜದಿಂದ ಮಾಡಬಹುದಾಗಿದೆ. ಕಾಡಿನಲ್ಲಾದರೆ ಅದು ಅಲ್ಲಲ್ಲಿ ಬಿದ್ದು ಅದರ ಪಾಡಿಗೆ ಬೆಳೆಯುತ್ತದೆ.

ಬಳ್ಳಿಗಳು ಹಬ್ಬಿ ಹಸಿರು ಬಣ್ಣದ ಹೂಗಳನ್ನು ಬಿಡುತ್ತದೆಯಲ್ಲದೆ, ಕಾಯಿ ಹಸಿರು ಬಣ್ಣವನ್ನು ಹೊಂದಿದ್ದು ಮೇಲ್ಮೈ ಮುಳ್ಳಿನಂತೆ ಕಾಣುತ್ತದೆ. ಹಣ್ಣಾದರೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಬಳ್ಳಿ ಒಣಗಿ ಗೆಡ್ಡೆ ಮಣ್ಣಿನಡಿಯಲ್ಲಿ ಸುಪ್ತಾವಸ್ಥೆಯಲ್ಲಿರುತ್ತದೆ. ಮಳೆ ಬೀಳುತ್ತಿದ್ದಂತೆಯೇ ಚಿಗುರಿ ಮರಗಳನ್ನು ಆಸರೆಯನ್ನಾಗಿಸಿಕೊಂಡು ಹಬ್ಬಿ ಬೆಳೆಯುತ್ತದೆ. ಬಳಿಕ ಹೂ ಬಿಟ್ಟು ಕಾಯಿಯಾಗುತ್ತದೆ. ಈ ಕಾಯಿಯನ್ನು ಮನುಷ್ಯರು ನೋಡಿ ಅದನ್ನು ಕೀಳದಿದ್ದರೆ, ಅದನ್ನು ಕಾಡು ಹಂದಿ, ಪಕ್ಷಿಗಳು ತಿಂದು ಹಾಕುತ್ತವೆ. ಮಡಹಾಗಲದಲ್ಲಿ ಔಷಧೀಯ ಗುಣಗಳಿದ್ದು, ವಿಟಮಿನ್ನ ಆಗರವಾಗಿದೆ. ಮೂಲವ್ಯಾಧಿ ಮತ್ತು ಮಧುಮೇಹಕ್ಕೆ ರಾಮಬಾಣವಾಗಿದೆ.
ಮಡಹಾಗಲದ ಕೃಷಿಗೆ ಹೆಚ್ಚಿನ ಉತ್ತೇಜನ
ಕಾಡಿನಲ್ಲಿ ಬೆಳೆಯುವ ಮಡಹಾಗಲವನ್ನು ತಂದು ಕೃಷಿ ಮಾಡುವುದು ಕಷ್ಟವಾಗಿದೆ. ಆದರೆ ಇಂತಹದ್ದೇ ತಳಿಯನ್ನು ಅಸ್ಸಾಂನಿಂದ ತಂದು ಕೊಡಗಿನಲ್ಲಿ ಬೆಳೆಸುವ ಪ್ರಯತ್ನವನ್ನು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಮಾಡಿದ್ದು, ಇದರಲ್ಲಿ ಯಶಸ್ವಿಯೂ ಆಗಿದೆ. ಕೊಡಗಿನ ಮಂದಿ ಮಡಹಾಗಲವನ್ನು ಹೆಚ್ಚು ಇಷ್ಟಪಡುವುದನ್ನು ಅರಿತ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಕೇಂದ್ರದ ಮೇಲ್ವಿಚಾರಕರಾದ ಡಾ. ಭಾರತಿ ಅವರು 2008ರಲ್ಲಿ ಅಸ್ಸಾಂನಲ್ಲಿ ಬೆಳೆಯುತ್ತಿದ್ದ ತಳಿಯನ್ನು ತಂದು ಕೊಡಗಿನ ವಾತಾವರಣದಲ್ಲಿ ಬೆಳೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಡಿನಲ್ಲಿರುವ ಮಡಹಾಗಲಕ್ಕೂ ಅಸ್ಸಾಂನಿಂದ ತಂದು ವೃದ್ಧಿ ಮಾಡಿದ ಮಡಹಾಗಲಕ್ಕೂ ಹೆಚ್ಚು ವ್ಯತ್ಯಾಸ ಕಂಡು ಬರದಿದ್ದರೂ ಕಾಡಿನಲ್ಲಿ ಬೆಳೆಯುವ ತಳಿಯಲ್ಲಿ ಪರಾಗಸ್ಪರ್ಶಕ್ರಿಯೆ ಸ್ವಾಭಾವಿಕವಾಗಿದ್ದರೆ, ಅಸ್ಸಾಂನಿಂದ ತಂದು ವೃದ್ಧಿ ಮಾಡಿರುವ ತಳಿಯಲ್ಲಿ ಗಂಡು ಹೂವನ್ನು ಹೆಣ್ಣು ಹೂವಿಗೆ ಸ್ಪರ್ಶಿಸಿ ಕೃತಕ ಪರಾಗಸ್ಪರ್ಶ ಮಾಡಬೇಕಾದ ಅಗತ್ಯವಿದೆ. ಇನ್ನು ಅಸ್ಸಾಂ ತಳಿಯ ಕಾಯಿ ಗಾತ್ರದಲ್ಲಿ ದೊಡ್ಡದಾಗಿದ್ದು, ತೂಕವೂ ಇದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಮುಂದಿನ ದಿನಗಳಲ್ಲಿ ಇದನ್ನು ರೈತರು ಬೆಳೆಯುವಂತಾದರೆ ಒಂದಷ್ಟು ಆದಾಯ ಬರುವುದಲ್ಲದೆ ಇದನ್ನು ಇಷ್ಟಪಡುವವರೆಲ್ಲರಿಗೂ ಸಿಗುವಂತಾಗುವುದರಲ್ಲಿ ಎರಡು ಮಾತಿಲ್ಲ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications