ಮಡಿಕೇರಿ: ಅರಣ್ಯ ಇಲಾಖೆ ತೋಡಿದ ಇಂಗುಗುಂಡಿಯೇ ಗುಡ್ಡ ಕುಸಿತಕ್ಕೆ ಕಾರಣವಾಯಿತಾ?
ಮಡಿಕೇರಿ, ಆಗಸ್ಟ್ 10: ಕೊಡಗಿನಲ್ಲಿ ಸಂಭವಿಸುತ್ತಿರುವ ಭೂಕುಸಿತ ಇಲ್ಲಿನ ಜನರನ್ನು ಭಯಭೀತರನ್ನಾಗಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ಪ್ರತಿವರ್ಷವೂ ಗುಡ್ಡಕುಸಿತದಿಂದ ಪ್ರಾಣ ಹಾನಿ ಸಂಭವಿಸುತ್ತಿದ್ದು, ಮಳೆಗಾಲ ಅದರಲ್ಲೂ ಆಗಸ್ಟ್ ತಿಂಗಳು ಮೃತ್ಯುವಾಗಿ ಕಾಡುತ್ತಿದೆ.
2018ರಲ್ಲಿ ಮೊದಲ ಬಾರಿಗೆ ಭೂಕುಸಿತ ಸಂಭವಿಸಿದಾಗ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಬಹುತೇಕ ಗ್ರಾಮಗಳು ನಾಶವಾಗಿ ಪ್ರಾಣ ಹಾನಿಯೂ ಸಂಭವಿಸಿತ್ತು. 2019ರಲ್ಲಿ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ ಯಾವುದೇ ಅನಾಹುತ ಸಂಭವಿಸದಿದ್ದರೂ ವೀರಾಜಪೇಟೆ ತಾಲೂಕಿನ ತೋರಗ್ರಾಮದಲ್ಲಿ ಭೂಕುಸಿತ ಸಂಭವಿಸಿ ಪ್ರಾಣಹಾನಿ ಸಂಭವಿಸಿತ್ತು. ಈ ವರ್ಷ ಕಾವೇರಿ ನದಿ ಉಗಮಸ್ಥಾನದಲ್ಲಿ ಭೂಕುಸಿತ ಸಂಭವಿಸಿದ್ದು ಆತಂಕಕ್ಕೆ ಕಾರಣವಾಗಿದೆ.

ಬ್ರಹ್ಮಗಿರಿ ಬೆಟ್ಟದಲ್ಲಿ ಇಂಗು ಗುಂಡಿ ನಿರ್ಮಾಣ
ಕೊಡಗಿನಲ್ಲಿ ಕಿಲೋ ಮೀಟರ್ ಗಟ್ಟಲೆ ಭೂಕುಸಿತ ಸಂಭವಿಸಲು ಮರಕಡಿತ ಮತ್ತು ರೆಸಾರ್ಟ್ ನಿರ್ಮಾಣಕ್ಕಾಗಿ ನಿರ್ಮಿಸಿದ ರಸ್ತೆ ಮತ್ತಿತರ ಕಾಮಗಾರಿ, ಮತ್ತೆ ಕೆಲವು ಕಡೆ ಕಲ್ಲು ಗಣಿಗಾರಿಕೆ ನಡೆಸಿದ್ದು ಕಾರಣ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ತಲಕಾವೇರಿಯಲ್ಲಿ ಸಂಭವಿಸಿದ ಭೂಕುಸಿತಕ್ಕೆ ಕಾರಣವೇನು ಎಂಬುದನ್ನು ನೋಡಿದರೆ ಜನ ಅರಣ್ಯ ಇಲಾಖೆಯತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.
ಕರ್ನಾಟಕದ ಈ ಜಿಲ್ಲೆಗಳಲ್ಲಿ ಇನ್ನೂ ಐದು ದಿನ ಮಳೆಯೋ ಮಳೆ!

ಅವೈಜ್ಞಾನಿಕ ಇಂಗುಗುಂಡಿ ನಿರ್ಮಾಣ
ತಲಕಾವೇರಿ ಪವಿತ್ರ ತಾಣವಾಗಿದ್ದು, ಹಿಂದೆ ಕುರುಚಲು ಗಿಡಗಳಿಂದ ಕೂಡಿತ್ತು. ಬ್ರಹ್ಮಗಿರಿ ಬೆಟ್ಟವನ್ನು ಸಪ್ತ ಋಷಿಗಳು ತಪಸ್ಸು ಮಾಡಿದ ಪವಿತ್ರ ಸ್ಥಳ ಎನ್ನಲಾಗುತ್ತಿತ್ತು. ಆದರೆ ಕೇವಲ ಏಳು ಸೆಂಟನ್ನು ಬಿಟ್ಟು, ಅದಕ್ಕೂ ಪ್ರವಾಸಿ ತಾಣದಂತೆ ಬೇಲಿ ಹಾಕಿ, ಬಾಕಿ ಬೆಟ್ಟವನೆಲ್ಲ ಕಳೆದ ಮೂರು ವರ್ಷದಿಂದ ಹಿಟಾಚಿ ಯಂತ್ರವನ್ನು ಬಳಸಿಕೊಂಡು, ದೇವಸ್ಥಾನದ ಕೆಳಗಿನ ಗೇಟಿನ ಬದಿಯಿಂದ ಬೆಟ್ಟವನ್ನು ಕೊರೆಯಲಾಗಿತ್ತು. ರಸ್ತೆ ಮಾಡುತ್ತ ಬ್ರಹ್ಮಗಿರಿಯ ಮೇಲ್ಭಾಗಕ್ಕೆ ಸಾಗಿ ಮನಸ್ಸಿಗೆ ತೋಚಿದಂತೆ ಅಡ್ಡಾದಿಡ್ಡಿಯಾಗಿ ಯಂತ್ರವನ್ನು ಬಳಸಿಕೊಂಡು ಇಂಗು ಗುಂಡಿಯನ್ನು ಅರಣ್ಯಇಲಾಖೆ ವತಿಯಿಂದ ತೋಡಲಾಯಿತು. ಅದು ಸಾಲದೇ ಪ್ರಕೃತಿದತ್ತವಾದ ಶೋಲಾ ಅರಣ್ಯ ಬೆಳೆವ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಆ ಜಾಗದಲ್ಲಿ ಸಂಬಂಧವಿಲ್ಲದ ಅಂದರೆ ಬೆಳೆಯಲಾರದಂತ ಗಿಡಗಳನ್ನು ನೆಟ್ಟರು. ಇದೆಲ್ಲವೂ ಅರಣ್ಯ ಇಲಾಖೆ ಪ್ರಕಾರ ಹಸಿರೀಕರಣ ಮಾಡುವುದಾಗಿತ್ತಾದರೂ ಅದರ ಪರಿಣಾಮಗಳು ಇದೀಗ ಗೋಚರಿಸುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಅರಣ್ಯ ಇಲಾಖೆ ವಿರುದ್ಧವೇ ಆರೋಪ
ತಲಕಾವೇರಿ ವ್ಯಾಪ್ತಿಯ ಬೆಟ್ಟಗಳಲ್ಲಿ ಇಂಗುಗುಂಡಿ ತೋಡುವ ಅಗತ್ಯವೂ ಇರಲಿಲ್ಲ. ಕಾರಣ ಇಲ್ಲಿ ಉತ್ತಮ ಮಳೆಯಾಗುತ್ತಿತ್ತಲ್ಲದೆ, ಬೇಸಿಗೆಯಲ್ಲಿಯೂ ಮಳೆ ಬರುತ್ತಿದ್ದರಿಂದ ತೊಂದರೆಯಾಗುತ್ತಿರಲಿಲ್ಲ. ಆದರೆ ಕಳೆದ ವರ್ಷ ಬೆಟ್ಟದಲ್ಲಿ ಕೊರೆದಿರುವ ಇಂಗುಗುಂಡಿ ಹಾಗೂ ರಸ್ತೆಯಲ್ಲಿ ಕಳೆದ ಎರಡು ವರ್ಷಗಳ ನೀರು ತುಂಬಿ ಭೂಮಿಯೊಳಗೆ ತೇವಾಂಶ ಸಂಗ್ರಹವಾಗತೊಡಗಿತ್ತು. ಅದರ ಪರಿಣಾಮ ಕಳೆದ ವರ್ಷ ಮಳೆಗಾಲದಲ್ಲಿ ಈಗ ಭೂಕುಸಿತಕ್ಕೆ ಸಿಲುಕಿದ್ದ, ಕುಟುಂಬ ವಾಸಿಸುತ್ತಿದ್ದ ಮನೆಯ ಮೇಲ್ಬಾಗದ ನೇರ ರಸ್ತೆಯ ಬದಿಯಲ್ಲಿ ಸಣ್ಣ ಪ್ರಮಾಣದ ಬರೆ ಕುಸಿತವಾಗಿತ್ತು. ಜತೆಗೆ ಬೆಟ್ಟದಲ್ಲಿ ಬಿರುಕು ಕೂಡ ಕಂಡು ಬಂದಿತ್ತಲ್ಲದೆ, ಮುಂದೊಂದು ದಿನ ಭೂಕುಸಿತ ಸಂಭವಿಸುತ್ತದೆ ಎಂಬ ಮುನ್ಸೂಚನೆ ನೀಡಿತ್ತು. ಬ್ರಹ್ಮಗಿರಿ ಬೆಟ್ಟ ಕುಸಿಯಲು ಅರಣ್ಯ ಇಲಾಖೆಯೇ ಕಾರಣ ಎಂಬುದನ್ನು ಶಾಸಕ ಕೆ.ಜಿ.ಬೋಪಯ್ಯ ಈಗಾಗಲೇ ಆರೋಪಿಸಿರುವುದನ್ನು ಸ್ಮರಿಸಬಹುದಾಗಿದೆ.
ತಲಕಾವೇರಿ ಬ್ರಹ್ಮಗಿರಿಯಲ್ಲಿ ಭೂಕುಸಿತ; ಒಬ್ಬರ ಮೃತದೇಹ ಪತ್ತೆ

ಜಿಲ್ಲೆಯ ಹಲವು ಗ್ರಾಮಗಳು ಜಲಾವೃತ
ಈ ಬಾರಿ ಜನವರಿಯಿಂದ ಇಲ್ಲಿವರೆಗೆ ಉತ್ತಮ ಮಳೆಯಾಗುತ್ತಾ ಬಂದಿತ್ತು. ಜೂನ್ ಮತ್ತು ಜುಲೈ ತಿಂಗಳು ಮುಂಗಾರು ಮಳೆಯ ಕಾಲವಾಗಿದ್ದರೂ ಮಳೆ ಧಾರಾಕಾರವಾಗಿ ಸುರಿಯದೆ ಸಾಧಾರಣವಾಗಿ ಸುರಿದಿತ್ತು. ಇದರಿಂದ ಯಾವುದೇ ಅನಾಹುತ ಸಂಭವಿಸದೆ ಸುರಕ್ಷಿತವಾಗಿರುತ್ತೇವೆ ಎಂದು ಜಿಲ್ಲೆಯ ಜನ ನಂಬಿದ್ದರು. ಆದರೆ ಕಳೆದ ಕೆಲ ದಿನಗಳಲ್ಲಿ ಆಶ್ಲೇಷ ಮಳೆ ಅಬ್ಬರಿಸತೊಡಗಿದ್ದು ಮಳೆ ಧಾರಾಕಾರವಾಗಿಯೇ ಸುರಿಯುತ್ತಿದೆ. ಇನ್ನೊಂದೆಡೆ ಮಡಿಕೇರಿ ಮತ್ತು ಮಂಗಳೂರು ಹೆದ್ದಾರಿಯ ಜೋಡುಪಾಲದ ಬಳಿ ರಸ್ತೆ ಕುಸಿದಿದ್ದರೆ, ಕುಶಾಲನಗರ ಬಳಿ ತಾವರೆಕೆರೆ ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಸಿದ್ದಾಪುರ ಬಳಿಯ ನೆಲ್ಯಹುದಿಕೇರಿ ಮತ್ತು ಕರಡಿಗೋಡು, ಹೊದ್ದೂರು, ಎಮ್ಮೆಮಾಡು, ಕೊಟ್ಟಮುಡಿ, ಬೇತ್ರಿ, ಕೊಂಡಂಗೇರಿ, ಪರಂಬು, ಕಟ್ಟೆಮಾಡು ಸೇರಿದಂತೆ ಹಲವು ಕಡೆಗಳಲ್ಲಿ ಮನೆಗಳು ಜಲಾವೃತಗೊಂಡಿದೆ.