ಶಾಲೆ ಮೊದಲ ದಿನ; ಎತ್ತಿನ ಗಾಡಿಯಲ್ಲಿ ಬಂದ ಡಿಸಿ, ವಿದ್ಯಾರ್ಥಿಗಳು
ಮಡಿಕೇರಿ, ಜೂನ್ 01; ಕರ್ನಾಟಕದಲ್ಲಿ 2023-24ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದೆ. ಶಾಲಾ ಪ್ರಾರಂಭೋತ್ಸವದಲ್ಲಿ ಮಕ್ಕಳು, ಪೋಷಕರು, ಅಧಿಕಾರಿಗಳು ಭಾಗಿಯಾದರು. ಕೊಡಗು ಜಿಲ್ಲೆಯ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಗಮನ ಸೆಳೆಯಿತು.
ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎಸ್‍ಡಿಎಂಸಿ ಸಹಯೋಗದಲ್ಲಿ ದಾಖಲಾತಿ ಆಂದೋಲನ ಮತ್ತು ಶಾಲಾ ಪ್ರಾರಂಭೋತ್ಸವ ಆಯೋಜಿಸಲಾಗಿತ್ತು.

ಕೊಡಗು ಜಿಲ್ಲಾಧಿಕಾರಿ ಡಾ. ಬಿ. ಸಿ. ಸತೀಶ ಗ್ರಾಮದ ಮುಖ್ಯ ರಸ್ತೆಯಿಂದ ಗ್ರಾಮದ ಬೀದಿ ಮೂಲಕ ಮಕ್ಕಳ ಜೊತೆ ಎತ್ತಿನಗಾಡಿಯಲ್ಲಿ ಶಾಲೆಗೆ ಆಗಮಿಸಿದರು. ಶಾಲೆ ಆವರಣದಲ್ಲಿ ಗಿಡನೆಟ್ಟ ಜಿಲ್ಲಾಧಿಕಾರಿಗಳು ಮಕ್ಕಳಿಗೆ ಸಿಹಿಯೊಂದಿಗೆ ಉಚಿತ ಪಠ್ಯ ಪುಸ್ತಕ ಹಾಗೂ ಬಟ್ಟೆ ವಿತರಿಸುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ಕೊಟ್ಟರು.
ಬಾಲ್ಯ ನೆನಪು ಮಾಡಿಕೊಂಡ ಜಿಲ್ಲಾಧಿಕಾರಿಗಳು; ಶಾಲಾ ಪ್ರಾರಂಭೋತ್ಸವದೊಂದಿಗೆ ಮಧ್ಯಾಹ್ನದ ಬಿಸಿಯೂಟಕ್ಕೂ ಚಾಲನೆ ನೀಡಲಾಯಿತು. ಮಕ್ಕಳಿಗೆ ಪಾಯಸದೊಂದಿಗೆ ಬಿಸಿಯೂಟ ವಿತರಿಸಲಾಯಿತು.

ಡಿಸಿ ಡಾ ಬಿ. ಸಿ. ಸತೀಶ, ಶಾಲಾ ಮಕ್ಕಳೊಂದಿಗೆ ತಮ್ಮ ಬಾಲ್ಯದ ಶಾಲಾ ದಿನಗಳನ್ನು ಮೆಲುಕು ಹಾಕುತ್ತಾ, "ಮಕ್ಕಳು ಆಟ, ಪಾಠದೊಂದಿಗೆ ಸಂತಸದ ಕಲಿಕೆಯಲ್ಲಿ ತೊಡಗುವ ಮೂಲಕ ಚೆನ್ನಾಗಿ ಓದಿ ತಂದೆ-ತಾಯಿಗೆ ಉತ್ತಮ ಹೆಸರು ತರಬೇಕು" ಎಂದು ಕರೆ ನೀಡಿದರು.
"ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಮೂಲಕ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಹಾಗೂ ಕಲಿಕೆಯೊಂದಿಗೆ ಫೋಷಕರಿಗೆ ಗೌರವ ಸಲ್ಲಿಸಬೇಕು. ಮಕ್ಕಳು ಆಟ-ಪಾಠದೊಂದಿಗೆ ಉತ್ತಮ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು" ಎಂದರು.
ಡಿಡಿಪಿಐ ಸಿ. ರಂಗಧಾಮಯ್ಯ ಮಾತನಾಡಿ, "ಸರ್ಕಾರ ವಿದ್ಯಾರ್ಥಿಗಳ ಕಲಿಕೆಗೆ ಶಾಲಾ ಪ್ರಾರಂಭದಲ್ಲೇ ಉಚಿತ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ನೀಡುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸಿ ಅವರಿಗೆ ಉತ್ತಮ ಶಿಕ್ಷಣ ಕೊಡಿಸಬೇಕು" ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ವಿ. ಸುರೇಶ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಲಾಗುತ್ತಿದೆ. ಪ್ರತಿ ಮಗು ಕೂಡ ಶಿಕ್ಷಣದಿಂದ ವಂಚಿತವಾಗದಂತೆ ಸರ್ಕಾರ ಕಾಳಜಿ ವಹಿಸುತ್ತಿದೆ. ಈ ಪ್ರೌಢಶಾಲೆಯಲ್ಲಿ ಉತ್ತಮ ಶಿಕ್ಷಕರ ತಂಡವಿದ್ದು, ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿರುವುದಕ್ಕೆ ಶ್ಲಾಘಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್, ಎಸ್‍ಡಿಎಂಸಿ ಅಧ್ಯಕ್ಷ ಎಸ್. ಎನ್. ಪುಟ್ಟಸ್ವಾಮಿ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್‍ಎಂಎಸ್‍ಎ) ಯೋಜನೆಯ ಉಪ ಯೋಜನಾ ಸಮನ್ವಯಾಧಿಕಾರಿ ಸೌಮ್ಯ ಮುಂತಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಡಾ. ಬಿ. ಸಿ. ಸತೀಶ ಭವಿಷ್ಯದಲ್ಲಿ ಏನು ಆಗಬೇಕು? ಎಂದರು. ಮಕ್ಕಳು ಸೈನಿಕ, ಇಂಜಿನಿಯರ್ ಇತ್ಯಾದಿ ಆಗಬೇಕು ಎಂದರು. ಮಕ್ಕಳು ಉತ್ತಮ ಹಾಗೂ ಉನ್ನತ ವಿದ್ಯಾಭ್ಯಾಸ ಮಾಡಿದರೆ ಭವಿಷ್ಯದಲ್ಲಿ ಉತ್ತಮ ಹುದ್ದೆ ಅಲಂಕರಿಸಬಹುದು. ಇಂತಹ ಹುದ್ದೆ ಪಡೆಯಲು ಉತ್ತಮ ಶಿಕ್ಷಣ ಹೊಂದಬೇಕು. ಮಕ್ಕಳು ಆಟಕ್ಕೆ ನೀಡುವ ಸಮಯವನ್ನು ಕಲಿಕೆಗೂ ನೀಡಬೇಕು ಎಂದರು.












Click it and Unblock the Notifications