ಕೊಡಗಿನಲ್ಲಿ ಬಿಜೆಪಿ ಆಟ ಮುಗಿಸಲು ಕಾಂಗ್ರೆಸ್ ಭರ್ಜರಿ ತಯಾರಿ ಹೇಗಿದೆ ಗೊತ್ತಾ..?
ಮಡಿಕೇರಿ, ಮೇ 16: ಕೊಡಗಿನಲ್ಲಿ ಕಾಂಗ್ರೆಸ್ ಗಾಳಿ ಬೀಸುತ್ತಿದೆಯಾ? ಹೀಗೆಂಬ ಪ್ರಶ್ನೆಗೆ ಉತ್ತರಗಳನ್ನು ಹುಡುಕುತ್ತಾ ಹೋದರೆ ನಿಜ ಎಂಬಂತೆ ಕಾಣಿಸುತ್ತಿದೆ. ಈಗಾಗಲೇ ಬಹುತೇಕ ಬಿಜೆಪಿ ನಾಯಕರು, ಕಾರ್ಯಕರ್ತರು ಬೂತ್ ಮಟ್ಟದಿಂದಲೇ ಕಾಂಗ್ರೆಸ್ ನತ್ತ ಮುಖ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಪಕ್ಷಾಂತರ ಪರ್ವಗಳು ಜೋರಾಗಿ ನಡೆಯುತ್ತಿವೆ. ಇದೆಲ್ಲವೂ ಬಿಜೆಪಿಯ ಭದ್ರಕೋಟೆಯನ್ನು ಛಿದ್ರ ಮಾಡಲು ತಯಾರಿ ಎಂಬಂತೆ ತೋರುತ್ತಿದೆ.
ಕಳೆದ ವಿಧಾನಸಭಾ ಚುನಾವಣೆ ಬಳಿಕ ಜಿಲ್ಲೆಯಲ್ಲಿ ಕಾಂಗ್ರೆಸ್ ಪರವಾದ ಗಾಳಿ ಬೀಸಲಾರಂಭಿಸಿವೆ. ಇದಕ್ಕೆ ತಕ್ಕಂತೆ ಮಡಿಕೇರಿ ಮತ್ತು ವೀರಾಜಪೇಟೆ ಕ್ಷೇತ್ರಗಳಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿರುವ ಡಾ.ಮಂಥರಗೌಡ ಮತ್ತು ಎ.ಎಸ್.ಪೊನ್ನಣ್ಣ ಅವರು ಜಿಲ್ಲೆಯುದ್ದಕ್ಕೂ ಪಾದರಸದಂತೆ ಓಡಾಡುತ್ತಿದ್ದಾರೆ. ಎಲ್ಲ ಕಾರ್ಯಕ್ರಮಗಳಿಗೆ ತೆರಳುತ್ತಿದ್ದಾರೆ. ಅಹಿತಕರ ಘಟನೆ ನಡೆದಾಗ ಸ್ಥಳಕ್ಕೆ ತೆರಳಿ ಸಾಂತ್ವನ ಹೇಳುತ್ತಿದ್ದಾರೆ. ಸದ್ಯ ಜನರ ನಡುವೆ ಇರುವ ಮೂಲಕ ಹತ್ತಿರವಾಗುತ್ತಿದ್ದಾರೆ.

ಜಿಲ್ಲೆಯ ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಜನಪ್ರತಿನಿಧಿ ಬೇಕಿತ್ತು. ಅದನ್ನು ಇಬ್ಬರು ಶಾಸಕರು ಮಾಡುತ್ತಿದ್ದಾರೆ. ಹೀಗಾಗಿ ಯಾವ ಪಕ್ಷದ ಶಾಸಕರು ಎಂಬುದು ನಮಗೆ ಮುಖ್ಯವಲ್ಲ ನಮ್ಮ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಅದನ್ನು ಶಾಸಕರು ಮಾಡುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ. ಅದಕ್ಕೆ ತಕ್ಕಂತೆ ಶಾಸಕರಿಬ್ಬರು ಸಾರ್ವಜನಿಕ ವಲಯದಲ್ಲಿ ಹೆಚ್ಚು ಹೆಚ್ಚಾಗಿ ಗುರುತಿಸಿಕೊಳ್ಳುತ್ತಿದ್ದಾರೆ.
ಬಿಜೆಪಿ ಪ್ರಾಬಲ್ಯ ಹೊಂದಿದ್ದ ಕೊಡಗು
ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಗ್ರಾಮಪಂಚಾಯಿತಿ ಮಟ್ಟದಿಂದ ಆರಂಭವಾಗಿ ಸಂಸದರ ತನಕ ಬಿಜೆಪಿಯ ಪ್ರಾಬಲ್ಯವಿತ್ತು. ಒಂದೆರಡು ದಶಕಗಳಿಂದ ಬಿಜೆಪಿಯ ಇಬ್ಬರು ಎಂಎಲ್ ಎಗಳು ಕಾರುಬಾರು ನಡೆಸಿಕೊಂಡು ಬಂದಿದ್ದರು. ಕೆಲಸ ಮಾಡಲಿ ಮಾಡದಿರಲಿ ಬಿಜೆಪಿ ಭದ್ರಕೋಟೆಯಾಗಿರುವುದರಿಂದ ಮತದಾರರು ಮತಹಾಕುತ್ತಾರೆ ಎಂಬ ನಂಬಿಕೆಯಿತ್ತು. ಚುನಾವಣೆ ಹೊತ್ತಿಗಾಗಲೇ ಬೇರೆಯವರಿಗೆ ಅವಕಾಶ ನೀಡಬೇಕೆಂಬ ಕೂಗು ಕೇಳಿ ಬಂದಿತ್ತು. ಆದರೆ ಅವತ್ತಿನ ಶಾಸಕರಾಗಿದ್ದ ಅಪ್ಪಚ್ಚುರಂಜನ್ ಮತ್ತು ಕೆ.ಜಿ.ಬೋಪಯ್ಯ ಅವರನ್ನು ಹೊರತು ಪಡಿಸಿದರೆ ಎರಡನೇ ಹಂತದ ನಾಯಕರನ್ನು ಪಕ್ಷ ಬೆಳೆಸಿರಲಿಲ್ಲ.
ಇನ್ನು ಜಿಲ್ಲೆಯೊಳಗೆ ಮತ್ತು ಪಕ್ಷದೊಳಗೆ ವಿರೋಧಿ ಅಲೆ ಎದ್ದಿತ್ತಾದರೂ ಅದಕ್ಕೆ ಸೊಪ್ಪು ಹಾಕದೆ ಬಿಜೆಪಿಯಿಂದ ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿತ್ತು. ಇದರ ನಡುವೆ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳು ಜಿಲ್ಲೆಯ ಬಡ ಕೂಲಿ ಕಾರ್ಮಿಕರನ್ನು ಆಕರ್ಷಿಸಿತ್ತು. ಜತೆಗೆ ಒಳಗೊಳಗೆ ಜಾತಿಗೆ ಸಂಬಂಧಿಸಿದ ರಾಜಕಾರಣವೂ ಕೆಲಸ ಮಾಡಿತ್ತು. ಹೀಗಾಗಿ ಹಾಲಿ ಶಾಸಕರು ಸೋಲುವಂತಾಯಿತು. ಯಾರೂ ನಂಬದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನ ಶಾಸಕರಿಬ್ಬರು ಆರಿಸಿ ಬಂದಿದ್ದರು.

ಜಿಲ್ಲೆಯ ಜನ ಬಿಜೆಪಿ ಪರ ಇದ್ದರಾ?
ಯಾವಾಗ ಕಾಂಗ್ರೆಸ್ ಶಾಸಕರು ಆರಿಸಿ ಬಂದರೋ ಜಿಲ್ಲೆಯಲ್ಲಿ ಮಂಕಾಗಿದ್ದ ಕಾಂಗ್ರೆಸ್ ಚೇತರಿಸಿಕೊಳ್ಳುವಂತಾಗಿದೆ. ಜತೆಗೆ ಶಾಸಕರು ಕೂಡ ಜಿಲ್ಲೆಯಲ್ಲಿ ಕಾಂಗ್ರೆಸ್ ಯುಗವನ್ನು ಮರಳಿ ತರುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹಲವು ಪಂಚಾಯಿತಿಗಳ ಅಧಿಕಾರವನ್ನು ಕಾಂಗ್ರೆಸ್ ದೊರೆಯುವಂತೆ ಮಾಡಿದ್ದಾರೆ. ಇಷ್ಟೇ ಅಲ್ಲದೆ ಬೇರೆ ಪಕ್ಷದಿಂದ ನಾಯಕರನ್ನು ಕಾಂಗ್ರೆಸ್ ಗೆ ಎಳೆದು ತರುತ್ತಿದ್ದಾರೆ. ಹೀಗಾಗಿ ಆಗಾಗ್ಗೆ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯುತ್ತಿವೆ.
ಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿಯಿದೆ ಎನ್ನಲಾಗುತ್ತಿಲ್ಲ. ಕಳೆದ ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿಯ ಜಿಲ್ಲಾ ನಾಯಕರು ಮೌನಕ್ಕೆ ಜಾರಿದಂತೆ ಕಾಣಿಸುತ್ತಿದೆ. ಮತ್ತೆ ಪಕ್ಷವನ್ನು ಜಿಲ್ಲೆಯಲ್ಲಿ ಭದ್ರಪಡಿಸಲು ಪ್ರಯತ್ನಗಳು ನಡೆದಂತೆ ಕಾಣಿಸುತ್ತಿಲ್ಲ. ಇತ್ತೀಚೆಗಿನ ಲೋಕಸಭಾ ಚುನಾವಣೆಯಲ್ಲಿ ನಾಯಕರು ಒಟ್ಟಾಗಿ ಪ್ರಚಾರ ನಡೆಸಿದ್ದಾರೆ. ಜಿಲ್ಲೆಯ ಮತದಾರರು ಇನ್ನೂ ಕೂಡ ಬಿಜೆಪಿ ಪರವಾಗಿಯೇ ಇದ್ದಾರೆ ಎಂಬ ಸಂದೇಶವನ್ನು ಸಾರಿದ್ದಾರೆ. ಆದರೆ ನಿಜವಾಗಿಯೂ ಜಿಲ್ಲೆಯ ಮತದಾರರು ಬಿಜೆಪಿ ಜತೆಗೆ ಇದ್ದಾರಾ? ಅಥವಾ ಕಾಂಗ್ರೆಸ್ ನ ಕಡೆಗೆ ಮುಖ ಮಾಡಿದ್ದಾರಾ?

ಲೋಕ ಫಲಿತಾಂಶ ಏನು ಹೇಳಲಿದೆ?
ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಜೂ.4ರಂದು ಲೋಕಸಭಾ ಚುನಾವಣಾ ಫಲಿತಾಂಶ ಬರಬೇಕಾಗಿದೆ. ಜಿಲ್ಲೆಯಲ್ಲಿ ಮೋದಿಪರ ಅಲೆಯಿದ್ದು, ಮೋದಿಯನ್ನು ಪ್ರೀತಿಸುವವರು, ಬೆಂಬಲಿಸುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಜಿಲ್ಲೆಯ ಮತದಾರರು ಬಿಜೆಪಿಯಿಂದ ದೂರ ಸರಿದಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಮತಚಲಾಯಿಸಿದ್ದಾರೆ ಎಂಬ ವಿಶ್ವಾಸವನ್ನು ಬಿಜೆಪಿ ಬೆಂಬಲಿಗರು ಮಾಡುತ್ತಿದ್ದಾರೆ. ಇದು ನಿಜನಾ ಎಂಬುದು ಗೊತ್ತಾಗಬೇಕಾದರೆ ಫಲಿತಾಂಶದ ತನಕ ಕಾಯಬೇಕಾಗಿದೆ.
ಒಟ್ಟಾರೆ ಕೊಡಗಿನಲ್ಲಿ ಬಿಜೆಪಿಗೆ ಟಕ್ಕರ್ ಕೊಡಲು ಏನೆಲ್ಲ ಬೇಕೋ ಅದೆಲ್ಲವನ್ನು ರಾಜ್ಯ ಕಾಂಗ್ರೆಸ್ ನಾಯಕರು ಜಿಲ್ಲೆಯ ಶಾಸಕರ ಮೂಲಕ ಮಾಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತದಾರರನ್ನು ಕಾಂಗ್ರೆಸ್ ನತ್ತ ಸೆಳೆದು ಬಿಜೆಪಿ ಭದ್ರಕೋಟೆಯನ್ನು ಕೆಡವುದು ಕಾಂಗ್ರೆಸ್ ನ ಪ್ರಮುಖ ಗುರಿಯಾಗಿದೆ. ಈ ಹಿಂದೆ ಜಿಲ್ಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಅವಮಾನವಾಗಿತ್ತು. ಹೀಗಾಗಿ ಬಿಜೆಪಿ ಆಟವನ್ನು ಮುಗಿಸಲೇ ಬೇಕೆಂಬ ಹಠಕ್ಕೆ ಬಿದ್ದಂತೆ ಕಾಣಿಸುತ್ತಿದೆ. ಬಿಜೆಪಿ ಮತ್ತೆ ಜಿಲ್ಲೆಯಲ್ಲಿ ಗಟ್ಟಿಯಾಗಿ ನೆಲೆಯೂರಲು ಏನು ಮಾಡುತ್ತದೆ ಮುಂದೆ ನೋಡಬೇಕಿದೆ.












Click it and Unblock the Notifications