ಮಲೆನಾಡಿನಲ್ಲಿ ಕಾಫಿ ಬೆಳೆ ನಾಶ ಹೆಚ್ಚಳ: ಮಳೆಗಾಲದಲ್ಲಿ ರೋಗ ನಿಯಂತ್ರಣ ಹೇಗೆ?
ಮಲೆನಾಡಿನಲ್ಲಿ ಮಳೆ ಹೆಚ್ಚಾದರೆ ಅದರ ಪರಿಣಾಮ ಕಾಫಿ ಮೇಲೆ ಬೀರುತ್ತದೆ. ಮಳೆಗೆ ಕಾಫಿ ಫಸಲು ಉದುರುವುದು ರೋಬಸ್ಟಾ ಕಾಫಿಯಲ್ಲಿ ಕಂಡು ಬಂದರೆ ಅರೇಬಿಕಾ ಕಾಫಿ ಗಿಡಕ್ಕೆ ಕೊಳೆರೋಗ, ಕಾಂಡಕೊರಕ ಬಾಧಿಸುವ ಮೂಲಕ ಭಾರೀ ಹಾನಿಯನ್ನುಂಟು ಮಾಡುತ್ತದೆ. ಇದರಿಂದ ಕಾಫಿಯನ್ನು ನಂಬಿ ಜೀವನ ಸಾಗಿಸುವ ಬೆಳೆಗಾರರು ಸಂಕಷ್ಟ ಅನುಭವಿಸಬೇಕಾಗುತ್ತದೆ.
ಮಳೆ ಕಡಿಮೆಯಾದರೂ ಕಷ್ಟ ಜಾಸ್ತಿಯಾದರೂ ಕಷ್ಟ ಎಂಬುವುದು ಕೊಡಗಿನ ಕಾಫಿ ಬೆಳೆಗಾರರ ಸ್ಥಿತಿಯಾಗಿದೆ. ಭಾರೀ ಮಳೆ ಸುರಿದು ಪ್ರವಾಹ ಬಂದ ಪರಿಣಾಮ ಹಲವು ರೀತಿಯಲ್ಲಿ ಕಾಫಿ ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ. ಅದರ ಜತೆಯಲ್ಲಿ ಶೀತ ವಾತಾವರಣದಿಂದ ಕಾಫಿ ಗಿಡಗಳಲ್ಲಿ ಫಸಲು ಉದುರುವಂತಾಗಿದೆ. ಅದರಲ್ಲೂ ಅರೇಬಿಕಾ ಕಾಫಿ ಬೆಳೆಗೆ ಕೀಟ ಬಾಧೆ ತುಸು ಎನ್ನಲೇ ಬೇಕಾಗುತ್ತದೆ. ಅದರಲ್ಲೂ ಬಿಳಿ ಕಾಂಡ ಕೊರಕವು ಅರೇಬಿಕಾ ಕಾಫಿಯಲ್ಲಿ ಕಂಡು ಬರುತ್ತಿರುವುದು ಬೆಳೆಗಾರರನ್ನು ಆತಂಕಕ್ಕೀಡು ಮಾಡಿದೆ.

ಈ ಬಾರಿ ಮಳೆ ಹೆಚ್ಚಾದ ಕಾರಣ ಕಾಂಡಕೊರಕ ಹೆಚ್ಚಾಗುವ ಸಾಧ್ಯತೆಯಿದ್ದು, ಇದರತ್ತ ಹೆಚ್ಚಿನ ಗಮನಹರಿಸಬೇಕಾಗಿದೆ. ಕಾಂಡಕೊರಕ ಕೀಟದ ಹಾವಳಿಗೆ ಸ್ವಾಭಾವಿಕ ಕಾರಣಗಳಾದ ಹವಾಮಾನ ವೈಪರೀತ್ಯ, ಇಳಿಮುಖವಾದ ಮಳೆಯ ಪ್ರಮಾಣ, ಒಣ ಹವೆ ಹಾಗೂ ಸಕಾಲಕ್ಕೆ ಬಾರದ ಮುಂಗಾರು ಮಳೆಯ ಜೊತೆಗೆ, ಪೂರಕವೆಂಬಂತೆ ಮಾನವ ನಿರ್ಮಿತ ಕಾರಣಗಳಿವೆ.
ಕಾಫಿ ಬೆಳೆಗಾರರಿಗೆ ನೂರೆಂಟು ಸಮಸ್ಯೆ
ಇವತ್ತು ಜಿಲ್ಲೆಯಲ್ಲಿ ನುರಿತ ಕಾರ್ಮಿಕರ ಕೊರತೆ ಎದ್ದು ಕಾಣಿಸುತ್ತಿದ್ದು, ಅನಿವಾರ್ಯವಾಗಿ ಹೊರಗಿನ ಕೂಲಿ ಕಾರ್ಮಿಕರನ್ನು ಆಶ್ರಯಿಸಬೇಕಾಗಿದ್ದು, ಇದರ ಪರಿಣಾಮ ಸರಿಯಾದ ಸಮಯಕ್ಕೆ ಕೀಟದ ಹತೋಟಿ ಕ್ರಮಗಳನ್ನು ತೆಗೆದುಕೊಳ್ಳದೆ ಇರುವುದು ಕಾಂಡಕೊರಕ ಹೆಚ್ಚಲು ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಅರೇಬಿಕಾ ಕಾಫಿಯ ಬೆಲೆಯ ಹೆಚ್ಚಳದಿಂದಾಗಿ ಕೀಟ ಬಾದಿತ ಗಿಡಗಳನ್ನು ತೆರೆಯದೇ ಇರುವುದು, ಹೆಚ್ಚಿನ ಫಸಲು ಪಡೆಯಲು ಮತ್ತು ಕಾರ್ಮಿಕರ ಕೊರತೆಯ ಕಾರಣದಿಂದಾಗಿ ಒಂದೇ ಸಾರಿ ಹೆಚ್ಚಿನ ನೆರಳು ತೆಗೆಯುತ್ತಿರುವುದು ಕೀಟ ಹರಡಲು ಕಾರಣವಾಗುತ್ತಿದೆ.

ಕೆಲವೊಂದು ಅನುಕೂಲಕರ ವಾತಾವರಣ ಕೀಟ ಹರಡಲು ಸಹಾಯ ಮಾಡುತ್ತಿವೆ. ಅದರಲ್ಲೂ ಕಾಫಿ ಬೆಳೆಗಾರರಿಗೆ ಬಿಳಿ ಕಾಂಡ ಕೊರಕವು ಇನ್ನಿಲ್ಲದ ತೊಂದರೆ ನೀಡುತ್ತಿದ್ದು, ಇದರ ನಿರ್ವಹಣೆಯು ಕಷ್ಟಕರವಾಗಿದೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಇನ್ನು ಅರೇಬಿಕಾ ಕಾಫಿಯ ಕೃಷಿಗಾಗಿ ಮತ್ತು ಅದರ ಉಳಿವಿಗಾಗಿ ಕಾಫಿ ಬೆಳೆಗಾರರು ಸೂಕ್ತ ಸಮಯದಲ್ಲಿ ಕೀಟ ನಿರ್ವಹಣಾ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಕಾರ್ಯ ಪ್ರವೃತ್ತರಾಗುವುದು ಅತೀ ಮುಖ್ಯವಾಗಿರುತ್ತದೆ.
ಬಾಧಿತ ಗಿಡಗಳ ನಾಶ ಮಾಡುವುದು ಅಗತ್ಯ
ಕೀಟ ನಿರ್ವಹಣೆಯಲ್ಲಿ ನೆರಳಿನ ಮಹತ್ವ ಪ್ರಮುಖವಾಗಿದ್ದು, ಮುಂಗಾರು ಮಳೆ ಆರಂಭವಾದಲ್ಲಿಯೇ ಮರಗಸಿಯ ಕೆಲಸ ಪೂರ್ಣಗೊಳಿಸದಿರುವುದು ಕಾರಣವಾಗಿದೆ. ಬೆಳೆಗಾರರು ಅತಿಯಾಗಿ ನೆರಳನ್ನು ತೆಗೆಯದೆ, ತಮ್ಮ ತೋಟಗಳಲ್ಲಿ ಹದವಾದ ನೆರಳನ್ನು ಇಟ್ಟುಕೊಳ್ಳುವುದು ಅವಶ್ಯವಾಗಿರುತ್ತದೆ. ಕೀಟದ ಹಾವಳಿಯನ್ನು ತಡೆಗಟ್ಟಲು ಹುಳು ಹಾರುವ ವೇಳೆಗಿಂತ ಮುಂಚಿತವಾಗಿಯೇ ಕಾಂಡ ಕೊರಕಕ್ಕೆ ತುತ್ತಾದ ಗಿಡಗಳನ್ನು ಕಿತ್ತು ನಾಶಪಡಿಸಬೇಕು. ಇಷ್ಟೇ ಅಲ್ಲದೆ, ಮೋಹಕ ಬಲೆ(ಫೆರೋಮೋನ್ ಟ್ರಾಪ್)ಗಳನ್ನು ಪ್ರತಿ ಎಕರೆಗೆ 12ರಂತೆ ಅಳವಡಿಸುವುದು ಸೂಕ್ತವಾಗಿರುತ್ತದೆ.

ಮಳೆಗಾಲ ಕಡಿಮೆಯಾದ ತಕ್ಷಣ ಕಾಂಡ ಹಾಗೂ ಬಲಿತ ರೆಕ್ಕೆಗಳಿಗೆ ಪ್ಲಾಸ್ಟಿಕ್ ಗೊಬ್ಬರದ ಚೀಲಗಳನ್ನು 4ರಿಂದ 5ಇಂಚು ಅಗಲಕ್ಕೆ ಕತ್ತರಿಸಿ, ಮುಖ್ಯ ಕಾಂಡ ಹಾಗೂ ಬಲಿತ ರೆಕ್ಕೆಗಳಿಗೆ ಸುತ್ತುವುದರಿಂದ ಕಾಂಡ ಕೊರಕದ ಹಾವಳಿಯನ್ನು ತಡೆಗಟ್ಟಬಹುದು. ಈ ರೀತಿ ಮಾಡುವುದರಿಂದ 3 ರಿಂದ 4 ವರ್ಷಗಳ ಕಾಲ ಕಾಂಡಗಳನ್ನು ಬೋರರ್ ಹಾವಳಿಯಿಂದ ಕಾಪಾಡಬಹುದು ಹಾಗೂ ಕಾಂಡ ಕೊರಕದ ಹಾವಳಿ ಹೆಚ್ಚು ಕಾಣಿಸಿಕೊಂಡಲ್ಲಿ ಕೀಟನಾಶಕವಾದ ಕ್ಲೋರೋಪೈರಿಫಾಸ್ 25 ಇಸಿ ಯನ್ನು ಅಕ್ಟೋಬರ್ ತಿಂಗಳೊಳಗೆ ಸಿಂಪಡಿಸಬಹುದಾಗಿರುತ್ತದೆ. ಈ ಎಲ್ಲ ಕ್ರಮಗಳನ್ನು ಅಳವಡಿಸಿದ್ದೇ ಆದರೆ ಅರೇಬಿಕಾ ಕಾಫಿ ಗಿಡಕ್ಕೆ ತಗಲುವ ಕಾಂಡಕೊರಕವನ್ನು ತಡೆಗಟ್ಟಲು ಸಾಧ್ಯವಾಗಲಿದೆ.












Click it and Unblock the Notifications