ಮೋಡಬಿತ್ತನೆ; ಅವಧಿಗೆ ಮುನ್ನ ಹೆರಿಗೆ ಮಾಡಿಸಿದಂತೆ!
ಮಡಿಕೇರಿ, ಜುಲೈ 16 : ಮಳೆಗಾಲದಲ್ಲಿಯೇ ಮಳೆಯ ಕೈಕೊಟ್ಟಿರುವುದರಿಂದ ಮೋಡ ಬಿತ್ತನೆ ಮೂಲಕ ಮಳೆ ಸುರಿಸುವ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಕೊಡಗಿನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.
ಈ ಕುರಿತು ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕೊಡಗು ಪಶ್ಚಿಮಘಟ್ಟ ಮೂಲ ನಿವಾಸಿ ಸಂಘಟನೆ ಸಂಚಾಲಕ ಕಾಳಚಂಡ ರವಿ ತಮ್ಮಯ್ಯ ಅವರು, ವಿಷಕಾರಕ ದ್ರಾವಣದಿಂದ ಮೋಡ ಬಿತ್ತುವುದು, ಗರ್ಭಿಣಿ ಸ್ತ್ರೀಯನ್ನು ಅವಧಿಗೆ ಮುನ್ನ ಬಲವಂತವಾಗಿ ಹೆರಿಗೆ ಮಾಡಿಸಿದಂತೆ ಎಂದು ವ್ಯಾಖ್ಯಾನಿಸಿದ್ದಾರೆ.
ಮಳೆಗಾಗಿ ರಾಜ್ಯ ಸರಕಾರ ವಿಷಕಾರಕ ಮೋಡ ಬಿತ್ತನೆ ಮಾಡಿದರೆ ಕೊಡಗಿನಲ್ಲಿ ಕೃಷಿ ಫಸಲು ಸೇರಿದಂತೆ ಪ್ರಾಕೃತಿಕ ಸಂಪತ್ತು ನಾಶವಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮೋಡ ಬಿತ್ತನೆ ವಿರುದ್ಧ ಜಿಲ್ಲೆಯ ಜನತೆ ಸಂಘಟಿತ ಹೋರಾಟ ನಡೆಸುವಂತೆ ಅವರು ಕರೆ ನೀಡಿದರು.

ಕೃತಕ ಮಳೆಗಾಗಿ ಸಲ್ಫರ್ ಆಕ್ಸೈಡ್ ನಂತಹ ರಾಸಾಯನಿಕ ಬಳಸುವುದರಿಂದ ಪರಿಸರದ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆಯಿದೆ. ಜತೆಗೆ ಪ್ರಕೃತಿ ನಾಶಕ್ಕೂ ಕಾರಣವಾಗಲಿದೆ. ಇಂತಹ ಮಳೆಯಿಂದ ಕೊಡಗಿನಲ್ಲಿ ಈಗಷ್ಟೆ ಫಲ ಕೊಡುತ್ತಿರುವ ಕಿತ್ತಳೆ ಸಹಿತ ಕಾಫಿಗೂ ಕೊಳೆರೋಗ, ಬೆಂಕಿ ರೋಗ ಕಾಣಿಸಿಕೊಳ್ಳುವ ಅಪಾಯವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಜಿಲ್ಲೆಯ ಬಾವಿ, ಕೆರೆಗಳಲ್ಲಿ ಸಂಗ್ರಹಗೊಳ್ಳುವ ನೈಸರ್ಗಿಕ ನೀರಿನ ಮೇಲೂ ಕೃತಕ ಮೋಡ ಬಿತ್ತನೆಯಿಂದ ವಿಷಮಿಶ್ರಿತ ಮಳೆ ಪರಿಣಾಮ ಬೀರುತ್ತದೆ ಎಂದು ಹೇಳಿರುವ ಅವರು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಕೊಡಗಿನಲ್ಲಿ ಮೋಡ ಬಿತ್ತನೆ ಮಾಡದಂತೆ ಸರಕಾರದಿಂದ ನಿಯೋಜನೆಗೊಂಡಿರುವ ಖಾಸಗಿ ಸಂಸ್ಥೆಗೆ ತಾಕೀತು ಮಾಡುವಂತೆ ಒತ್ತಾಯಿಸಿದ್ದಾರೆ.












Click it and Unblock the Notifications