ಪ್ರಾಣಕ್ಕೆ ಕುತ್ತು ತರುವ ಕೊಡಗಿನ ಮೂರು ಜಲಪಾತಗಳು

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಕೊಡಗಿನ ಬೆಟ್ಟಗುಡ್ಡ, ಕಾಫಿ ತೋಟಗಳ ನಡುವೆ ಹಲವಾರು ಜಲಪಾತಗಳಿರುವುದು ಜನಜನಿತ. ಈ ಜಲಪಾತಗಳನ್ನು ನೋಡುವ ಸಲುವಾಗಿಯೇ ದೂರದಿಂದ ಪ್ರವಾಸಿಗರು ಬರುತ್ತಾರೆ.

ಹೀಗೆ ಬರುವ ಪ್ರವಾಸಿಗರು ಜಲಪಾತವನ್ನಷ್ಟೇ ನೋಡಿ ಹೊರಟು ಹೋದರೆ ಏನೂ ತೊಂದರೆಯಿಲ್ಲ. ಆದರೆ ಹಾಗೆ ಮಾಡುವುದಿಲ್ಲ. ಇಲ್ಲಿನ ನೀರಿನಲ್ಲಿ ಆಟವಾಡುವ, ಜಲಧಾರೆಗೆ ತಲೆಕೊಟ್ಟು ಮೀಯುವ ಸಾಹಸ ಮಾಡುತ್ತಾರೆ. ಹೀಗೆ ಮಾಡಿ ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಾರೆ.[ಕೊಡಗಿನ ಗಡಿಭಾಗದಲ್ಲೊಂದು 'ಕಲ್ಯಾಳ ಜಲಪಾತ']

ಮಡಿಕೇರಿ ಸಮೀಪವಿರುವ ಅಬ್ಬಿಜಲಪಾತ ನೋಡಲು ಬರುತ್ತಿದ್ದ ಪ್ರವಾಸಿಗರು ಮೊದಲು ಸ್ನಾನ ಮಾಡಲು ತೆರಳಿ ಪ್ರಾಣಕಳೆದುಕೊಳ್ಳುತ್ತಿದ್ದರು. ಈಗ ಅಲ್ಲಿ ಭದ್ರತಾ ಸಿಬ್ಬಂದಿ ನೇಮಿಸಿದ ಬಳಿಕ ಇತ್ತೀಚೆಗೆ ದುರಂತಕ್ಕೆ ಕಡಿವಾಣ ಬಿದ್ದಿದೆ. ಅಬ್ಬಿಜಲಪಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಸುಮಾರು 52 ಎಂದು ಹೇಳಲಾಗುತ್ತದೆ.[ಚೇಲಾವರದ ಜಲಧಾರೆ ಅರಸಿ...]

Abbey Falls

ನಂತರದ ಸ್ಥಾನವನ್ನು ನಾಪೋಕ್ಲು ಬಳಿಯ ಚೆಯ್ಯಂಡಾಣೆಯ ಚೇಲಾವರದ ಜಲಪಾತ ಪಡೆದುಕೊಳ್ಳುತ್ತದೆ. ಇದುವರೆಗೆ ಇಲ್ಲಿ ಸುಮಾರು 12 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಇದಾದ ಬಳಿಕ ಸೋಮವಾರಪೇಟೆಯ ಮಲ್ಲಳ್ಳಿ ಜಲಪಾತದ ಸರದಿ. ಇಲ್ಲಿಯೂ ಐದಾರು ಮಂದಿ ಪ್ರಾಣಕಳೆದುಕೊಂಡಿದ್ದಾರೆ.[ಆರಿದ್ರಾ ಮಳೆಗೆ ಮಲ್ಲಳ್ಳಿಯಲ್ಲಿ ಜಲನರ್ತನ]

ಕೊಡಗಿನಲ್ಲಿ ಹತ್ತಾರು ಜಲಪಾತಗಳಿದ್ದರೂ ಈ ಮೂರು ಜಲಪಾತಗಳನ್ನು ಹೊರತು ಪಡಿಸಿದರೆ ಉಳಿದ ಜಲಧಾರೆಗಳಿಂದ ಅಷ್ಟೇನು ತೊಂದರೆಯಿಲ್ಲ.[ಭೋರ್ಗರೆಯುತ್ತಿರುವ ಇರ್ಪು ಜಲಧಾರೆ]

ಮಡಿಕೇರಿಯ ಅಬ್ಬಿಜಲಪಾತದ ಬಗ್ಗೆ ಹೇಳುವುದಾದರೆ ಮೇಲಿನಿಂದ ನೀರು ಧುಮುಕುವ ಕೆಳಭಾಗದಲ್ಲಿ ಹೊಂಡವಿದೆಯಲ್ಲದೆ, ಸುಳಿಯೂ ಇದೆ. ಹೀಗಾಗಿ ಸುರಿಯುವ ಜಲಧಾರೆಗೆ ತಲೆಕೊಟ್ಟು ಮಜಾ ತೆಗೆದುಕೊಳ್ಳಲು ತೆರಳುವ ಮಂದಿ ಸುಳಿಗೆ ಸಿಕ್ಕಿ ಹೊಂಡದೊಳಕ್ಕೆ ಹೋಗಿ ಬಿಡುತ್ತಾರೆ. ಅಲ್ಲಿಂದ ತಪ್ಪಿಸಿಕೊಳ್ಳಲಾರದೆ ಮುಳುಗಿ ಸಾವನ್ನಪ್ಪುತ್ತಾರೆ.

Mallali Falls

ಚೇಲಾವರ ಜಲಪಾತ ರಮಣೀಯವಾಗಿದೆ. ಆದರೆ ಇದು ಎಷ್ಟು ಭಯಂಕರವಾಗಿದೆ ಎಂಬುದು ಇದರ ಆಳಕ್ಕೆ ಸಿಕ್ಕಿ ಹಾಕಿಕೊಂಡ ಶವವನ್ನು ಹೊರ ತೆಗೆದವರಿಗೆ ಮಾತ್ರ ಗೊತ್ತು. ಬಂಡೆಯ ಕೆಳಗೆ 15 ಅಡಿ ದೂರದವರೆಗೆ ಟೊಳ್ಳಾದ ಸ್ಥಳವಿದೆ. ನೀರಿಗೆ ಬಿದ್ದ ವ್ಯಕ್ತಿಗಳು ಮೇಲಿನಿಂದ ಬೀಳುವ ನೀರಿನ ರಭಸಕ್ಕೆ ಕಲ್ಲು ಬಂಡೆಯ ಸಂದಿಯಲ್ಲಿ ಸಿಲುಕಿಕೊಂಡರೆ ಮುಗೀತು. ಆತ ಈಜು ಗೊತ್ತಿದ್ದರೂ ಈಚೆಗೆ ಬರುವುದು ಮಾತ್ರ ಹೆಣವಾಗಿಯೇ.[ಅಬ್ಬಿ ಫಾಲ್ಸ್‌ನತ್ತ ಪ್ರವಾಸಿಗರ ದೌಡು]

ಇನ್ನು ಸೋಮವಾರಪೇಟೆ ತಾಲೂಕಿಗೆ ಸೇರಿದ ಮಲ್ಲಳ್ಳಿ ಜಲಧಾರೆ ಕಾನನದ ನಡುವೆ ಇದೆ. ಇಲ್ಲಿಗೆ ತೆರಳುವುದೇ ಒಂದು ಸಾಹಸ ಈ ಜಲಪಾತ ಸುಂದರ ಅಷ್ಟೇ ಅಲ್ಲ ರುದ್ರರಮಣೀಯವೂ ಹೌದು. ಎತ್ತರದಿಂದ ಧುಮುಕುವ ಜಲಪಾತ ನೋಡುಗರ ಕಣ್ಮನ ಸೆಳೆಯುತ್ತದೆ.

Caution : Madikeri Falls are attractive but dangerous

ಈ ಕಾರಣಕ್ಕಾಗಿಯೇ ಹಲವರು ಇದರ ಬಳಿ ಫೋಟೋ ತೆಗೆಯಿಸಿಕೊಳ್ಳುವ ಸಲುವಾಗಿ ತೆರಳಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಈ ಜಲಪಾತದ ಕೆಳಭಾಗಕ್ಕೆ ಇಳಿಯುವುದು ಅಸಾಧ್ಯವಾದ ಕಾರಣ ಜಲಧಾರೆ ಧುಮುಕುವ ಕಡಿದಾದ ಜಾಗದಲ್ಲಿ ನಿಂತು ಫೋಟೋ ತೆಗೆಯುವ ಪ್ರಯತ್ನ ಮಾಡುತ್ತಾರೆ. ಈ ಸಂದರ್ಭ ಕಾಲು ಜಾರಿ ಬಿದ್ದು ಸತ್ತವರ ಸಂಖ್ಯೆಯೇ ಹೆಚ್ಚು. ಇತ್ತೀಚೆಗೆ ಸೆಲ್ಫಿ ಗೀಳಿನಿಂದಾಗಿ ಇನ್ನೂ ಹೆಚ್ಚು ಸಾವು ಸಂಭವಿಸುತ್ತಿದೆ.

ದೂರದಿಂದ ಬರುವ ಪ್ರವಾಸಿಗರು ಕೇವಲ ಜಲಪಾತಗಳನ್ನಷ್ಟೆ ನೋಡಲು ಬರುತ್ತಿಲ್ಲ. ಬದಲಿಗೆ ಮದ್ಯದ ಬಾಟಲಿಯೊಂದಿಗೆ ಬಂದು ಪಾರ್ಟಿ ಮಾಡಿ ಅತಿರೇಕದಿಂದ ವರ್ತಿಸುತ್ತಾರೆ. ಹೀಗಾಗಿ ಹಲವು ಅವಘಡಗಳು ಸಂಭವಿಸುತ್ತಿವೆ. ಇನ್ನಾದರೂ ಈ ಜಲಪಾತದತ್ತ ಆಗಮಿಸುವ ಪ್ರವಾಸಿಗರು ಎಚ್ಚರವಾಗಿರಿ. ಇಲ್ಲಿ ಏನೇ ದುರಂತ ಸಂಭವಿಸಿದರೂ ತಕ್ಷಣಕ್ಕೆ ನಿಮ್ಮ ಸಹಾಯಕ್ಕೆ ಯಾರೂ ಬರಲಾರರು. ನೆನಪಿರಲಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Caution : Madikeri has attractive water falls such as Abbey, Chelavara and one in Mallalli. Thousands of tourists from across India throng to this beautiful location. But these tourist sport are also marked as dangerous spot
Please Wait while comments are loading...