ಪತಿ ಕಳೆದುಕೊಂಡ ಮಹಿಳೆಗೆ ಮಗಳ ಸಾವಿನ ಆಘಾತ

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಸೆಪ್ಟೆಂಬರ್ 8: ಕಾರು ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿ ಮೃತಪಟ್ಟು ತಾಯಿ, ಅಜ್ಜಿ ಗಂಭೀರವಾಗಿ ಗಾಯಗೊಂಡ ಘಟನೆ ಗೋಣಿಕೊಪ್ಪಲಿನ ಕೈಕೇರಿ ಭಗವತಿ ದೇವಸ್ಥಾನ ಸಮೀಪ ಸಂಭವಿಸಿದೆ.

ಬಾಲಕಿ ಐಶ್ವರ್ಯಾ(4) ಮೃತಪಟ್ಟ ದುರ್ದೈವಿ. ಈಕೆಯ ತಾಯಿ ಶ್ರುತಿ ಮತ್ತು ಅಜ್ಜಿ ಗಂಭೀರವಾಗಿ ಗಾಯಗೊಂಡಿದ್ದು, ಗೋಣಿಕೊಪ್ಪದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯಲಾಗಿದೆ.[ಅಪಘಾತದಲ್ಲಿ ಬೈಕ್ ಸವಾರ ಸಾವು, ಲಾರಿ ಪಲ್ಟಿ]

Car accident, girl dead, two injured

ವೀರಾಜಪೇಟೆ ಮಾರ್ಗದಿಂದ ಕೇರಳಕ್ಕೆ ತೆರಳುತ್ತಿದ್ದ ಕಾರು ಗೋಣಿಕೊಪ್ಪದ ಕೈಕೇರಿಯ ಭಗವತಿ ದೇವಸ್ಥಾನದ ಬಳಿ ಎದುರಿನಿಂದ ಬರುತ್ತಿದ್ದ ಆಟೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಟೋ ಜಖಂಗೊಂಡಿದ್ದು, ಬಾಲಕಿ ಐಶ್ವರ್ಯಾಳ ತಲೆ ಮತ್ತು ಎದೆಗೆ ಗಂಭೀರ ಪೆಟ್ಟಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಜತೆಯಲ್ಲಿದ್ದ ತಾಯಿಯ ಕಾಲಿನ ಭಾಗಕ್ಕೆ, ಅಜ್ಜಿಯ ತಲೆ ಭಾಗಕ್ಕೆ ಗಾಯಗಳಾಗಿವೆ.

ಅಪಘಾತ ಸಂದರ್ಭ ಸ್ಥಳದಲ್ಲಿ ಜನ ಸೇರಿದ್ದರಾದರೂ ಯಾರೂ ಮಗುವನ್ನು ರಕ್ಷಿಸುವಲ್ಲಿ ಮುಂದಾಗಲಿಲ್ಲ. ಈ ವೇಳೆ ಗೋಣಿಕೊಪ್ಪ ಅನುದಾನಿತ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಅಣ್ಣಪ್ಪ ಎಂಬಾತ ಐಶ್ವರ್ಯಾಳನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿ, ಮಾನವೀಯತೆ ಮೆರೆದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.[ನಶೆಯಲ್ಲಿದ್ದ ಬೆಂಗಳೂರು ಯುವತಿಯ ಕಾರಿಗೆ ಪಾದಚಾರಿ ಬಲಿ]

ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಬಾಲಕಿಯ ತಾಯಿ ಶ್ರುತಿ ಕಳೆದ ವರ್ಷವಷ್ಟೆ ತನ್ನ ಪತಿಯನ್ನು ಕಳೆದುಕೊಂಡಿದ್ದರು. 2 ವರ್ಷದ ಹಿಂದೆ ಅವರ ಅತ್ತೆ ಮೃತಪಟ್ಟಿದ್ದರು, ಇದೀಗ ಮಗುವನ್ನು ಕೂಡ ಕಳೆದುಕೊಂಡು, ಆಸ್ಪತ್ರೆ ಸೇರಿದ್ದಾರೆ.

ಕೇರಳದ ವಾಹನಗಳು ಅತೀ ವೇಗವಾಗಿ ಸಂಚರಿಸುವುದರಿಂದ ಜಿಲ್ಲೆಯಲ್ಲಿ ಅಪಘಾತಗಳು ಹೆಚ್ಚಾಗಲು ಕಾರಣವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬಡ ಕುಟುಂಬಕ್ಕೆ ಆಟೋ ಚಾಲಕರ ಸಂಘ, ಬಸ್ ಚಾಲಕರ ಸಂಘ, ವಾಹನ ಚಾಲಕರ ಸಂಘ, ಸಾರ್ವಜನಿಕರು 35 ಸಾವಿರ ರು. ದೇಣಿಗೆ ಸಂಗ್ರಹಿಸಿ ನೀಡಿ, ಮಾನವೀಯತೆ ಮೆರೆದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Car-auto accident in Kaikeri, Gonikoppa. Girl Aishwarya died, her mother and grand mother injured. Last year Aishwarya father passed away.
Please Wait while comments are loading...