ವಿರಾಜಪೇಟೆ; ಅಮ್ಮನನ್ನು ಬೈದಿದ್ದಕ್ಕೆ ಅಣ್ಣನಿಗೆ ಗುಂಡಿಟ್ಟ ತಮ್ಮ
ಮಡಿಕೇರಿ, ಮೇ 21: ತಾಯಿಯನ್ನು ಬೈದ ಎಂಬ ಕಾರಣಕ್ಕೆ ಅಣ್ಣನನ್ನೇ ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಕೊಡಗಿನ ವಿರಾಜಪೇಟೆ ತಾಲೂಕಿನ ಬಿಳಗುಂದದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಬಿಳಗುಂದದ ಸುರೇಶ್ (45) ಕೊಲೆಯಾದವರು. ಕುಮಾರ್ ಕೊಲೆ ಮಾಡಿದಾತ. ಇವರಿಬ್ಬರು ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳಾಗಿದ್ದು, ಸುರೇಶ್ ನಿನ್ನೆ ಕುಮಾರ್ ತಾಯಿ ಜೊತೆಗೆ ಸಣ್ಣ ವಿಷಯಕ್ಕೆ ಜಗಳ ತೆಗೆದಿದ್ದಾನೆ. ಇದೇ ವೇಳೆ, ಮದ್ಯದ ನಶೆಯಲ್ಲಿದ್ದ ಕುಮಾರ್ ಗನ್ ತೆಗೆದುಕೊಂಡು ಸುರೇಶ್ ಗೆ ಏಕಾಏಕಿ ಗುಂಡು ಹಾರಿಸಿದ್ದಾನೆ.

ವಿರಾಜಪೇಟೆ ಆಸ್ಪತ್ರೆಗೆ ಸುರೇಶ್ ನನ್ನು ಕರೆದೊಯ್ದಿದ್ದು, ಈಗಾಗಲೇ ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಕುಮಾರ್ ಪರಾರಿಯಾಗಿದ್ದ. ಈ ಸಂಬಂಧ ವಿರಾಜಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಘಟನಾ ಸ್ಥಳಕ್ಕೆ ಡಿ ವೈ ಎಸ್ಪಿ ಜಯಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಯಲ್ಲೇ ಇರಿಸಿ, ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದರು. ಕೆಲವೇ ಗಂಟೆಯಲ್ಲಿ ಆರೋಪಿ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಕುಮಾರ್ ಮೇಲೆ ಈ ಹಿಂದೆ ಅನೇಕ ಕ್ರಿಮಿನಲ್ ಮೊಕದ್ದಮೆ ಇರುವುದಾಗಿಯೂ ತಿಳಿದುಬಂದಿದೆ.












Click it and Unblock the Notifications