ಕೊಡಗಿನಲ್ಲಿ ಬೇಸಿಗೆಯಲ್ಲಿ ನಡೆಯುವ ಬೋಡುನಮ್ಮೆಯ ವಿಶೇಷತೆ ಗೊತ್ತಾ?

ಮಡಿಕೇರಿ, ಏಪ್ರಿಲ್ 29: ಬೋಡುನಮ್ಮೆ ಕೊಡಗಿನಲ್ಲಿ ನಡೆಯುವ ವಿಶಿಷ್ಟ ಮತ್ತು ವಿಭಿನ್ನವಾದ ಹಬ್ಬವಾಗಿದ್ದು, ಇದು ಜಿಲ್ಲೆಯಾದ್ಯಂತ ಅಲ್ಲಲ್ಲಿ ಅದರಲ್ಲೂ ಭದ್ರಕಾಳಿ ದೇಗುಲವಿರುವ ಗ್ರಾಮಗಳಲ್ಲಿ ಈ ಹಬ್ಬವನ್ನು ವಿಧಿವಿಧಾನಗಳಂತೆ ನಡೆಸಲಾಗುತ್ತದೆ. ಮೇಲ್ನೋಟಕ್ಕೆ ವಿವಿಧ ವೇಷಗಳನ್ನು ಹಾಕಿ ಕುಣಿಯುವುದಷ್ಟೆ ಕಂಡು ಬಂದರೂ ಅದರ ಹಿಂದೆ ಹತ್ತು ಹಲವು ವಿಶೇಷತೆಗಳು ಅಡಕವಾಗಿರುವುದು ಗೋಚರಿಸುತ್ತದೆ.

ಜಿಲ್ಲೆಯಲ್ಲಿ ಬೇಸಿಗೆ ಸಮಯದಲ್ಲಿ ನಡೆಯುವ ಬೋಡುನಮ್ಮೆಗೆ ಪ್ರತಿವರ್ಷವೂ ವೀರಾಜಪೇಟೆ ಬಳಿಯಿರುವ ಚೆಂಬೆಬೆಳ್ಳೂರಿನ ಭದ್ರಕಾಳಿ ದೇವರ ಸನ್ನಿಧಿಯಲ್ಲಿ ಹಬ್ಬವನ್ನು ವಿಧಿವಿಧಾನದಂತೆ ಆಚರಿಸುವ ಮೂಲಕ ಮುಂದಿನ ಇತರೆ ಊರುಗಳಲ್ಲಿ ನಡೆಯುವ ಬೋಡುನಮ್ಮೆಗೆ ಚಾಲನೆ ನೀಡಲಾಗುತ್ತದೆ. ಈ ಹಬ್ಬ ಜಿಲ್ಲೆಯಲ್ಲಿ ನಡೆಯುವ ಹಬ್ಬಗಳಲ್ಲಿಯೇ ವಿಭಿನ್ನ ಮತ್ತು ವಿಶಿಷ್ಟವಾದುದ್ದಾಗಿದೆ.

Bodunammeya Festival Celebration In Kodagu District

ಈ ಹಬ್ಬವು ಪೌರಾಣಿಕ ಹಿನ್ನಲೆಯೊಂದಿಗೆ, ಸಂಸ್ಕ್ರತಿಯ ತಳಕು ಸೇರಿದಂತೆ ಹತ್ತು ಹಲವು ವಿಶೇಷತೆಗಳೊಂದಿಗೆ ಮಿಳಿತಗೊಂಡು ನಡೆಯುತ್ತದೆ. ನಿಜ ಹೇಳಬೇಕೆಂದರೆ, ಈ ಹಬ್ಬವನ್ನು ಜಿಲ್ಲೆಯಾದ್ಯಂತ ಆಚರಿಸಲಾಗುವುದಿಲ್ಲ. ಕೆಲವೇ ಕೆಲವು ಗ್ರಾಮಗಳಲ್ಲಿ ಅದರಲ್ಲೂ ಭದ್ರಕಾಳಿ ದೇವಾಲಯವಿರುವ ಊರುಗಳಲ್ಲಿ ವರ್ಷಕ್ಕೊಮ್ಮೆ ಮಾತ್ರ ಆಚರಿಸಲಾಗುತ್ತದೆ.

ಚೆಂಬೆಬೆಳ್ಳೂರಿನಲ್ಲಿ ಆರಂಭ ದೇವರಪುರದಲ್ಲಿ ಅಂತ್ಯ

ಬೋಡುನಮ್ಮೆ ಬಗ್ಗೆ ಹೇಳಬೇಕೆಂದರೆ, ಈ ಹಬ್ಬ ಪ್ರತಿವರ್ಷವೂ ಏಪ್ರಿಲ್ ತಿಂಗಳಲ್ಲಿ ವಿರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರಿನ ಭದ್ರಕಾಳಿ ದೇವರ ಹಬ್ಬ ನಡೆಯುತ್ತದೆ. ಇದು ಮೊದಲ ಬೋಡು ಹಬ್ಬವಾಗಿದ್ದು ನಂತರ ದಕ್ಷಿಣ ಕೊಡಗಿನ ಕೆಲವೆಡೆಗಳಲ್ಲಿ ಬೋಡು ಈ ಹಬ್ಬವು ಮುಂದುವರೆಯುತ್ತದೆಯಾದರೂ ಕೊನೆಗೆ ಅಂದರೆ ಮೇ ತಿಂಗಳ ಅಂತ್ಯದಲ್ಲಿ ದೇವರಪುರದಲ್ಲಿ ಸಂಪನ್ನಗೊಳ್ಳುತ್ತದೆ. ಇನ್ನು ಕೊಡಗಿನಲ್ಲಿ ಅದರಲ್ಲೂ ದಕ್ಷಿಣಕೊಡಗಿನಲ್ಲಿ ನಡೆಯುವ ಬೋಡುನಮ್ಮೆ ಮೊದಲಿಗೆ ಆರಂಭವಾಗುವುದೇ ಚೆಂಬೆಬೆಳ್ಳೂರಿನಲ್ಲಿ. ಇಲ್ಲಿ ಸಂಪ್ರದಾಯದಂತೆ ಹಬ್ಬ ಆರಂಭವಾಗುತ್ತದೆ.

ಈ ಹಬ್ಬವನ್ನು ನೋಡಿದ್ದೇ ಆದರೆ ಇದಕ್ಕೆ ತನ್ನದೇ ಆದ ಇತಿಹಾಸ ಮತ್ತು ಆಚರಣೆಗಳಿರುವುದನ್ನು ಕಾಣಬಹುದಾಗಿದೆ. ಹಬ್ಬವು ವಾರಗಳ ಕಾಲ ನಡೆಯುತ್ತಿದ್ದು, ಹಬ್ಬದ ಸಂಪ್ರದಾಯದಂತೆ ಹರಕೆ ಹೊತ್ತವರು, ವಿವಿಧ ವೇಷ ಭೂಷಣ ಧರಿಸಿ ರಂಜಿಸುವುದು ಇಲ್ಲಿನ ವಿಶೇಷತೆಯಾಗಿದೆ. ಈ ವೇಳೆ ಹುಲಿ ವೇಷಧರಿಸಿದವರು ಒಂದೆಡೆಯಾದರೆ, ಮತ್ತೊಂದೆಡೆ ಕೆಸರು ಮೈಗೆ ಹಚ್ಚಿಕೊಂಡು, ಹುಲ್ಲನ್ನು ಮೈಗೆ ಕಟ್ಟಿಕೊಂಡು ಕುಣಿದು ಕುಪ್ಪಳಿಸುತ್ತಾ ತಮ್ಮ ಹರಕೆ ತೀರಿಸುವವರೂ ಕಾಣಸಿಗುತ್ತಾರೆ.

Bodunammeya Festival Celebration In Kodagu District

ಭದ್ರಕಾಳಿ ದೇವಾಲಯದಲ್ಲಿ ಹಬ್ಬಾಚರಣೆ

ಹಬ್ಬದ ಆಚರಣೆ ಬಗ್ಗೆ ನೋಡುವುದಾದರೆ ಹಬ್ಬದಲ್ಲಿ ಹುಲಿವೇಷ ಮತ್ತು ಬೋಡು ವೇಷ ಹಾಕಿದವರು ಹಬ್ಬದ ದಿನ ಹಬ್ಬ ನಡೆಯುವ ದೇವಾಲಯದ ದೇವನೆಲೆಯಲ್ಲಿ ಸೇರಿ ಕೊಡಗಿನ ಸಾಂಪ್ರದಾಯಿಕ ಚಂಡೆ(ಕೊಟ್ಟ್) ಮತ್ತು ವಾಲಗಕ್ಕೆ ಹೆಜ್ಜೆ ಹಾಕುತ್ತಾ ದೇವನೆಲೆಯ ಸುತ್ತಲೂ ಪ್ರದಕ್ಷಿಣೆ ಹಾಕುತ್ತಾರೆ. ಇದರಲ್ಲಿ ಎಲ್ಲ ವಯಸ್ಸಿನವರೂ ಪಾಲ್ಗೊಳ್ಳುತ್ತಾರೆ. ಸುಮಾರು ಒಂದು ವಾರಗಳ ಕಾಲ ಭದ್ರಕಾಳಿ ದೇವಾಲಯದಲ್ಲಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.

ಹಬ್ಬದ ಮೊದಲ ದಿನ ಊರಿನವರೆಲ್ಲ ದೇವನೆಲೆಯಲ್ಲಿ ಸೇರಿ ಹಬ್ಬದ ಕಟ್ಟು ಹಾಕಲಾಗುತ್ತದೆ. ಇದನ್ನು ಊರಿನಲ್ಲಿ ಕಟ್ಟು ಬೀಳುವುದು ಎಂದು ಹೇಳಲಾಗುತ್ತದೆ. ಕಟ್ಟು ಬಿದ್ದ ಬಳಿಕ ಅಂದಿನಿಂದ ಹಬ್ಬ ಮುಗಿಯುವ ತನಕ ಊರಿನಲ್ಲಿ ಮಾಂಸಸೇವನೆ, ಮರಕಡಿಯುವುದು, ಇನ್ನಿತರ ಯಾವುದೇ ಕೈಂಕರ್ಯಗಳನ್ನು ಮಾಡುವಂತಿಲ್ಲ. ಆ ನಂತರ ಪಟ್ಟಣಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ಊರಿನವರೆಲ್ಲ ಹಗಲು ಹೊತ್ತು ಅನ್ನ ಸೇವಿಸದೆ ಇತರೆ ತಿಂಡಿ ಸೇವಿಸಿ ರಾತ್ರಿ ಮಾತ್ರ ಅನ್ನ ಸೇವಿಸುತ್ತಾರೆ.

ದೇವಾಲಯದಲ್ಲಿ ಕುದುರೆಯ ಆಟ

ಇದೆಲ್ಲದರ ನಡುವೆ ಹತ್ತರಿಂದ ಹನ್ನೆರಡು ವರ್ಷದೊಳಗಿನ ಮಕ್ಕಳು ಸಂಜೆ ವೇಳೆಯಲ್ಲಿ ದೇವಾಲಯದ ಆವರಣದಲ್ಲಿ ಪೀಳಿಯಾಟವಾಡುತ್ತಾರೆ. ಆ ನಂತರ ಪೊದಕೇರಿ, ಪೊದಕೋಟೆ ಹಾಗೂ ನಡಿಕೇರಿ ಮೂರು ಕೇರಿಗಳ ಜನರು ಬಿದಿರಿನಿಂದ ತಯಾರು ಮಾಡಿದ ಕೃತಕ ಕುದುರೆಯನ್ನು ದೇವಾಲಯಕ್ಕೆ ತಂದು ಕುದುರೆ ಆಟ ಆಡುವ ಮೂಲಕ ಹರಕೆ ಹೊತ್ತವರು ತಮ್ಮ ಹರಕೆ ತೀರಿಸುತ್ತಾರೆ.

Bodunammeya Festival Celebration In Kodagu District

ಇದಾದ ಮಾರನೆಯ ದಿನ ಊರಿನವರೆಲ್ಲ ಸೇರಿ ಸಾಂಪ್ರದಾಯಿಕ ವೇಷಧರಿಸಿ ಊರಿನ ಪ್ರತಿಯೊಂದು ಮನೆಮನೆಗಳಿಗೆ ತೆರಳಿ ಭಿಕ್ಷೆ ಕೇಳುವ ಮೂಲಕ ಬೋಡು ನಮ್ಮೆ(ಬೇಡುವ ಹಬ್ಬ)ಯನ್ನು ಆಚರಿಸುತ್ತಾರೆ. ವೇಷಧಾರಿಗಳು ಮನೆಗೆ ಬಂದ ಸಂದರ್ಭ ಮನೆಯವರು ಸತ್ಕಾರ ಮಾಡಿ ಕಳುಹಿಸಿಕೊಡುತ್ತಾರೆ. ಆ ನಂತರ ಮತ್ತೆ ಸಂಜೆ ದೇವಾಲಯದ ಆವರಣದಲ್ಲಿ ಸೇರಿ ತಮಟೆ ವಾದ್ಯಕ್ಕೆ ಹೆಜ್ಜೆಹಾಕುತ್ತಾರೆ.

ಶಾಶ್ವತವಾಗಿ ನೆಲೆನಿಂತ ಭದ್ರಕಾಳಿ

ಚೆಂಬೆಬೆಳ್ಳೂರಿನ ಭದ್ರಕಾಳಿಗೆ ಒಂಬತ್ತು ಶತಮಾನಗಳ ಇತಿಹಾಸವಿದ್ದು, ಹಿಂದೆ ಅಜ್ಜಿಯ ರೂಪದಲ್ಲಿ ಗ್ರಾಮಕ್ಕೆ ಆಗಮಿಸಿದ ಭದ್ರಕಾಳಿಗೆ ಚೇಂದಂಡ ಕುಟುಂಬದವರು ನೆಲೆಕರುಣಿದರು. ದಿನಕಳೆದಂತೆ ಅಜ್ಜಿಯ ಪವಾಡದಿಂದ ಆಕೆ ಬರೀ ಅಜ್ಜಿಯಲ್ಲ ಅಜ್ಜಿಯ ರೂಪದಲ್ಲಿ ಬಂದ ಗ್ರಾಮದೇವತೆ ಭದ್ರಕಾಳಿ ಎಂಬುದು ಜನರಿಗೆ ತಿಳಿಯಿತು. ಹೀಗಾಗಿ ಆಕೆಗೆ ದೇವಾಲಯ ಕಟ್ಟಿಸುವ ಮೂಲಕ ಶಾಶ್ವತ ನೆಲೆ ನೆಲೆನೀಡಲಾಯಿತೆಂದು ಹೇಳಲಾಗುತ್ತಿದೆ.

ಇನ್ನು ಗ್ರಾಮದ ಜನರ ನಂಬಿಕೆ ಪ್ರಕಾರ ಭದ್ರಕಾಳಿ ಬೇಡಿದ್ದನ್ನು ನೀಡುವ ಕರುಣಾಮಯಿಯಾಗಿದ್ದು, ಹಿಂದಿನ ಕಾಲದಲ್ಲಿ ದೇವರಿಗೆ ನರಬಲಿ ನೀಡಲಾಗುತ್ತಿತ್ತು ಎಂಬ ಮಾತುಗಳಿವೆ. ಅದು ಏನೇ ಇರಲಿ ಇಲ್ಲಿ ಬೇಡಿಕೊಂಡ ಬಯಕೆ ಈಡೇರಿದ ಉದಾಹರಣೆಗಳು ಸಾಕಷ್ಟಿವೆಯಂತೆ. ಹೀಗಾಗಿಯೇ ಪ್ರತಿವರ್ಷ ಊರವರು ಸೇರಿ ಅದ್ಧೂರಿಯಾಗಿ ಸಂಪ್ರದಾಯಬದ್ಧವಾಗಿ ಬೋಡುಹಬ್ಬವನ್ನು ಆಚರಿಸುತ್ತಾರೆ. ಮುಂದೆ ಬೇರೆ ಬೇರೆ ಊರುಗಳಲ್ಲಿ ಬೇರೆಯದ್ದೇ ಆದ ರೀತಿಯಲ್ಲಿ ಆಚರಿಸುತ್ತಾರೆ. ಅಲ್ಲಿನ ಆಚರಣೆಯಲ್ಲಿ ಇನ್ನಷ್ಟು ವಿಶೇಷತೆಗಳು ಸೇರಿಕೊಳ್ಳುವುದು ಕಂಡು ಬರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+