Karnataka BJP: ಮತ್ತೆ ಕೊಡಗಿನಲ್ಲಿ ಪ್ರಾಬಲ್ಯ ಸಾಧಿಸಲು ಬಿಜೆಪಿ ತಂತ್ರ!
ಮಡಿಕೇರಿ, ಜನವರಿ 11: ಕಳೆದ 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೊಡಗಿನ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ಬಿಜೆಪಿಯ ಭದ್ರಕೋಟೆಯನ್ನು ಛಿದ್ರ ಮಾಡಿತ್ತು. ಇದು ಬಿಜೆಪಿ ನಾಯಕರಿಗೆ ಸಹಿಸಿಕೊಳ್ಳಲಾರದ ಹೊಡೆತವಾಗಿತ್ತು. ಈ ಆಘಾತದಿಂದ ಬಿಜೆಪಿ ನಾಯಕರು ಹೊರಬಂದಂತೆ ಕಾಣಿಸುತ್ತಿಲ್ಲವಾದರೂ ಮುಂದಿನ ಚುನಾವಣೆ ಹೊತ್ತಿಗೆ ತಳಮಟ್ಟದಿಂದಲೇ ಪಕ್ಷವನ್ನು ಸಂಘಟಿಸಿ ಮತ್ತೆ ಎದ್ದು ನಿಲ್ಲುವ ಪ್ರಯತ್ನದಲ್ಲಿರುವುದು ಈಗ ಗೋಚರಿಸುತ್ತಿದೆ.
ಎರಡು ಕ್ಷೇತ್ರಗಳಲ್ಲಿ ಕೇವಲ ನಾಲ್ಕು ಸಾವಿರ ಮತಗಳ ಅಂತರದಲ್ಲಿ ಸೋಲು ಕಂಡಿದ್ದ ಬಿಜೆಪಿಯ ಅಪ್ಪಚ್ಚುರಂಜನ್ ಮತ್ತು ಕೆ.ಜಿ.ಬೋಪಯ್ಯ ಹಲವು ವರ್ಷಗಳಿಂದ ಶಾಸಕರಾಗಿ ಮುಂದುವರೆದುಕೊಂಡು ಬಂದಿದ್ದರು. ಹೀಗಾಗಿ ಅವರ ವಿರುದ್ಧ ಸದ್ದಿಲ್ಲದೆ ವಿರೋಧಿ ಅಲೆ ಎದ್ದಿತ್ತು. ಇದನ್ನು ಪಕ್ಷದ ವರಿಷ್ಟರು ಗಮನಿಸದೆ ಹೋಗಿದ್ದೇ ಸೋಲಿಗೆ ಕಾರಣ ಎನ್ನುವುದನ್ನು ತಳ್ಳಿ ಹಾಕಲಾಗದು. ಇಷ್ಟೇ ಅಲ್ಲದೆ ಅಪ್ಪಚ್ಚುರಂಜನ್ ಮತ್ತು ಕೆ.ಜಿ,ಬೋಪಯ್ಯ ಅವರ ನಂತರದ ನಾಯಕರನ್ನು ಬೆಳೆಸದೆ ಹೋಗಿರುವುದು ಕೂಡ ಬಿಜೆಪಿ ಹಿನ್ನಡೆಗೆ ಕಾರಣವಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗಿದೆ.

ಇದೀಗ ಮತ್ತೆ ಎಲ್ಲವನ್ನು ಸರಿಪಡಿಸಿಕೊಂಡು ಪಕ್ಷ ಸಂಘಟನೆ ಮಾಡಲು ಪಕ್ಷದ ಜಿಲ್ಲಾ ನಾಯಕರು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನವನ್ನು ಸಮರ್ಪಕವಾಗಿ ನಡೆಸುವ ಮೂಲಕ ಮತ್ತೆ ಗೆದ್ದೇ ಗೆಲ್ಲಬೇಕೆಂಬ ಹಠಕ್ಕೆ ಪಕ್ಷದ ನಾಯಕರು ಬಿದ್ದಂತೆ ಕಾಣಿಸುತ್ತಿದೆ. ಈ ಹಿಂದೆ ಜಿಲ್ಲೆಯಲ್ಲಿ ಜಾತಿ, ಸಮುದಾಯ ಎಲ್ಲವನ್ನು ಮೀರಿ ಪಕ್ಷವನ್ನು ಜನ ಬೆಂಬಲಿಸಿದ್ದರು. ಹೀಗಾಗಿ ಪ್ರತಿ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತಾ ಬಂದಿತ್ತು. ಆದರೆ 2023ರ ಚುನಾವಣೆಯಲ್ಲಿ ಸೋಲು ಕಾಣುವಂತಾಯಿತು.
10ಸಾವಿರಕ್ಕೂ ಹೆಚ್ಚು ಹೊಸ ಸದಸ್ಯರು
ರಾಷ್ಟ್ರೀಯ ವಿಚಾರ ಬಂದಾಗ ಕೊಡಗಿನವರು ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬುದಕ್ಕೆ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆ ಸಾಕ್ಷಿಯಾಗಿದೆ. ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡದೆ ಯದುವೀರ್ ಅವರಿಗೆ ನೀಡಿದ್ದರಿಂದ ಹಿನ್ನಡೆಯಾಗುತ್ತದೆ ಎಂದು ನಂಬಿದ್ದರು. ಆದರೆ ಆ ರೀತಿ ಏನೂ ಆಗಲೇ ಇಲ್ಲ. ಯದುವೀರ್ ಅವರು ಹೆಚ್ಚಿನ ಮತಗಳಿಂದಲೇ ಗೆಲುವು ಕಾಣುವಂತಾಯಿತು. ಇದೆಲ್ಲದರ ನಡುವೆ ಬಿಜೆಪಿಯತ್ತ ಯುವ ಮತದಾರರು ಆಕರ್ಷತರಾಗುತ್ತಿದ್ದಾರೆ ಇದಕ್ಕೆ ಸಾಕ್ಷಿ ಎಂಬಂತೆ ಈ ಬಾರಿಯ ಸದಸ್ಯತ್ವ ಅಭಿಯಾನದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಹೊಸ ಸದಸ್ಯತ್ವ ಪಡೆದಿದ್ದಾರೆ.

ಹಾಗೆನೋಡಿದರೆ ಪ್ರತಿಮೂರು ವರ್ಷಕ್ಕೊಮ್ಮೆ ರಾಷ್ಟ್ರದಾದ್ಯಂತ ಹೊಸದಾಗಿ ಪಕ್ಷದ ಸದಸ್ಯತ್ವವನ್ನು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತ ಸದಸ್ಯತ್ವ ಪಡೆಯುವುದರ ಮೂಲಕ ಮತ್ತು ಹೊಸದಾಗಿ ಸದಸ್ಯರನ್ನು ಮಾಡಿಸುದರ ಮೂಲಕ ಸದಸ್ಯತ್ವ ಅಭಿಯಾನವನ್ನು ನಡೆಸಲಾಗುತ್ತದೆ. ಈ ಅಭಿಯಾನದಲ್ಲಿ ಕೊಡಗಿನಲ್ಲಿ ದಾಖಲೆಯ ಸುಮಾರು 65ಸಾವಿರ ಸದಸ್ಯರು ಬಿಜೆಪಿ ಸದಸ್ಯತ್ವವನ್ನು ಪಡೆದು ಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕಳೆದ ಬಾರಿಗೆ ಹೋಲಿಸಿದರೆ ಸುಮಾರು 10ಸಾವಿರಕ್ಕೂ ಹೆಚ್ಚಿನ ಸದಸ್ಯರು ಬಿಜೆಪಿ ಸೇರ್ಪಡೆಯಾಗಿರುವುದು ವಿಶೇಷವಾಗಿದೆ.
ಶೇ.80ರಷ್ಟು ಬೂತ್ ಸಮಿತಿಗಳ ರಚನೆ
ಜಿಲ್ಲೆಯಲ್ಲಿ ಸಕ್ರಿಯ ಸದಸ್ಯರ ಸಂಖ್ಯೆ ಕೂಡ ನಿರೀಕ್ಷೆಗೂ ಮೀರಿ ಹೆಚ್ಚಾಗಿದೆ ಒಬ್ಬ ಸದಸ್ಯ ಕನಿಷ್ಠ 100 ಜನರನ್ನು ಸದಸ್ಯರನ್ನಾಗಿ ಮಾಡಿದರೆ ಅಥವಾ ಅದಕ್ಕಿಂತ ಹೆಚ್ಚು ಸದಸ್ಯನ್ನು ಮಾಡಿದರೆ ಆತ ಪಕ್ಷದ ಸಕ್ರಿಯ ಸದಸ್ಯ ಆಗುತ್ತಾನೆ, ಇದೆಲ್ಲವೂ ಕೂಡ ಆನ್ ಲೈನ್ ಪ್ರಕ್ರಿಯೆ ಆಗಿದೆ. ಪ್ರತಿ ಸದಸ್ಯನ ಸಂಪೂರ್ಣ ಮಾಹಿತಿ ಕೂಡ ಪಕ್ಷದ ಕೇಂದ್ರ ಕಚೇರಿಯಲ್ಲಿ ಲಭ್ಯವಿರುತ್ತದೆ.

ಈಗಾಗಲೇ ಕೊಡಗಿನ ನಾಲ್ಕು ಮಂಡಲಗಳಿಂದ ಸುಮಾರು 500ಕ್ಕೂ ಅಧಿಕ ಸಂಖ್ಯೆಯ ಸದಸ್ಯರು ಕೊಡಗಿನಲ್ಲಿ ಸಕ್ರಿಯ ಸದಸ್ಯರಾಗಿರುವುದು ಬಿಜೆಪಿ ಜಿಲ್ಲೆಯಲ್ಲಿ ಗಟ್ಟಿಗೊಳ್ಳುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಹೇಳುವ ಪ್ರಕಾರ ಸದಸ್ಯತ್ವ ಪ್ರಕ್ರಿಯೆ ನಡೆಯುವ ಮೊದಲು ಸದಸ್ಯತ್ವ ಅಭಿಯಾನ ಮತ್ತು ಸಕ್ರಿಯ ಸದಸ್ಯರುಗಳ ಪಟ್ಟಿ ತಯಾರಾಗಿರಬೇಕು.
ಈಗಾಗಲೇ ಕೊಡಗಿನಲ್ಲಿ ಶೇ.80ರಷ್ಟು ಬೂತ್ ಸಮಿತಿಗಳ ರಚನೆಯಾಗಿದ್ದು ಮುಂದಿನ ಹಂತದಲ್ಲಿ ಪಕ್ಷದ 4 ಮಂಡಲಗಳು ಹಾಗೂ ಪದಾಧಿಕಾರಿಗಳ ಆಯ್ಕೆಗೆ ಕೂಡ ದಿನಾಂಕ ನಿಗದಿ ಮಾಡಿದ್ದು ಅಂದು ಮಂಡಲದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಮುಂದೆ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ.
ಜಿಲ್ಲೆಯಲ್ಲಿ ಪಕ್ಷವು ಸಂಘಟನತ್ಮಕವಾಗಿ ಬಲಿಷ್ಠವಾಗಿದ್ದು ಕಳೆದ ಲೋಕ ಸಭಾ ಚುನಾವಣೆ ನಂತರ ನಡೆದ ಎಲ್ಲಾ ಚುನಾವಣೆ ಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು ಪ್ರಸ್ತುತ ಜಿಲ್ಲೆಯಲ್ಲಿ ನಡೆಯುತ್ತಿರುವ ಸಹಕಾರ ಸಂಘಗಳ ಚುನಾವಣೆಯಲ್ಲಿ ಕೂಡ ಬಿಜೆಪಿ ಅಭ್ಯರ್ಥಿಗಳು ಅಭೂತಪೂರ್ವ ಜಯ ದಾಖಲಿಸುತ್ತಿರುವುದು ಬಿಜೆಪಿ ಸಂಘಟನೆ ಜಿಲ್ಲೆಯಲ್ಲಿ ಗಟ್ಟಿಯಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂಬುದು ಜಿಲ್ಲಾಧ್ಯಕ್ಷರ ಅಭಿಪ್ರಾಯವಾಗಿದೆ.
ತಳಮಟ್ಟದಿಂದ ಪಕ್ಷ ಭದ್ರಗೊಳಿಸುವ ತಂತ್ರ
ಇನ್ನು ಸಂಘಟನಾ ಪರ್ವದ ಹೆಸರಿನಲ್ಲಿ ನಡೆಯುತ್ತಿರುವ ಈ ಸದಸ್ಯತ್ವ ಅಭಿಯಾನದಲ್ಲಿ ಸಕ್ರಿಯ ಸದಸ್ಯರ ಆಯ್ಕೆ, ಬೂತ್ ಮತ್ತು ಮಂಡಲ ಪದಾಧಿಕಾರಿಗಳ ಆಯ್ಕೆಗೆ ಸಂಬಂಧಿಸಿದಂತೆ 3 ಜಿಲ್ಲೆಗಳ ಜವಾಬ್ದಾರಿಯನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ನಿಬಾಯಿಸುತ್ತಿದ್ದು ಜಿಲ್ಲೆಗೆ ಚುನಾವಣೆ ಅಧಿಕಾರಿಯಾಗಿ ಸುಲೋಚನಾಭಟ್ ಸಹ ಚುನಾವಣೆ ಅಧಿಕಾರಿಗಳಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಮತ್ತು ಜಿಲ್ಲಾ ಉಪಾಧ್ಯಕ್ಷ ಕಿಲನ್ ಗಣಪತಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನು ಮೂರು ವರ್ಷಗಳಿವೆ. ಆದರೆ ಬಿಜೆಪಿ ಜಿಲ್ಲೆಯಲ್ಲಿ ಈಗಿನಿಂದಲೇ ಪಕ್ಷ ಸಂಘಟನೆಯ ಚಟುವಟಿಕೆಯನ್ನು ಆರಂಭಿಸಿದ್ದು, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದು ಸೇರಿದಂತೆ ತಳ ಮಟ್ಟದಿಂದಲೇ ಮತ್ತೆ ಪಕ್ಷ ಭದ್ರವಾಗುವಂತೆ ನೋಡಿಕೊಳ್ಳುವ ಸಲುವಾಗಿ ನಾಯಕರು ಮತ್ತು ಕಾರ್ಯಕರ್ತರು ಅಖಾಡಕ್ಕಿಳಿದಿರುವುದು ಎದ್ದು ಕಾಣಿಸುತ್ತಿದೆ. ಮತದಾರರು ನಿಜವಾಗಿಯೂ ಬಿಜೆಪಿಯತ್ತ ಒಲವು ಹೊಂದಿದ್ದಾರಾ ಎಂಬುದು ಗೊತ್ತಾಗಬೇಕಾದರೆ ಚುನಾವಣೆ ಬರಲೇಬೇಕಾಗಿದೆ.












Click it and Unblock the Notifications