ಲಾಕ್‌ಡೌನ್ ನಡುವೆಯೂ ಕೊಡಗಿಗೆ ಬರುತ್ತಿರುವ ಅಸ್ಸಾಂ ಕಾರ್ಮಿಕರು
ಮಡಿಕೇರಿ, ಜುಲೈ 2: ಪ್ರವಾಸಿ ಜಿಲ್ಲೆ ಕೊಡಗಿನಲ್ಲಿ ಪ್ರವಾಸೋದ್ಯಮ ಬಂದ್ ಮಾಡಲಾಗಿದ್ದು, ಸದ್ಯದ ಮಟ್ಟಿಗೆ ಪ್ರವಾಸೋದ್ಯಮಕ್ಕೆ ಯಾವುದೇ ಅವಕಾಶವಿಲ್ಲ. ಜಿಲ್ಲೆಯ ಎಲ್ಲಾ ಗಡಿಗಳನ್ನು ಬಂದ್ ಮಾಡಲಾಗಿದ್ದು, ಯಾವುದೇ ಪ್ರವಾಸಿಗರು ಒಳಗೆ ಬರುವಂತಿಲ್ಲ. ಕೊಡಗಿನಲ್ಲಿ ಕೊರೊನಾ ಪಾಸಿಟಿವಿಟಿ ದರ ಅಧಿಕವಾಗುತ್ತಿದೆ, ಇತರ ಜಿಲ್ಲೆಗಳನ್ನು ಹೋಲಿಸಿದರೆ ಕೊಡಗು ಅಪಾಯದ ಸ್ಥಿತಿಯಲ್ಲಿದೆ.
ಕೊಡಗಿನ ಅಂತರ ಜಿಲ್ಲಾ ಹೆದ್ದಾರಿಗಳಲ್ಲಿ ಗಡಿ ತಪಾಸಣೆ ಇದ್ದರೂ, ಅಲ್ಲಿ ಕಟ್ಟುನಿಟ್ಟಿನ ನಿರ್ಬಂಧವನ್ನು ಪಾಲಿಸುತ್ತಿಲ್ಲ ಎಂದು ಅನೇಕ ಸಂಘ-ಸಂಸ್ಥೆಗಳ ಮುಖಂಡರು ದೂರಿಕೊಂಡಿದ್ದಾರೆ. ಪ್ರತಿನಿತ್ಯ ನೂರಾರು ವಾಹನಗಳು ಗಡಿ ದಾಟಿ ಒಳಗೆ ಬರುತ್ತಿದೆ. ಅಷ್ಟೇ ಪ್ರಮಾಣದಲ್ಲಿ ಹೊರಗೆ ಹೋಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಕೊರೊನಾ ಪಾಸಿಟಿವಿಟಿ ದರ ಇಡೀ ದೇಶದಲ್ಲಿ ಕಡಿಮೆಯಾದರೂ ಕೊಡಗಿನಲ್ಲಿ ಕಡಿಮೆಯಾಗುವುದಿಲ್ಲ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಎಗ್ಗಿಲ್ಲದೆ ವಾಹನಗಳು ಒಳಗೆ- ಹೊರಗೆ ಓಡಾಡುತ್ತಿದೆ
ಕುಶಾಲನಗರ ಭಾಗ ಒಂದಷ್ಟು ಬಿಗಿಯಾಗಿರುವಂತೆ ಕಂಡರೂ ಆ ಭಾಗದಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆಂಬ ದೂರು ಕೇಳಿಬರುತ್ತಿದೆ. ಇನ್ನು ಆನೆ ಚೌಕೂರ್ ಗಡಿಯಲ್ಲಿ ಎಗ್ಗಿಲ್ಲದೆ ವಾಹನಗಳು ಒಳಗೆ- ಹೊರಗೆ ಓಡಾಡುತ್ತಿದೆ. ಗಡಿ ಎನ್ನುವುದು ಒಂದು ರೀತಿಯಲ್ಲಿ ಅಪ್ಪ ಅಮ್ಮ ಇಲ್ಲದ ಅನಾಥ ಮಗುವಿನಂತೆ ಎಂದರೆ ತಪ್ಪಲ್ಲ. ಇದು ಕೇವಲ ಆನೇ ಚೌಕೂರು ಗಡಿ ಮಾತ್ರವಲ್ಲ, ಇದೇ ವ್ಯವಸ್ಥೆ ಕುಟ್ಟಾ, ಕೇರಳ ಗಡಿಭಾಗದಲ್ಲಿ ಕೂಡ ಕಂಡುಬರುತ್ತಿದ್ದು, ಹಲವಾರು ಕೇರಳ ವಾಹನಗಳು ಗಡಿಯನ್ನು ದಾಟಿ ಒಳಬರುತ್ತಿದೆ.

ಗಡಿಯೊಳಗೆ ಜನರನ್ನು ಕತ್ತಲೆಯಲ್ಲಿಟ್ಟಿದ್ದಾರೆ
ಕೊಡಗಿನ ಬಹುತೇಕ ಎಲ್ಲಾ ಗಡಿಭಾಗಗಳಲ್ಲಿ ಮುಂಜಾನೆ ಹಾಗೂ ಸಂಜೆಯ ವೇಳೆ ಮತ್ತು ಮಧ್ಯಾಹ್ನ ಯಾವುದೇ ತಪಾಸಣೆ ಇರುವುದಿಲ್ಲ ಎನ್ನುವುದು ಹಲವಾರು ನಾಗರಿಕರ ದೂರು. ಜಿಲ್ಲೆಯೊಳಗೆ ಹೆಚ್ಚಾಗಿ ಕಂಡುಬರುತ್ತಿರುವ ಹೊರ ಜಿಲ್ಲೆಯ ಹಲವಾರು ವಾಹನಗಳನ್ನು ನೋಡಿದ್ದಾಗ ಇದು ವಾಸ್ತವ ಕೂಡ ಅನಿಸದೆ ಇರಲಾರದು. ಜಿಲ್ಲೆಯ ಗಡಿಯೊಳಗೆ ಜನರನ್ನು ಕತ್ತಲೆಯಲ್ಲಿಟ್ಟು ಗಡಿಯಾಚೆಯಿಂದ ಒಳಗೆ ಬರಲು ಅವಕಾಶ ಮಾಡಿಕೊಡಲಾಗಿದೆ ಎನ್ನುವುದು ಹಲವಾರು ಮಂದಿಯ ಆರೋಪವಾದರೂ ಸತ್ಯ. ಇನ್ನು ಹಲವಾರು ಏಜೆಂಟರು ತೋಟದ ಕಾರ್ಮಿಕರನ್ನು ದೂರದ ಅಸ್ಸಾಂ, ಗುವಾಹಟಿ ಭಾಗಗಳಿಂದ ಕೂಡ ಟೆಂಪೋ ಟ್ರಾವೆಲ್ಸ್ ಮೂಲಕ ಕರೆಸಿಕೊಳ್ಳುತ್ತಿದ್ದು, ಮಧ್ಯರಾತ್ರಿಯಲ್ಲಿ ಕೂಡ ಜಿಲ್ಲೆಯೊಳಗೆ ಇವರನ್ನು ನುಸುಳಿಸಲು ನೋಡುತ್ತಿದ್ದಾರೆ.

ಏಜೆಂಟರನ್ನು ಪತ್ತೆ ಹಚ್ಚಿ ಕೇಸು ದಾಖಲಿಸಬೇಕಿದೆ
ಗುರುವಾರ ಕೂಡ ಕುಶಾಲನಗರ ಭಾಗದಲ್ಲಿ ಒಂದು ಟೆಂಪೋ ಟ್ರಾವೆಲ್ಸ್ ಅಸ್ಸಾಂ ಮೂಲದ ಕೂಲಿ ಕಾರ್ಮಿಕರು ಸಿಕ್ಕಿ ಹಾಕಿಕೊಂಡಿದ್ದು, ಅತ್ತ ವಾಪಸ್ ಹೋಗಲಾಗದೆ ಇತ್ತ ಕೆಲಸವಿಲ್ಲದೆ ವಯಸ್ಕರು ಮಕ್ಕಳೊಂದಿಗೆ ಅತಂತ್ರ ಪರಿಸ್ಥಿತಿಯನ್ನು ಅನುಭವಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈ ರೀತಿ ಹೊರ ರಾಜ್ಯದಿಂದ ಕರೆಸಿಕೊಳ್ಳುವವರು ಕೂಡ ಯೋಚಿಸಬೇಕಿದೆ. ಹಾಗೇ ಹಣದಾಸೆಗೆ ಸೋಂಕಿತರನ್ನು ಕೂಡ ಗಡಿಯೊಳಗೆ ನುಸುಳಿಸಲು ನೋಡುತ್ತಿರುವ ಏಜೆಂಟರನ್ನು ಪತ್ತೆ ಹಚ್ಚಿ ಕೇಸು ದಾಖಲಿಸಬೇಕಿದೆ. ಇನ್ನು ಕೆ.ಎ-12 ಎಂಬ ಗಾಡಿ ಕಂಡರೆ ಅದನ್ನು ಪರಿಶೀಲಿಸದೆ ಒಳಗೆ ಬಿಡುತ್ತಿದ್ದು, ಕೆಲವು ಏಜೆಂಟರು ಇದನ್ನೆ ಬಂಡವಾಳ ಮಾಡಿಕೊಂಡು ಹೊರ ರಾಜ್ಯದ ಕಾರ್ಮಿಕರನ್ನು ಯಾವುದೇ ಮುಂಜಾಗ್ರತಾ ಕೊರೊನಾ ತಪಾಸಣೆ ಇಲ್ಲದೆ ಒಳಗೆ ಕರೆಸಿಕೊಳ್ಳುತ್ತಿದ್ದಾರೆ.

ತಮ್ಮವರನ್ನು ನೋಡಿ ಬರಲು ಭಯಪಡುತ್ತಿದ್ದಾರೆ
"ಗಡಿ ತಪಾಸಣೆ ಎನ್ನುವುದು ಕೇವಲ ನೆಪ ಮಾತ್ರವಾಗಿದ್ದು, ಪ್ರವಾಸಿಗರು ಜಿಲ್ಲೆಗೆ ಯಾವುದೇ ಭಯವಿಲ್ಲದೆ ಬರುತ್ತಿದ್ದಾರೆ. ಅದೇ ಜಿಲ್ಲೆಯಲ್ಲಿ ಆಸ್ತಿ- ಪಾಸ್ತಿ ಮನೆ ಹೊಂದಿರುವ ಅನೇಕ ಮೂಲ ನಿವಾಸಿಗಳು ಬೆಂಗಳೂರು, ಮೈಸೂರಿನಲ್ಲಿ ವಾಸವಿದ್ದು, ಅವರು ತಮ್ಮ ತೋಟದ ಕೆಲಸ ಮಾಡಿಸಲು ಜಿಲ್ಲೆಗೆ ಬರಲು ಅಥವಾ ತಮ್ಮವರನ್ನು ನೋಡಲು ಬರಲು ಭಯಪಡುತ್ತಿದ್ದಾರೆ ಹಾಗೂ ತಮ್ಮವರಿಗೆ ತೊಂದರೆಯಾಗುತ್ತದೆ ಸಹಿಸಿಕೊಳ್ಳೋಣ,'' ಎಂದು ಸುಮ್ಮನಿದ್ದಾರೆ.

ಲಾಕ್‌ಡೌನ್ ಜಿಲ್ಲೆಗೆ ಅಗತ್ಯವಿದೆಯಾ?
ಇದು ವಾಸ್ತವ ಕೂಡ ಅನಿಸದೆ ಇರಲಾರದು. ಇಂತಹ ಲಾಕ್‌ಡೌನ್ ಜಿಲ್ಲೆಗೆ ಅಗತ್ಯವಿದೆಯಾ? ಇದನ್ನು ಸಂಬಂಧಪಟ್ಟವರು ಚಿಂತಿಸಬೇಕಿದೆ. ಇದೀಗ ಮೊನ್ನೆ ಶಾಸಕರು ಹಾಗೂ ಸಚಿವರು ಹೇಳಿಕೆ ನೀಡಿ ಎಚ್ಚರಿಸಿದ ಮೇಲೆ ಜಿಲ್ಲೆಯೊಳಗೆ ಒಂದಿಷ್ಟು ಬಿಗಿಯಾಗಿದ್ದು, ಪ್ರವಾಸ ಬಂದವರು ಹೋಂಸ್ಟೇ, ರೇಸಾರ್ಟ್‌ಗಳಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ಆದರೆ ಕೊಡಗಿನಲ್ಲಿ ಮದುವೆಗೆಂದು ಬಂದವರಿಗೆ ಕೊಡಗಿನ ಲಾಡ್ಜ್‌ಗಳಲ್ಲಿ ರೂಂಗಳು ಸಿಗುತ್ತಿವೆ. ಇವರಿಗೆ ಲಾಡ್ಜ್‌ನಲ್ಲಿ ರೂಂ ಹೇಗೆ ಸಿಕ್ಕಿದೆ. ಹಾಗಾದರೆ ಗಡಿ ತಪಾಸಣೆ ಹೇಗಿದೆ ಎಂದು ಊಹಿಸಲು ಅಸಾಧ್ಯವೇನಿಲ್ಲ. ಇಂತಹ ಗಡಿ ತಪಾಸಣೆ ಅಗತ್ಯವಿದೆಯಾ ಅಥವಾ ಇಂತಹ ಲಾಕ್‌ಡೌನ್ ಕೊಡಗಿಗೆ ಅಗತ್ಯವಿದೆಯಾ ಎಂದು ಜಿಲ್ಲಾಡಳಿತದಿಂದ ಹಿಡಿದು ಶಾಸಕರು, ಸಂಸದರು, ಸಚಿವರು ಮತ್ತು ಅಧಿಕಾರಿಗಳು ಚಿಂತಿಸಬೇಕಿದೆ. ಶಾಸಕರು ಹಾಗೂ ಸಚಿವರು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಬೇಕಿದೆ. ಹಾಗೇ ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎನ್ನುವುದು ಜನರ ಒತ್ತಾಯವಾಗಿದೆ.

8 ಮಂದಿ ಈ ರೆಸಾರ್ಟ್‌ನಲ್ಲಿ ವಾಸ್ತವ್ಯ
ಗುರುವಾರ ರಾತ್ರಿ ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆಯ ತೊಂಡೂರು ರಸ್ತೆಯಲ್ಲಿರುವ ಉಪ್ಪುತೋಡುವಿನಲ್ಲಿರುವ ಕೂರ್ಗ್ ಕಾಫಿ ಫ್ಲವರ್ ರೆಸಾರ್ಟಿನಲ್ಲಿ ಜಿಲ್ಲಾಡಳಿತದ ಆದೇಶವನ್ನು ಉಲ್ಲಂಘಿಸಿ ಪ್ರವಾಸಿಗರಿಗೆ ಆಶ್ರಯ ನೀಡಿದ್ದ ಬಗ್ಗೆ ಸೋಮವಾರಪೇಟೆ ತಾಲ್ಲೂಕು ತಹಶೀಲ್ದಾರ ಗೋವಿಂದ್ ರಾಜ್ ಅವರ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಮೊಕದ್ದಮೆ ದಾಖಲಿಸಿದ್ದಾರೆ. ಮೈಸೂರಿನಿಂದ ಪ್ರವಾಸಿಗರಾಗಿ ಆಗಮಿಸಿದ್ದ 8 ಮಂದಿ ಈ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದರು ಎನ್ನಲಾಗಿದೆ.











Click it and Unblock the Notifications