ಕೊಡಗಿನ ದೇವರ ಕಾಡಿನಲ್ಲಿರುವ ವನದೇವರ ವಿಶೇಷತೆ ಏನು ಗೊತ್ತಾ? ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ
ಮಡಿಕೇರಿ, ಜನವರಿ 02: ಪ್ರಕೃತಿಯೊಂದಿಗೆ ಬದುಕು ಕಟ್ಟಿಕೊಂಡು ಬಂದಿರುವ ಕೊಡಗಿನವರು ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಾ ಬಂದಿದ್ದಾರೆ. ವಾಣಿಜ್ಯ ಬೆಳೆಗಳ ಭರಾಟೆ ನಡುವೆಯೂ ಭತ್ತವನ್ನು ಧಾನ್ಯಲಕ್ಷ್ಮಿಯಾಗಿ ಸ್ವೀಕರಿಸಿ ಮನೆ, ಮನಕ್ಕೆ ತುಂಬಿಸಿಕೊಂಡು, ವನದೇವರನ್ನು ಪೂಜಿಸುತ್ತಾ ಕಾಡಿನಲ್ಲಿಯೇ ಅವರಿಗೆ ನೆಲೆ ನೀಡಿ ದೇವರಕಾಡು ಪರಿಕಲ್ಪನೆ ಮೂಲಕ ಅರಣ್ಯವನ್ನು ಉಳಿಸಿ ಬೆಳೆಸುತ್ತಾ ಬಂದಿದ್ದಾರೆ.
ಇವತ್ತಿಗೂ ಕೊಡಗಿನಾದ್ಯಂತ ಕಾಡುಗಳಲ್ಲಿ ದೇವರಿಗೆ ನೆಲೆ ನೀಡಿ, ಒಂದಷ್ಟು ಎಕರೆ ಪ್ರದೇಶವನ್ನು ದೇವರಕಾಡು ಹೆಸರಲ್ಲಿ ಕಾಯ್ದಿರಿಸಲಾಗಿದೆ. ಜತೆಗೆ ಬಹುತೇಕ ಗ್ರಾಮಗಳ ದೇವತೆಯಾಗಿ ಭಗವತಿ ಮತ್ತು ಭದ್ರಕಾಳಿ ಗ್ರಾಮವನ್ನು ಕಾಯುತ್ತಿದ್ದು, ಗ್ರಾಮದ ಮೂಲಕ ಹಾದು ಹೋಗುವವರ ರಕ್ಷಕಿಯೂ ಆಗಿದ್ದಾಳೆ.

ಒಂದೆರಡು ಶತಮಾನಗಳ ಹಿಂದೆ ಕೊಡಗು ದಟ್ಟಕಾಡಿನಿಂದ ಕೂಡಿತ್ತು. ಈ ವೇಳೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ನಡೆದುಕೊಂಡೇ ಪ್ರಯಾಣ ಮಾಡಬೇಕಾಗಿತ್ತು. ಹೀಗೆ ಪ್ರಯಾಣ ಮಾಡಬೇಕಾದರೆ ಕ್ರೂರ ಪ್ರಾಣಿಗಳ ಭಯವೂ ಇರುತ್ತಿತ್ತು. ಆಗ ಪ್ರಯಾಣ ಹೊರಡುವವರು ಅಲ್ಲಲ್ಲಿ ಸಿಗುವ ಗ್ರಾಮದೇವತೆಗಳಿಗೆ ಕಾಣಿಕೆ ಹಾಕಿ ಯಾವುದೇ ತೊಂದರೆ ಬಾರದಂತೆ ಬೇಡಿಕೊಳುತ್ತಿದ್ದರು.
ದೇವರಿಗೆ ಕಾಣಿಕೆ ಸಲ್ಲಿಸಿ ಪ್ರಾರ್ಥನೆ
ಇದು ಇವತ್ತಿಗೂ ಮುಂದುವರೆದುಕೊಂಡು ಬಂದಿದೆ. ಈಗ ಮೊದಲಿನಂತೆ ದಟ್ಟಕಾಡುಗಳಿಲ್ಲ. ಬಹುತೇಕ ಪ್ರದೇಶಗಳು ತೋಟಗಳಾಗಿವೆ. ಮೊದಲಿನಂತೆ ಮನೆಗಳು ದೂರವಿಲ್ಲ. ಜನಸಂಖ್ಯೆ ಹೆಚ್ಚಾದಂತೆ ಜನವಸತಿ ಪ್ರದೇಶಗಳು ಹೆಚ್ಚಾಗಿವೆ. ಜೊತೆಗೆ ವಾಹನಗಳ ಸಂಚಾರವೂ ಜಾಸ್ತಿಯಾಗಿದ್ದು, ವಾಹನದಲ್ಲಿ ಸಂಚಾರ ಮಾಡುವವರು ಯಾವುದೇ ಅವಘಡ ಸಂಭವಿಸದೆ ಪ್ರಯಾಣ ಸುಖಕರವಾಗಿರಲಿ ಎಂದು ಪ್ರಾರ್ಥಿಸಿ ಕಾಣಿಕೆ ಹಾಕಿ ಮುಂದೆ ಹೋಗುತ್ತಾರೆ.
ಕಡಿದಾದ ತಿರುವು ರಸ್ತೆಗಳನ್ನು ಹೊಂದಿರುವ ಕೆಲವು ಗ್ರಾಮಗಳ ನಿಗದಿತ ಸ್ಥಳಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅಪಘಾತಗಳು ಸಂಭವಿಸುತ್ತವೆ. ಇಂತಹ ಪ್ರದೇಶಗಳಲ್ಲಿ ತೆರಳುವ ವೇಳೆ ಯಾವುದೇ ತೊಂದರೆಯಾಗದಂತೆ ದೇವರಲ್ಲಿ ಬೇಡಿಕೊಳ್ಳುವುದು ಸಾಮಾನ್ಯವಾಗಿದೆ. ರಸ್ತೆಯಲ್ಲಿ ಸಾಗುವಾಗ ಹಲವು ದೇಗುಲಗಳು ಕಂಡು ಬಂದರೂ ವನದೇಗುಲಗಳಿಗೆ ಮಾತ್ರ ಭಕ್ತರು ಕಾಣಿಕೆ ಸಲ್ಲಿಸುತ್ತಾರೆ.

ವಿವಿಧ ಅವತಾರಗಳಲ್ಲಿ ನೆಲೆ ನಿಂತ ದೇವರು
ಇಲ್ಲಿನ ಮುಖ್ಯ ರಸ್ತೆಗಳಲ್ಲಿ ಹಲವು ದೇವಾಲಯಗಳಿದ್ದರೂ ಅವುಗಳ ನಡುವಿನ ಕೆಲವೇ ಕೆಲವು ದೇಗುಲ ಮತ್ತು ಆ ದೇಗುಲದಲ್ಲಿ ನೆಲೆ ನಿಂತಿರುವ ಭದ್ರಕಾಳಿ, ವನಭದ್ರಕಾಳಿ ಹೀಗೆ ವಿವಿಧ ಅವತಾರಗಳ ದೇವಿ ಸ್ವರೂಪಿಯ ದೇವತೆಗಳನ್ನು ಇಲ್ಲಿನವರು ಜೀವರಕ್ಷಕಿ ಎಂದೇ ನಂಬುತ್ತಾರೆ. ಹಾಗಾಗಿ ಕಾಣಿಕೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿ ಮುಂದೆ ಸಾಗುತ್ತಾರೆ.
ಹಿಂದಿನ ಕಾಲದಲ್ಲಿ ದಟ್ಟವಾದ ಅರಣ್ಯದಿಂದ ಆವೃತವಾದ ರಸ್ತೆಯಲ್ಲಿ ಸಾಗುವಾಗ ಈಕೆಯೇ ಜನ, ಜಾನುವಾರುಗಳನ್ನು ಕಾಪಾಡುತ್ತಿದ್ದಳು. ಆಕೆಯನ್ನು ಪ್ರಾರ್ಥಿಸಿ ಜನ ನೆಮ್ಮದಿಯಾಗಿ ಮುಂದೆ ಸಾಗುತ್ತಿದ್ದರು. ಅಂದಿನಿಂದ ಇಂದಿನವರೆಗೆ ಈ ದೇಗುಲಗಳ ಎದುರು ನಿಂತು ಪ್ರಾರ್ಥಿಸಿ ಸಾಗುವ ಪರಿಪಾಠ ಬಂದಿದೆ. ಅದರಲ್ಲೂ ವಾಹನಗಳನ್ನೇ ಬಳಸುವ ಈ ಕಾಲದಲ್ಲಿ ಮತ್ತು ಪ್ರತಿ ದಿನವೂ ಒಂದಲ್ಲ ಒಂದು ಕಾರ್ಯದ ನಿಮಿತ್ತ ಸಾಗುವವರು ತಮ್ಮ ಕಾರ್ಯಕ್ಕೆ ಯಾವುದೇ ವಿಘ್ನ ಬಾರದೆ ಸುಗಮವಾಗಿ ನಡೆಸಿಕೊಡುವಂತೆ ಬೇಡಿಕೊಂಡು ಮುಂದೆ ಸಾಗುತ್ತಾರೆ.
ಜಿಲ್ಲೆಯಾದ್ಯಂತ ಕಾಣಸಿಗುವ ವನದೇಗುಲ
ಸಾಮಾನ್ಯವಾಗಿ ಕೊಡಗಿನ ಯಾವುದೇ ರಸ್ತೆಯಲ್ಲಿ ಸಾಗಿದರೂ ಇಂತಹ ದೇವತೆಯ ದೇಗುಲಗಳು ಅಲ್ಲಲ್ಲಿ ನೋಡಲು ಸಿಗುತ್ತವೆ. (ಕೆಲವೆಡೆ ದರ್ಗಾಗಳಿದ್ದು, ಅಲ್ಲಿಯೂ ಕೂಡ ಜಾತಿ ಧರ್ಮವನ್ನು ಮರೆತು ಕಾಣಿಕೆ ಹಾಕಿ ಪ್ರಾರ್ಥಿಸಿ ಸಾಗುತ್ತಾರೆ). ಇಂತಹ ದೇವಾಲಯಗಳ ಪೈಕಿ ವೀರಾಜಪೇಟೆ ಮತ್ತು ಗೋಣಿಕೊಪ್ಪ ರಸ್ತೆ ನಡುವೆ ಸಿಗುವ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾತೂರು ಕೊಳತ್ತೋಡು ಬೈಗೋಡಿನ ವನಭದ್ರಕಾಳೇಶ್ವರಿ, ಮಡಿಕೇರಿ ಕುಶಾಲನಗರ ರಸ್ತೆಯ ಕೆದಕಲ್ ನ ಭದ್ರಕಾಳೇಶ್ವರಿ, ಮಡಿಕೇರಿ ಸುಳ್ಯ ಮಾರ್ಗದ ದೇವರಕೊಲ್ಲಿ ಬಳಿಯಿರುವ ಚಾಮುಂಡೇಶ್ವರಿ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಇನ್ನು ಗ್ರಾಮಗಳ ನಡುವೆ ನಿರ್ದಿಷ್ಟ ಪ್ರದೇಶವನ್ನು ದೇವರ ಕಾಡುಗಳಾಗಿ ಕಾಯ್ದಿರಿಸಲಾಗಿದೆ. ಇಂತಹ ದೇವರ ಕಾಡುಗಳ ಪೈಕಿ ಒಂದೊಂದು ದೇವರ ಕಾಡಿನಲ್ಲಿ ಒಂದೊಂದು ದೇವರಿಗೆ ನೆಲೆ ನೀಡಿ ಪೂಜಿಸುತ್ತಾ ಬರಲಾಗುತ್ತಿದೆ. ಕೆಲವೆಡೆ ಬೇಟೆ ಅಯ್ಯಪ್ಪ, ಮತ್ತೆ ಕೆಲವೆಡೆ ಈಶ್ವರ, ವನಭದ್ರಕಾಳಿ ಹೀಗೆ ಮಹಿಮೆಗೆ ಅನುಸಾರ ನೆಲೆ ನೀಡಲಾಗಿದೆ.
ದೇವರಕಾಡಿನಲ್ಲಿ ಸಂಕಷ್ಟ ನಿವಾರಣೆಗೆ ಪ್ರಾರ್ಥನೆ
ಕೃಷಿಯೇ ಜೀವಾಳವಾಗಿದ್ದ ಕಾಲದಲ್ಲಿ ಜನಜಾನುವಾರು, ಸಾಕುಪ್ರಾಣಿಗಳಿಗೆ ತೊಂದರೆಯಾದರೆ, ವನ್ಯಪ್ರಾಣಿಗಳಿಂದ ಉಪಟಳವಾಗುತ್ತಿದ್ದಾಗ ದೇವರಕಾಡಿನಲ್ಲಿ ನೆಲೆನಿಂತ ದೇವರಲ್ಲಿ ಸಂಕಷ್ಟ ನಿವಾರಣೆಗೆ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದರು. ಅಲ್ಲದೆ ಹರಕೆಯಾಗಿ ಮಣ್ಣಿನ ಅಥವಾ ಬೆಳ್ಳಿಯ ಮೂರ್ತಿಗಳನ್ನು ಸಲ್ಲಿಸುತ್ತಿದ್ದರು. ಹಿಂದಿನ ಕಾಲದಲ್ಲಿ ಹರಕೆಯಾಗಿ ಸಲ್ಲಿಸುತ್ತಿದ್ದ ಮಣ್ಣಿನ ಮೂರ್ತಿಗಳನ್ನು ಇಂದಿಗೂ ಕಾಣಬಹುದಾಗಿದೆ.
ನಿಸರ್ಗದ ಒಡನಾಟದೊಂದಿಗೆ ಬದುಕು ಕಂಡುಕೊಂಡಿದ್ದ ಪೂರ್ವಜರು ಬಹುಶಃ ಅಭಿವೃದ್ಧಿಯ ನಾಗಾಲೋಟದಲ್ಲಿ ಅರಣ್ಯ ನಾಶವಾಗದಿರಲಿ ಎಂಬ ದೂರದೃಷ್ಟಿಯಿಂದ ದೇವರಕಾಡಿನ ಕಲ್ಪನೆಯನ್ನು ಮಾಡಿದರೋ ಗೊತ್ತಿಲ್ಲ. ಆದರೆ ಅವತ್ತು ಅಂತಹದೊಂದು ಚಿಂತನೆ ಮಾಡದೇ ಹೋಗಿದ್ದರೆ ಇವತ್ತು ಇನ್ನೆಷ್ಟು ಸಂಕಷ್ಟ ಅನುಭವಿಸಬೇಕಿತ್ತೋ?

ದೇವರಕಾಡನ್ನು ಉಳಿಸಿ ಬೆಳೆಸಬೇಕು
ಅಳಿದುಳಿದ ಕಾಡುಗಳು ನಾಶವಾಗಿವೆ. ಜನವಸತಿ ಪ್ರದೇಶಗಳು ಹೆಚ್ಚಾಗಿವೆ. ಬೆಲೆಬಾಳುವ ಮರಗಳಿಗೆ ಕೊಡಲಿಯೇಟು ಬಿದ್ದಿದೆ. ಕೃಷಿಭೂಮಿಗಳಲ್ಲಿ ವಾಣಿಜ್ಯ ಕಟ್ಟಡಗಳು ತಲೆ ಎತ್ತಿವೆ. ಅಕ್ರಮ ಹಣವನ್ನು ತಂದು ಕೊಡಗಿನ ಭೂಮಿ ಮೇಲೆ ಹಾಕುವ ಖಯಾಲಿ ಶುರುವಾಗಿದೆ. ಇದು ಮುಂದುವರೆದರೆ ಸದ್ದಿಲ್ಲದೆ ಅರಣ್ಯನಾಶವಾಗುವುದಂತು ಖಚಿತ.
ಇದೆಲ್ಲದರ ನಡುವೆಯೂ ತುಸು ನೆಮ್ಮದಿಪಡುವ ವಿಷಯ ಏನೆಂದರೆ, ಪೂರ್ವಜರು ಕಾಡನ್ನೇ ದೇವರೆಂದು ಪೂಜಿಸುವ ಮೂಲಕ ಕಾಡು ನಾಶ ತಪ್ಪಿಸುವ ಉದ್ದೇಶದಿಂದ ಸೃಷ್ಟಿ ಮಾಡಿದ ದೇವರಕಾಡುಗಳು ಇನ್ನೂ ನಮ್ಮೊಂದಿಗಿವೆ. ಜಿಲ್ಲೆಯ 4104 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ 1214 ದೇವರಕಾಡುಗಳಿವೆ ಇವುಗಳ ರಕ್ಷಣೆ ಮಾಡಿಕೊಂಡರೆ ಅಷ್ಟೇ ಸಾಕು.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications