ಮಡಿಕೇರಿ: ಗುಂಡಿಕ್ಕಿ ಮಹಿಳೆ ಕೊಲೆ, ಆರೋಪಿ ಆತ್ಮಹತ್ಯೆ
ಮಡಿಕೇರಿ, ಫೆಬ್ರವರಿ 24: ವ್ಯಕ್ತಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ಎದುರು ಮನೆಯ ಮಹಿಳೆಗೆ ಗುಂಡು ಹಾರಿಸಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ ಘಟನೆ ಮಡಿಕೇರಿಯ ಕಾಲೂರಿನಲ್ಲಿ ನಡೆದಿದೆ.
ಕಾಲೂರು ನಿವಾಸಿ ಕುಳೋಡಂಡ ಧರ್ಮರಾಯ(ಕಾಶಿ 43) ಎಂಬಾತ ಚನ್ನಪಂಡ ನಂಜಪ್ಪ ಎಂಬವರ ಪತ್ನಿ ವಿಶಾಲಾಕ್ಷಿ (ಲಲಿತಾ 42)ಯನ್ನು ಗುಂಡುಹಾರಿಸಿ ಕೊಲೆಗೈದು ಬಳಿಕ ತನಗೆ ತಾನೇ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಂಜಪ್ಪ ಅವರ ಪತ್ನಿ ವಿಶಾಲಾಕ್ಷಿ ತನ್ನ ಮನೆಯ ಅಂಗಳದಲ್ಲಿ ಕಾಫಿಯನ್ನು ಶುದ್ಧೀಕರಿಸುತ್ತಿದ್ದಾಗ ಕೋವಿಯೊಂದಿಗೆ ತನ್ನ ಮನೆಯಿಂದ ಬಂದ ಧರ್ಮರಾಯ ನೇರವಾಗಿ ಆಕೆಯ ಕುತ್ತಿಗೆಯಿಂದ ಕೆಳಭಾಗಕ್ಕೆ ಗುಂಡು ಹಾರಿಸಿದ್ದಾನೆ. ಇದರಿಂದ ವಿಶಾಲಾಕ್ಷಿ ಅಲ್ಲೇ ಕುಸಿದುಬಿದ್ದು ಪ್ರಾಣ ಬಿಟ್ಟಿದ್ದಾಳೆ. ಆ ನಂತರ ತನ್ನ ತಲೆಯ ಭಾಗಕ್ಕೆ ಆತ ಗುಂಡು ಹಾರಿಸಿಕೊಂಡಿದ್ದು ಮುಖದ ಭಾಗ ಛಿದ್ರವಾಗಿದೆ. ಆದರೂ ಸಾಯದೆ ನರಳಾಡುತ್ತಿದ್ದನು. ಗುಂಡಿನ ಶಬ್ದ ಕೇಳಿ ಪಕ್ಕದವರು ಓಡಿಬಂದು ನೋಡುವಾಗ ವಿಶಾಲಾಕ್ಷಿ ಸಾವನ್ನಪ್ಪಿದ್ದರೆ, ಧರ್ಮರಾಯ ನರಳುತ್ತಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಚೇತನ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಹಜರು ನಡೆಸುವುದರೊಂದಿಗೆ ಮುಂದಿನ ಕ್ರಮ ಕೈಗೊಂಡಿದ್ದು ಇಂದು ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ನೀಡಲಾಗಿದೆ.

ಕೆಲವುದಿನಗಳ ಹಿಂದೆ ಧರ್ಮರಾಯ ಮೃತೆ ವಿಶಾಲಾಕ್ಷಿಯ ಜತೆ ಅನುಚಿತವಾಗಿ ವರ್ತಿಸಿದ್ದು, ಈ ವಿಚಾರಕ್ಕೆ ಜಗಳ ನಡೆದಿತ್ತು. ಮತ್ತೆ ಅದೇ ರೀತಿ ವರ್ತಿಸಿ ಆಕೆ ಪ್ರತಿಭಟಿಸಿದ್ದರಿಂದ ಕೊಲೆ ಮಾಡಿ, ತಾನು ಆತ್ಮಹತ್ಯೆಗೆ ಶರಣಾಗಿರಬಹುದೆಂದು ಶಂಕಿಸಲಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.












Click it and Unblock the Notifications