ಕೊಡಗಿನಲ್ಲಿ ಕಾಡಾನೆ ದಾಳಿ; ವಿದ್ಯಾರ್ಥಿ, ಇಬ್ಬರು ಮಹಿಳೆಯರಿಗೆ ಗಾಯ
ಮಡಿಕೇರಿ, ಜೂನ್ 27: ಕೊಡಗು ಜಿಲ್ಲೆಯಲ್ಲಿ ದಿನ ಕಳೆದಂತೆ ಕಾಡಾನೆ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ಬುಧವಾರವೂ ವಿದ್ಯಾರ್ಥಿ ಹಾಗೂ ಇಬ್ಬರು ಮಹಿಳೆಯರ ಮೇಲೆ ವಿರಾಜಪೇಟೆಯಲ್ಲಿ ಕಾಡಾನೆಗಳು ದಾಳಿ ನಡೆಸಿವೆ.
ಬುಧವಾರ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವಿದ್ಯಾರ್ಥಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ವಿರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲದ 7ನೇ ತರಗತಿ ವಿದ್ಯಾರ್ಥಿ ಚಂದನ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಎರಡು ದಿನಗಳ ಹಿಂದಷ್ಟೇ ಜಿಲ್ಲಾಧಿಕಾರಿಗಳು ಆನೆ ದಾಳಿ ನಡೆಸಿದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಸ್ಥಳೀಯರಲ್ಲಿ ಧೈರ್ಯ ತುಂಬಿದ್ದರು. ಆದರೆ ಅದೇ ಭಾಗದಲ್ಲಿ ಶಾಲಾ ವಿದ್ಯಾರ್ಥಿ ಮೇಲೆ ದಾಳಿಯಾಗಿದೆ.
ತಮ್ಮ ತಂಗಿಯರೊಂದಿಗೆ ಬೆಳಿಗ್ಗೆ 8.30ರ ಸಮಯ ತೋಟದ ದಾರಿಯಲ್ಲಿ ಶಾಲೆಗೆ ಬರುತ್ತಿದ್ದಾಗ ಹಠಾತ್ತನೆ ದಾಳಿ ನಡೆಸಿದ ಕಾಡಾನೆ ಚಂದನ್ ನನ್ನು ಎತ್ತಿ ಎಸೆದಿದೆ. ಇದರಿಂದ ವಿದ್ಯಾರ್ಥಿಯ ತಲೆ ಹಾಗೂ ಹೊಟ್ಟೆ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮತ್ತೊಂದು ಪ್ರಕರಣದಲ್ಲಿ, ಕಮಲ್ ಹಾಗೂ ಅಮ್ಮಲ್ ಎಂಬ ಕಾರ್ಮಿಕ ಮಹಿಳೆಯರ ಮೇಲೆ ಕಾಡಾನೆ ದಾಳಿ ನಡೆಸಿದೆ. ವಿರಾಜಪೇಟೆಯ ಚಾಮುಂಡಿ ಪೈಸಾರಿ ಪ್ಲಾಂಟೇಷನ್ ನಲ್ಲಿ ಈ ಘಟನೆ ನಡೆದಿದೆ. ಮಧ್ಯಾಹ್ನ ಊಟ ತಿನ್ನುತ್ತಿದ್ದ ಸಂದರ್ಭ ಆನೆ ದಾಳಿ ನಡೆಸಿದ್ದು, ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿದ್ದು, ಪ್ರಾಣಾಪಾಯದಿಮದ ಪಾರಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಿರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಅರಣ್ಯ ಇಲಾಖೆಗೆ ಎಷ್ಟೇ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಭಯದಲ್ಲೇ ಬದುಕು ಸಾಗಿಸುವಂತಾಗಿದೆ. ಆಹಾರ ಅರಸಿ ಕಾಡು ಬಿಟ್ಟು ನಾಡಿಗೆ ಬರುತ್ತಿರುವ ಕಾಡಾನೆಗಳು ಹಗಲಲ್ಲೇ ಜನರ ಮೇಲೆ ದಾಳಿ ನಡೆಸುತ್ತಿವೆ. ಕಾಫಿ ತೋಟಗಳಲ್ಲೇ ವಾಸ್ತವ್ಯ ಹೂಡುತ್ತಿರುವ ಇವು, ಜನವಸತಿ ಪ್ರದೇಶಗಳಲ್ಲಿ ಸುತ್ತಾಡುತ್ತಾ, ಜನರ ಮೇಲೆ ದಾಳಿ ಮಾಡುತ್ತಿವೆ. ಇದನ್ನು ತಡೆಯಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಡಂಚಿನಲ್ಲಿ ಆನೆ ಕಾರಿಡಾರ್ ಮತ್ತು ಸೋಲಾರ್ ತಂತಿಗಳನ್ನು ಅಳವಡಿಸಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಕಾಫಿತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಮತ್ತು ಶಾಲೆಗೆ ಹೋಗುವ ಮಕ್ಕಳು ರಸ್ತೆಯಲ್ಲಿ ಹೋಗಲು ಭಯಪಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications