ಯುಪಿಯಲ್ಲಿ ಹಿಂದೂ ನಿರ್ಗಮನ: ಎಸ್‌ಪಿ ವಿರುದ್ಧ ಬಿಜೆಪಿ ಆರೋಪ
ಲಕ್ನೋ ಜನವರಿ 23: ಉತ್ತರಪ್ರದೇಶ ವಿಧಾನಸಭೆ ಚುನಾವಣೆ ರಂಗೇರುತ್ತಿದ್ದು ರಾಜಕೀಯ ಆರೋಪ-ಪ್ರತ್ಯಾರೋಪ ಜೋರಾಗಿದೆ. ಸದ್ಯ ಎಲ್ಲಾ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿವೆ. ಮಾಜಿ ಸಿಎಂ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಿಡಿ ಕಾರಿದ್ದಾರೆ. ಅದೊಂದು 'ವಿನಾಶದ ಪಟ್ಟಿ' ಎಂದು ಕರೆದಿದ್ದಾರೆ.
ಸಮಾಜವಾದಿ ಪಕ್ಷದ ಮೇಲೆ ದಾಳಿ ಮಾಡಿದ ಅವರು, ಎಸ್‌ಪಿ ನಾಯಕರು ತಮ್ಮ ಕುಟುಂಬದ ಏಳಿಗೆಗಾಗಿ ಶ್ರಮಿಸಿದ್ದಾರೆ ಮತ್ತು ಸಾಮಾನ್ಯ ಜನರನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು. ಎಸ್ಪಿಯವರ ಪಟ್ಟಿಯನ್ನು ನೋಡಿದರೆ ಇದು ವಿನಾಶದ ಪಟ್ಟಿಯೇ ಹೊರತು ಅಭಿವೃದ್ಧಿಯಲ್ಲ ಎಂದು ಅನಿಸುತ್ತಿದೆ, ಅಪರಾಧಿಗಳು ಅಭಿವೃದ್ಧಿ ಮಾಡುವುದಿಲ್ಲ ಆದರೆ ನಾಶಪಡಿಸುತ್ತಾರೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 'ಭದ್ರತೆ ಮತ್ತು ಅಭಿವೃದ್ಧಿ ವಿಷಯಗಳಲ್ಲಿ ಬಿಜೆಪಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಆದರೆ ಸಮಾಜವಾದಿ ಪಕ್ಷವು ಅಪರಾಧಿಗಳನ್ನು ತನ್ನ ಅಭ್ಯರ್ಥಿಗಳಾಗಿ ಹೆಸರಿಸುವ ಮೂಲಕ 'ವಿನಾಶದ ಪಟ್ಟಿ'ಯನ್ನು ಬಿಡುಗಡೆ ಮಾಡಿದೆ' ಎಂದು ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ.
ಫೆಬ್ರವರಿ 10 ರಂದು ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ ಮತದಾನ ನಡೆಯಲಿರುವ ಜಿಲ್ಲೆಗಳಲ್ಲಿ ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಮನೆ-ಬಾಗಿಲು ಪ್ರಚಾರವನ್ನು ಪ್ರಾರಂಭಿಸಿದರು. ಶಾಮ್ಲಿ ಜಿಲ್ಲೆಯ ಕೈರಾನಾದಲ್ಲಿ ಮನೆ ಮನೆ ಪ್ರಚಾರ ಮಾಡಿದರು. ರಾಜ್ಯದಲ್ಲಿ ಪಕ್ಷದ ಪರ ಪ್ರಚಾರ ನಡೆಸುವವರಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ, ಶಾಮ್ಲಿ ಮತ್ತು ಬಾಗ್‌ಪತ್‌ನಲ್ಲಿ ಬಿಜೆಪಿ ಕಾರ್ಯಕರ್ತರ ಜೊತೆ ಸಭೆ ನಡೆಸಿದರು.

ಅವರು (ಎಸ್‌ಪಿ) ಕೈರಾನಾವನ್ನು ಕಾಶ್ಮೀರವನ್ನಾಗಿ ಮಾಡುವ ಕನಸು ಕಾಣುತ್ತಿದ್ದರು. ಕಾಶ್ಮೀರ ಈಗ ಸ್ವರ್ಗವಾಗಿ ಬದಲಾಗುತ್ತಿದೆ ಮತ್ತು ಪಶ್ಚಿಮ ಉತ್ತರ ಪ್ರದೇಶವು ಅಭಿವೃದ್ಧಿಯಲ್ಲಿ ಹೊಸ ಅಭಿವೃದ್ಧಿಯನ್ನು ಸಾಧಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್, ಯೋಗಿ ಆದಿತ್ಯನಾಥ್ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಪ್ರತಿಪಾದಿಸಿದರು. ಎಸ್ಪಿ ಆಡಳಿತದಲ್ಲಿ ಹಿಂದೂಗಳ ವಲಸೆ ಹೋದರೆಂಬ ವಿಚಾರ ಕೆಲವು ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿದಾಗ ತಿಳಿದು ಬಂದಿದೆ ಎಂದು ಬಿಜೆಪಿ ಆರೋಪಿಸಿದೆ.
ಕಳೆದ 2017ರ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಕೈರಾನಾ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಹಿಂದೂಗಳಿಗೆ ಬೆದರಿಕೆ ಹಾಕಲಾಗುತ್ತಿದೆ. ಈ ಜೀವ ಬೆದರಿಕೆಗಳಿಂದ ಅತಿಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ವಲಸೆ ಹೋಗಿದ್ದಾರೆ ಎಂಬ ಬಗ್ಗೆ ಬಿಜೆಪಿ ಆರೋಪಿಸಿದೆ. ಈ ಹಿಂದೆ ನಿರ್ಭಯವಾಗಿ ಕಾರ್ಯನಿರ್ವಹಿಸುತ್ತಿದ್ದ ಮಾಫಿಯಾ ಮತ್ತು ಗಲಭೆಕೋರರನ್ನು ಹಿಡಿಯಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ತಮ್ಮ ಪಕ್ಷದಿಂದ ಮಾತ್ರ ಕಾನೂನು ಸುವ್ಯವಸ್ಥೆ, ಎಲ್ಲರ ಅಭಿವೃದ್ಧಿ ಸಾಧ್ಯ. ಬಿಜೆಪಿಯಿಂದ ಮಾತ್ರ ಇಂಥಹ ರಾಜಕಾರಣಕ್ಕೆ ಅಂತ್ಯ ಹಾಡಬಹುದು ಎಂದರು. ಜೊತೆಗೆ ಮುಖ್ಯಮಂತ್ರಿಗಳು ಕಲ್ಯಾಣ ಕಾರ್ಯಗಳನ್ನು ಎತ್ತಿ ಹಿಡಿದರು, ಕೋವಿಡ್19 ಸಾಂಕ್ರಾಮಿಕ ಸಮಯದಲ್ಲಿ ಜನರ ಜೀವನ ಮತ್ತು ಜೀವನೋಪಾಯವನ್ನು ಉಳಿಸಲು ಸರ್ಕಾರ ಕೆಲಸ ಮಾಡಿದೆ ಎಂದು ಹೇಳಿದರು.
ಕಳೆದ 1985ರ ನಂತರ ಸತತ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಯಾವ ಪಕ್ಷವೂ ಗೆಲುವು ಸಾಧಿಸದಿರುವ ಮಟ್ಟಕ್ಕೆ ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವು ಕಂಡುಕೊಂಡಿತು. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಪಡೆದುಕೊಳ್ಳುವ ನಿಟ್ಟಿನಲ್ಲೇ ರಣತಂತ್ರಗಳನ್ನು ಹೆಣೆಯುತ್ತಿದೆ. ದೇಶದಲ್ಲಿ ಅತಿಹೆಚ್ಚು ವಿಧಾನಸಭೆ ಮತ್ತು ಅತಿಹೆಚ್ಚು ಲೋಕಸಭೆ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಬಲಿಷ್ಠಪಡಿಸಲು ಎಲ್ಲಿಲ್ಲದ ಕಸರತ್ತು ಮುಂದುವರಿಸಲಾಗುತ್ತಿದೆ. ಈ ಬಾರಿ 403 ವಿಧಾನಸಭೆ ಕ್ಷೇತ್ರಗಳಲ್ಲಿ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಪಕ್ಷಕ್ಕೆ ಗೆಲುವು ತಂದುಕೊಡುವ ನಿಟ್ಟಿನಲ್ಲಿ ಬಿಜೆಪಿ ರಣತಂತ್ರ ಹೆಣೆಯುತ್ತಿದೆ.












Click it and Unblock the Notifications