ಉತ್ತರ ಪ್ರದೇಶದಲ್ಲಿ ಬಿಜೆಪಿಯದ್ದು ಕೇವಲ ಏಕಪಕ್ಷೀಯ ಅಭಿವೃದ್ಧಿ: ಪ್ರಿಯಾಂಕಾ ಗಾಂಧಿ
ಲಕ್ನೋ, ಡಿಸೆಂಬರ್ 18: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆ ಕೊವಿಡ್-19 ಮೊದಲ ಅಲೆಯಲ್ಲಿ ಪ್ರಾಣ ಬಿಟ್ಟವರು ಮತ್ತು ಬೆಲೆ ಏರಿಕೆ ವಿಷಯವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ಅಮೇಥಿಯಲ್ಲಿ ಸಹೋದರ ರಾಹುಲ್ ಗಾಂಧಿ ಜೊತೆಗೆ ಭರ್ಜರಿ ಪ್ರಚಾರ ನಡೆಸಿದ ಪ್ರಿಯಾಂಕಾ ಗಾಂಧಿ, ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು. ರಾಜ್ಯದಲ್ಲಿ ಕೊರೊನಾವೈರಸ್ ಮೊದಲನೇ ಅಲೆ ಸಂದರ್ಭದಲ್ಲಿ ಸಾಕಷ್ಟು ಜನರು ಪ್ರಾಣ ಬಿಟ್ಟಿದ್ದಾರೆ. ಅಂದು ಎದುರಾದ ಆಮ್ಲಜನಕ ಕೊರತೆಗೆ ರಾಜ್ಯದ ಬಿಜೆಪಿ ಸರ್ಕಾರವೇ ಹೊಣೆಯಾಗುತ್ತದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆ ವೇಳೆ ರಾಜ್ಯದಲ್ಲಿ ಆಕ್ಸಿಜನ್ ಸಿಗದೇ ನೂರಾರು ರೋಗಿಗಳು ಪ್ರಾಣ ಬಿಟ್ಟಿದ್ದಾರೆ ಎಂದು ದೂರಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರದ 74 ವರ್ಷಗಳಲ್ಲಿ ಕಾಂಗ್ರೆಸ್ ಹಲವು ಬದಲಾವಣೆಗಳನ್ನು ತಂದಿದೆ. ದೇಶದ ಅಭಿವೃದ್ಧಿಗಾಗಿ ಶ್ರಮಿಸಿದೆ. ಆದರೆ ಅಮೇಥಿಯಲ್ಲಿ ಕಳೆದ ಏಳು ವರ್ಷಗಳಿಂದ ಬಿಜೆಪಿ ಏನು ಮಾಡಿದೆ. ಅವರು ಬಿಜೆಪಿ ಪರವಾಗಿರುವ ಕಡೆಗಳಲ್ಲಿ ಮಾತ್ರ ಏಕಪಕ್ಷೀಯ ಅಭಿವೃದ್ಧಿಯನ್ನು ಮಾಡುತ್ತಿದ್ದಾರೆ," ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.

ಬೆಲೆ ಏರಿಕೆ, ಅಜಯ್ ಮಿಶ್ರಾ ಬಗ್ಗೆ ಪ್ರಸ್ತಾಪ:
ಭಾರತದಲ್ಲಿ ಬೆಲೆ ಏರಿಕೆಯಿಂದಾಗಿ ಸಾರ್ವಜನಿಕರು ಪ್ರತಿನಿತ್ಯ ನರಳುವಂತಾಗಿದೆ ಎಂದಿರುವ ಪ್ರಿಯಾಂಕಾ ಗಾಂಧಿ, ರೈತರ ಸಾವಿಗೆ ಕಾರಣರಾದ ಆರೋಪವನ್ನು ಎದುರಿಸುತ್ತಿರುವ ಆಶಿಶ್ ಮಿಶ್ರಾ ಅವರ ತಂದೆ ಅಜಯ್ ಮಿಶ್ರಾರನ್ನು ಕೇಂದ್ರ ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿದರು.
ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಎಲ್ಲಾ ರೈತರ ಸಾಲಮನ್ನಾ ಮತ್ತು 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ಪ್ರಿಯಾಂಕಾ ಗಾಂಧಿ ಭರವಸೆ ನೀಡಿದ್ದಾರೆ. "ಕಾಂಗ್ರೆಸ್ ಎಲ್ಲಾ ರೈತರು ಮತ್ತು ಸಣ್ಣ ಉದ್ಯಮಿಗಳ ಸಾಲವನ್ನು ಮನ್ನಾ ಮಾಡುತ್ತದೆ. ಅರ್ಧದಷ್ಟು ವಿದ್ಯುತ್ ಬಿಲ್‌ಗಳನ್ನು ಮನ್ನಾ ಮಾಡುತ್ತದೆ, 20 ಲಕ್ಷ ಯುವಕರಿಗೆ ಉದ್ಯೋಗ ನೀಡುತ್ತದೆ. ಕೋವಿಡ್ -19 ನಿಂದ ಬಳಲುತ್ತಿರುವ ಎಲ್ಲಾ ಕುಟುಂಬಗಳಿಗೆ 25,000 ಆರ್ಥಿಕ ನೆರವು ನೀಡುತ್ತದೆ" ಎಂದು ಹೇಳಿದರು.
ಅನಾರೋಗ್ಯದ ಸಂದರ್ಭದಲ್ಲಿ ಸರ್ಕಾರದಿಂದಲೇ 10 ಲಕ್ಷ ಆರೋಗ್ಯ ಸೇವೆ ನೀಡಲಾಗುತ್ತದೆ. ರಾಜಕೀಯವಾಗಿ ಮಹಿಳೆಯರನ್ನು ಸಬಲೀಕರಣಗೊಳಿಸಲು ಶೇ 40ರಷ್ಟು ಟಿಕೆಟ್‌ಗಳನ್ನು ಅವರಿಗೆ ನೀಡಲಾಗುವುದು, ವಿದ್ಯಾರ್ಥಿನಿಯರಿಗೆ ಸಬಲೀಕರಣಗೊಳಿಸಲು ಮತ್ತು ಅವರ ಭದ್ರತೆಗಾಗಿ ಸ್ಮಾರ್ಟ್‌ಫೋನ್ ಮತ್ತು ಸ್ಕೂಟಿ ನೀಡಲಾಗುತ್ತದೆ' ಎಂದು ಪ್ರಿಯಾಂಕಾ ಗಾಂಧಿ ಈಗಾಗಲೇ ಘೋಷಿಸಿದ್ದಾರೆ.
ಅಮೇಥಿಯಲ್ಲಿ ಪ್ರತಿ ರಸ್ತೆಗಳು ಇಂದಿಗೂ ಹಾಗೇ ಉಳಿದಿವೆ:
ಉತ್ತರ ಪ್ರದೇಶದಲ್ಲಿ ಪ್ರಚಾರ ನಡೆಸಿದ ಸಂಸದ ರಾಹುಲ್ ಗಾಂಧಿ, ಇಂದಿಗೂ ಅಮೇಥಿಯ ರಸ್ತೆಗಳು ಮೊದಲಿನಂತಿವೆ, ಜನರು ಮಾತ್ರ ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊಂದಿದ್ದಾರೆ ಎಂದರು. "ಇಲ್ಲಿನ ಮತದಾರರ ಹೃದಯಗಳಲ್ಲಿ, ಮೊದಲಿನಂತೆಯೇ ಜಾಗವಿದೆ. ಅನ್ಯಾಯದ ವಿರುದ್ಧ ನಾವು ಇನ್ನೂ ಒಂದಾಗಿದ್ದೇವೆ," ಎಂದು ಹೇಳಿದರು. "ನಾನು 2004 ರಲ್ಲಿ ರಾಜಕೀಯಕ್ಕೆ ಬಂದೆ. ನಾನು ನನ್ನ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಿದ ನಗರ ಅಮೇಥಿ. ಅಮೇಥಿಯ ಜನರು ನನಗೆ ರಾಜಕೀಯದ ಬಗ್ಗೆ ಸಾಕಷ್ಟು ಕಲಿಸಿದ್ದಾರೆ. ನೀವು ನನಗೆ ರಾಜಕೀಯಕ್ಕೆ ದಾರಿ ತೋರಿಸಿದ್ದೀರಿ ಮತ್ತು ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ," ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ಈ ಹಿಂದೆ ಬಿಜೆಪಿ ದಾಖಲೆ ಗೆಲುವು:
ಕಳೆದ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.












Click it and Unblock the Notifications