ಮೀರತ್: ಕಸ ಎಸೆಯುವ ಸ್ಥಳದಲ್ಲಿ ಶಿರಚ್ಛೇದಿಸಿದ ಮಹಿಳೆ ಮೃತದೇಹ
ಲಕ್ನೋ, ಅಕ್ಟೋಬರ್.27: ಉತ್ತರ ಪ್ರದೇಶದಲ್ಲಿ ಮಹಿಳೆಯ ರುಂಡವನ್ನು ಕತ್ತರಿಸಿ ಗೋಣಿಚೀಲದಲ್ಲಿ ಸುತ್ತಿ ಸ್ಮಶಾನದ ಸಮೀಪದ ಕಸ ಬಿಸಾಡುವ ಸ್ಥಳದಲ್ಲಿ ಎಸೆದು ಹೋಗಿರುವ ಘಟನೆ ಮೀರತ್ ನಲ್ಲಿ ನಡೆದಿರುವುದು ವರದಿಯಾಗಿದೆ.
ಕಸ ಬಿಸಾಡುವ ಸ್ಥಳದಲ್ಲಿ ಚೀಲವೊಂದರಲ್ಲಿ ಹಾಕಿದ ಮಹಿಳೆಯ ಶವವನ್ನು ಪ್ರಾಣಿಗಳು ಎಳೆದಾಡಿದಾಗ ಪ್ರಕರಣವು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಿಸಾರೆ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಫತೇಹುಲ್ಲಾಪುರ್ ನಲ್ಲಿರುವ ಮುಸ್ಲಿಂ ಸಮುದಾಯದ ಸ್ಮಶಾನದ ಬಳಿ ಶವ ಪತ್ತೆಯಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಖಿಲೇಶ್ ನಾರಾಯಣ್ ಸಿಂಗ್ ತಿಳಿಸಿದ್ದಾರೆ.
"ಸರಿಸುಮಾರು 30 ವರ್ಷದ ಮಹಿಳೆಗೆ ಪರಿಚಯವಿರುವ ವ್ಯಕ್ತಿಗಳೇ ಈ ಕೃತ್ಯವನ್ನು ಎಸಗಿರುವ ಶಂಕಿಯಿದೆ. ಮೃತ ಮಹಿಳೆಯ ಗುರುತು ಪತ್ತೆಯಾಗದ ರೀತಿಯಲ್ಲಿ ಶಿರಚ್ಛೇಧನ ಮಾಡಲಾಗಿತ್ತು. ಗೋಣಿಚೀಲದಲ್ಲಿ ತುಂಬಿದ್ದ ಮೃತದೇಹವನ್ನು ತುಂಬಿ ಎಸೆಯಲಾಗಿತ್ತು" ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಖಿಲೇಶ್ ನಾರಾಯಣ್ ಸಿಂಗ್ ಮಾಹಿತಿ ನೀಡಿದ್ದಾರೆ.

ಪೊಲೀಸರಿಂದ ಚುರುಕಿನ ತನಿಖೆ:
ಉತ್ತರದ ಪ್ರದೇಶದ ಮೀರತ್ ನಲ್ಲಿ ಪತ್ತೆಯಾದ ಮಹಿಳೆಯ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮೃತದೇಹವು ಪತ್ತೆಯಾದ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗುತ್ತಿದೆ. ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ, ಮೃತದೇಹವನ್ನು ಎಸೆದು ಹೋಗಿರುವವರು ಯಾರು ಎಂಬುದರ ಬಗ್ಗೆ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇನ್ನೊಂದೆಡೆ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅಂತ್ಯಕ್ರಿಯೆ ನೆರವೇರಿಸಲಾಗಿದೆ.












Click it and Unblock the Notifications