ಉತ್ತರ ಪ್ರದೇಶದ ಕಾನ್ಪುರ್ ನಲ್ಲಿ ಕಚ್ಚಾ-ಬಾಂಬ್ ಸ್ಫೋಟ
ಲಕ್ನೋ, ಆಗಸ್ಟ್.24: ಉತ್ತರ ಪ್ರದೇಶದಲ್ಲಿ ತಡರಾತ್ರಿ ಕಚ್ಚಾ ಬಾಂಬ್ ಸ್ಫೋಟಗೊಂಡಿದ್ದು, ಕಾನ್ಪುರದ ಬಗಾಹಿ ಪ್ರದೇಶದಲ್ಲಿ ಸಾಕಷ್ಟು ಗೊಂದಲದ ವಾತಾವರಣವನ್ನು ಸೃಷ್ಟಿಸಿದೆ. ಅದೃಷ್ಟವಶಾತ್ ಯಾವುದೇ ರೀತಿ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಭಾನುವಾರ ರಾತ್ರಿ ಸಂದರ್ಭದಲ್ಲಿ ಕಾನ್ಪುರದ ಬಗಾಹಿ ಪ್ರದೇಶದಲ್ಲಿ ಏಕಾಏಕಿ ಸ್ಫೋಟ ಸದ್ದು ಕೇಳಿ ಬಂದಿದೆ. ಇದರಿಂದ ಸ್ಥಳೀಯರು ಆತಂಕಗೊಂಡು ರಸ್ತೆಗೆ ಬಂದಾಗ ಕಚ್ಚಾ ಬಾಂಬ್ ಸ್ಫೋಟದ ಶಂಕೆ ವ್ಯಕ್ತವಾಗಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಡರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳಿಗೆ ಮತ್ತು ಶ್ವಾನ ದಳದ ಸಿಬ್ಬಂದಿಗೆ ಸಂದೇಶವನ್ನು ರವಾನಿಸಲಾಯಿತು. ಕೆಲವು ಗಂಟೆಗಳಲ್ಲೇ ಸ್ಥಳಕ್ಕೆ ಶ್ವಾನ ದಳ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾನ್ಪುರ್ ಎಸ್ಪಿ ಸ್ಪಷ್ಟನೆ:
ಭಾನುವಾರ ತಡರಾತ್ರಿ ಬಗಾಹಿ ಪ್ರದೇಶದಲ್ಲಿ ನಡೆದ ಕಚ್ಚಾಬಾಂಬ್ ಸ್ಫೋಟದಲ್ಲಿ ಯಾವುದೇ ರೀತಿ ಹಾನಿ ಸಂಭವಿಸಿಲ್ಲ. ಈ ಸ್ಫೋಟದ ಹಿಂದಿನ ಕಾರಣ ಏನು ಎನ್ನುವುದರ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಕಾನ್ಪುರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಬುಕೇರ್ ಮಾಹಿತಿ ನೀಡಿದ್ದಾರೆ. ಇನ್ನು, ಕಚ್ಚಾ ಬಾಂಬ್ ಸ್ಫೋಟದಿಂದ ಬಗಾಹಿ ಪ್ರದೇಶದಲ್ಲಿ ವಾಸವಿರುವ ಜನರು ರಾತ್ರಿಯಿಡೀ ರಸ್ತೆಯಲ್ಲಿ ನೆರೆದಿದ್ದು, ತೀವ್ರ ಆತಂಕಕ್ಕೆ ಒಳಗಾಗಿರುವುದು ಕಂಡು ಬಂತು.












Click it and Unblock the Notifications