3 ದಶಕಗಳ ಮೂಢನಂಬಿಕೆಗೆ ಬ್ರೇಕ್ ಹಾಕಿ ಯೋಗಿ ಆದಿತ್ಯನಾಥ್ ಮತ್ತೆ ಅಧಿಕಾರಕ್ಕೆ
ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಬಹುಮತಗಳಿಸಿ ಸತತವಾಗಿ ಎರಡನೇ ಅವಧಿಗೆ ಸರಕಾರ ರಚಿಸುವತ್ತ ದಾಪುಗಾಲು ಹಾಕುತ್ತಿದೆ. ಇದುವರೆಗಿನ ಟ್ರೆಂಡಿಂಗ್ ಪ್ರಕಾರ 270ರ ಆಸುಪಾಸಿನಲ್ಲಿ ಬಿಜೆಪಿ ಸಂಖ್ಯೆ ಬಂದು ನಿಲ್ಲಬಹುದು.
ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಬಿಜೆಪಿಗೆ ಹೆಚ್ಚಿನ ಕಡೆ ಉತ್ತಮ ಪೈಪೋಟಿಯನ್ನು ನೀಡಿತ್ತು. ಎಸ್ಪಿ 130ಸ್ಥಾನದಲ್ಲಿ ಮುನ್ನಡೆಯಲ್ಲಿದ್ದರೆ, ಬಹುಜನ ಸಮಾಜಪಕ್ಷ ಮತ್ತು ಕಾಂಗ್ರೆಸ್ ದಯನೀಯ ವೈಫಲ್ಯವನ್ನು ಕಂಡಿದೆ.
ಗೋರಖಪುರದಲ್ಲಿ ಸ್ಪರ್ಧಿಸಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸುಮಾರು ಒಂದು ಲಕ್ಷ ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ. ಅಖಿಲೇಶ್ ಯಾದವ್ ಅವರು ಕರ್ಹಾಲ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.
ಎರಡನೇ ಅವಧಿಗೆ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗುವುದು ಪಕ್ಕಾ ಆಗುತ್ತಿದ್ದಂತೆಯೇ ಸುಮಾರು ಮೂರು ದಶಕಗಳ ಕಾಲ ನಂಬಿಕೊಂಡು ಬಂದಿದ್ದ ಮೂಢನಂಬಿಕೆಯನ್ನು ಯೋಗಿ ಆದಿತ್ಯನಾಥ್ ಬ್ರೇಕ್ ಮಾಡಿ ಮತ್ತೆ ಅಧಿಕಾರಕ್ಕೇರುತ್ತಿರುವುದು ಚರ್ಚೆಯ ವಿಷಯವಾಗಿದೆ.

ಕಳೆದ ಅಕ್ಟೋಬರ್ ತಿಂಗಳಲ್ಲಿ ಬಸವರಾಜ ಬೊಮ್ಮಾಯಿ ಚಾಮರಾಜನಗರದಲ್ಲಿ
ಕರ್ನಾಟಕದಲ್ಲಿ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎನ್ನುವ ನಂಬಿಕೆ ಕರ್ನಾಟಕದಲ್ಲಿದೆ. ಹಾಗಾಗಿ, ರಾಜ್ಯದ ಹಲವು ಮುಖ್ಯಮಂತ್ರಿಗಳು ಆ ಜಿಲ್ಲೆಗೆ ಭೇಟಿ ನೀಡಲು ಹಿಂದೆ ಮುಂದೆ ನೋಡುತ್ತಾರೆ. ಈ ಜಿಲ್ಲೆಯ ಸರಕಾರೀ ಕಾರ್ಯಕ್ರಮಕ್ಕೆ ಭೇಟಿ ನೀಡುವ ಮುಖ್ಯಮಂತ್ರಿಗಳು ಆರು ತಿಂಗಳಲ್ಲಿ ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವ ಮೂಢನಂಬಿಕೆ ಇರುವುದರಿಂದ ಸಿಎಂಗಳು ಇಲ್ಲಿಗೆ ಹೋಗಲು ಹಿಂದೇಟು ಹಾಕುತ್ತಾರೆ. ಆದರೆ, ಕಳೆದ ಅಕ್ಟೋಬರ್ ತಿಂಗಳಲ್ಲಿ ಬಸವರಾಜ ಬೊಮ್ಮಾಯಿ, ಮೆಡಿಕಲ್ ಕಾಲೇಜು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಾಜಧಾನಿ ದೆಹಲಿಗೆ ಹೊಂದಿಕೊಂಡಿರುವ, ನ್ಯಾಶನಲ್ ಕ್ಯಾಪಿಟಲ್ ರೀಜನ್
ಇದೇ ರೀತಿ ಉತ್ತರ ಪ್ರದೇಶದಲ್ಲೂ. ಇಲ್ಲಿ ಚಾಮರಾಜನಗರದಂತೆ ಅಲ್ಲಿ ನೋಯ್ಡಾದಲ್ಲಿ. ರಾಜಧಾನಿ ದೆಹಲಿಗೆ ಹೊಂದಿಕೊಂಡಿರುವ, ನ್ಯಾಶನಲ್ ಕ್ಯಾಪಿಟಲ್ ರೀಜನ್ (ಎನ್ಸಿಆರ್) ಭಾಗವಾಗಿರುವ ಗೌತಂಬುದ್ದ ನಗರದ ನೋಯ್ಡಾಗೆ ಭೇಟಿ ನೀಡಿದರೂ ಅಧಿಕಾರ ಹೋಗುತ್ತದೆ ಎನ್ನುವ ಮೂಢನಂಬಿಕೆಯಿದೆ. ಉತ್ತರ ಪ್ರದೇಶದ ರಾಜಕಾರಣಿಗಳು ಈ ನಂಬಿಕೆಯನ್ನು ಬಹುವಾಗಿ ನಂಬಿಕೊಂಡು ಬಂದಿದ್ದಾರೆ. ಆದರೆ, ಇತ್ತೀಚೆಗೆ ಯೋಗಿ ಆದಿತ್ಯನಾಥ್ ಇದಕ್ಕೆ ಬ್ರೇಕ್ ಹಾಕಿದ್ದಾರೆ.

29ವರ್ಷದ ನಂತರ ಯೋಗಿ ಆದಿತ್ಯನಾಥ್ ನೋಯ್ಡಾಗೆ ಭೇಟಿ
ಸುಮಾರು 29ವರ್ಷದ ನಂತರ ಯೋಗಿ ಆದಿತ್ಯನಾಥ್ ನೋಯ್ಡಾಗೆ ಹಲವು ಬಾರಿ ಭೇಟಿ ನೀಡಿ ಆ ಮೂಢನಂಬಿಕೆಯನ್ನು ಮೀರಿ ನಡೆದಿದ್ದಾರೆ. ಆ ಮೂಲಕ, ಇದೆಲ್ಲಾ ಬರೀಸುಳ್ಳು ಜನಾಶೀರ್ವಾದವೇ ಮುಖ್ಯ ಎನ್ನುವುದನ್ನು ಯೋಗಿ ಆದಿತ್ಯನಾಥ್ ಸಾರಿದ್ದಾರೆ. ಮುಖ್ಯಮಂತ್ರಿಗಳು ಬರೀ ಯಾಕೆ ಹಿರಿಯ ಅಧಿಕಾರಿಗಳೂ ಅಲ್ಲಿಗೆ ಭೇಟಿ ನೀಡಲು ಹಿಂಜರಿಯುತ್ತಾರೆ. ಅಂತದರಲ್ಲಿ ಮುಖ್ಯಮಂತ್ರಿಯೇ ನೋಯ್ಡಾಗೆ ಭೇಟಿ ನೀಡುವ ಮೂಲಕ ಮೂಢನಂಬಿಕೆಯನ್ನು ಸುಳ್ಳು ಮಾಡುವತ್ತ ಯೋಗಿ ಆದಿತ್ಯನಾಥ್ ಹೆಜ್ಜೆಯಿಟ್ಟಿದ್ದಾರೆ.

ಅಖಿಲೇಶ್ ಯಾದವ್ ಆದಿಯಾಗಿ ಎಲ್ಲರೂ ಯೋಗಿ ಆದಿತ್ಯನಾಥ್ ಅವರನ್ನು ದೂರಿದ್ದರು
ಉತ್ತರ ಪ್ರದೇಶದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲೊಂದಾದ ನೋಯ್ಡಾಗೆ ಯೋಗಿ ಆದಿತ್ಯನಾಥ್ ಭೇಟಿ ನೀಡುತ್ತಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆದಿಯಾಗಿ ಎಲ್ಲರೂ ಯೋಗಿ ಆದಿತ್ಯನಾಥ್ ಅವರನ್ನು ದೂರಿದ್ದರು. ಈಗ, ಯೋಗಿ ಆದಿತ್ಯನಾಥ್ ಎಲ್ಲದಕ್ಕೂ ಉತ್ತರವನ್ನು ನೀಡಿದ್ದಾರೆ. ಅಂತಹ ಜನಾದೇಶವನ್ನು ಉತ್ತರ ಪ್ರದೇಶದ ಮತದಾರ ಬಿಜೆಪಿಗೆ ನೀಡಿದ್ದಾನೆ.












Click it and Unblock the Notifications