ಯುಪಿ: ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಪುತ್ರ ಎಸ್‌ಪಿಗೆ ಸೇರ್ಪಡೆ
ಲಕ್ನೋ ಮಾರ್ಚ್ 6: ಉತ್ತರ ಪ್ರದೇಶದಲ್ಲಿ ಏಳನೇ ಹಂತದ ಮತದಾನಕ್ಕೂ ಮುನ್ನ ಅಲಹಾಬಾದ್‌ನ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಅವರ ಪುತ್ರ ಮಯಾಂಕ್ ಜೋಶಿ ಅವರು ಶನಿವಾರ ಸಮಾಜವಾದಿ ಪಕ್ಷಕ್ಕೆ (ಎಸ್‌ಪಿ) ಸೇರ್ಪಡೆಗೊಂಡಿದ್ದಾರೆ. ಹೀಗಾಗಿ ವಾರಗಟ್ಟಲೆ ಸೃಷ್ಟಿಯಾಗಿದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹೇಮಾವತಿ ನಂದನ್ ಬಹುಗುಣ ಅವರ ಮೊಮ್ಮಗನಾಗಿರುವ ಮಯಾಂಕ್ ಜೋಶಿ ಅವರು ಅಜಂಗಢದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡರು. ಫೆಬ್ರವರಿ 22 ರಂದು ಜೋಶಿ ಅವರು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದರು. ಆಗಿನಿಂದಲೂ ಮಯಾಂಕ್ ಜೋಶಿ ಎಸ್‌ಪಿ ಸೇರುತ್ತಾರೆನ್ನುವ ಮಾತುಗಳು ಕೇಳಿಬಂದಿದ್ದವು.
"ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ಹೇಮಾವತಿ ನಂದನ್ ಬಹುಗುಣ ಅವರ ಮೊಮ್ಮಗ, ಯುವ ನಾಯಕ ಮಯಾಂಕ್ ಜೋಶಿ ಅವರು ಅಜಂಗಢದಲ್ಲಿ ಸಮಾಜವಾದಿ ಪಕ್ಷದ ಸದಸ್ಯತ್ವವನ್ನು ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಸಮ್ಮುಖದಲ್ಲಿ ಪಡೆದರು. ಈ ವೇಳೆ ಅಖಿಲೇಶ್ ಯಾದವ್ ಅವರನ್ನು ಸ್ವಾಗತತಿಸಿದರು" ಎಂದು ಎಸ್ಪಿ ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ತಿಳಿಸಿದೆ.

ಆದಾಗ್ಯೂ ರೀಟಾ ಬಹುಗುಣ ಜೋಶಿ ಅವರು ಬಿಜೆಪಿಯಲ್ಲೇ ಉಳಿಯುತ್ತಾರೆ ಮತ್ತು ರಾಷ್ಟ್ರೀಯ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಹೊಂದಿದ್ದಾರೆ ಎಂದು ಅವರ ಮಾಧ್ಯಮ ಉಸ್ತುವಾರಿ ಅಭಿಷೇಕ್ ಶುಕ್ಲಾ ಹೇಳಿದ್ದಾರೆ. ಬಿಜೆಪಿ ಸಂಸದೆ ಪ್ರಸ್ತುತ ತ್ರಿಪುರಾದಲ್ಲಿ ಸಂಸದೀಯ ಸಮಿತಿ ಸಭೆಗೆ ತೆರಳಿದ್ದು, ಮಾಯಾಂಕ್ ಜೋಶಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಸುದ್ದಿ ಮಾಧ್ಯಮಗಳ ಮೂಲಕ ತಿಳಿದು ಬಂದಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ರೀಟಾ ಬಹುಗುಣ ಲಕ್ನೋದ ಕ್ಯಾಂಟ್ ವಿಧಾನಸಭಾ ಕ್ಷೇತ್ರದಿಂದ ತಮ್ಮ ಮಗನಿಗೆ ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದರು. ಆದರೆ ಪಕ್ಷವು ಕಾನೂನು ಸಚಿವ ಬ್ರಜೇಶ್ ಪಾಠಕ್ ಅವರನ್ನು ಕಣಕ್ಕಿಳಿಸಿತು.
ರೀಟಾ ಬಹುಗುಣ ಜೋಶಿ ಅವರು ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು ಮತ್ತು 2017 ರ ವಿಧಾನಸಭಾ ಚುನಾವಣೆಯ ಮೊದಲು ಬಿಜೆಪಿ ಸೇರಿದ್ದರು. ಅವರು ಈಗ ಬಿಜೆಪಿಗೆ ಸೇರ್ಪಡೆಗೊಂಡ ಎಸ್‌ಪಿ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ, ಎಸ್‌ಪಿ ಅಭ್ಯರ್ಥಿ ಅಪರ್ಣಾ ಯಾದವ್ ಅವರನ್ನು ಸೋಲಿಸುವ ಮೂಲಕ ಲಕ್ನೋದ ಕ್ಯಾಂಟ್ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದಿದ್ದಾರೆ.
ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಅವರನ್ನು ಸಚಿವರನ್ನಾಗಿ ಮಾಡಲಾಯಿತು. ಆದರೆ 2019 ರ ಲೋಕಸಭೆ ಚುನಾವಣೆಯಲ್ಲಿ ಅಲಹಾಬಾದ್ ಸಂಸದೀಯ ಕ್ಷೇತ್ರದಿಂದ ಬಿಜೆಪಿಯಿಂದ ನಾಮನಿರ್ದೇಶನಗೊಂಡರು ಮತ್ತು ಚುನಾವಣೆಯಲ್ಲಿ ಗೆದ್ದರು. ಅವರು 2012 ರಲ್ಲಿ ಕ್ಯಾಂಟ್ ಪ್ರದೇಶದ ಕಾಂಗ್ರೆಸ್ ಶಾಸಕರಾಗಿದ್ದರು.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಫೆಬ್ರವರಿ 10 ರಂದು ಪ್ರಾರಂಭವಾಯಿತು. ಮಾರ್ಚ್ 3 ರ ಹೊತ್ತಿಗೆ 6 ಹಂತಗಳ ಮತದಾನ ಮುಗಿದಿದೆ. ಈಗ ಏಳನೇ ಹಂತ ಚುನಾವಣೆ ಮಾರ್ಚ್ 7 ರಂದು ನಡೆಯಲಿದ್ದು, ಎಲ್ಲಾ ಪಕ್ಷಗಳು ತಯಾರಿಯಲ್ಲಿ ತೊಡಗಿವೆ. ಏಳನೇ ಹಂತದಲ್ಲಿ 9 ಜಿಲ್ಲೆಗಳ 54 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಯುಪಿಯಲ್ಲಿ ಏಳನೇ ಹಂತದ ಚುನಾವಣೆ ಕೊನೆಯ ಹಂತದ ಚುನಾವಣೆಯಾಗಿದ್ದು ಎಲ್ಲರ ಚಿತ್ತ ಈ ಹಾಟ್ ಸೀಟ್‌ಗಳತ್ತ ನೆಟ್ಟಿದೆ. ಈವರೆಗೆ ಎಸ್‌ಪಿ ಹಾಗೂ ಬಿಜೆಪಿ ಎರಡೂ ಪಕ್ಷಗಳ ನಡುವೆ ತೀವ್ರ ಪೈಪೋಟಿ ನಡೆದಿದೆ. ಹೀಗಾಗಿ ಈ ಬಾರಿ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶ ಭಾರೀ ನಿರೀಕ್ಷೆಯನ್ನು ಹೆಚ್ಚಿಸಿದೆ.












Click it and Unblock the Notifications