ಯುಪಿ: ಮಹಿಳೆಯರ ಮೇಲೆ ಅತ್ಯಾಚಾರದ ಬೆದರಿಕೆ ಹಾಕಿದ ಧಾರ್ಮಿಕ ಮುಖಂಡ
ಲಕ್ನೋ ಏಪ್ರಿಲ್ 8: ಕೇಸರಿ ವಸ್ತ್ರಧಾರಿಯೊಬ್ಬರು ಸಮುದಾಯದ ವಿರುದ್ಧ ದ್ವೇಷಪೂರಿತ ಭಾಷಣ ಮಾಡುತ್ತಾ ಅತ್ಯಾಚಾರ ಬೆದರಿಕೆಯನ್ನು ಹಾಕಿದ್ದಾರೆ ಎಂದು ಹೇಳಲಾದ ವಿಡಿಯೊ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಷಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಲು ಪೊಲೀಸರಿಗೆ ಮನವಿ ಮಾಡಲಾಗಿದೆ. ಏಪ್ರಿಲ್ 2 ರಂದು ಖೈರಾಬಾದ್ ಪಟ್ಟಣದ ಮಹರ್ಷಿ ಶ್ರೀ ಲಕ್ಷ್ಮಣ ದಾಸ್ ಉದಾಸಿನ್ ಆಶ್ರಮದ ಭಜರಂಗ ಮುನಿ ದಾಸ್ ಅವರು ಹಿಂದೂಗಳ ಹೊಸ ವರ್ಷ ಯುಗಾದಿಯ ಸಂದರ್ಭದಲ್ಲಿ ಮೆರವಣಿಗೆ ನಡೆಸುತ್ತಿದ್ದಾಗ ದ್ವೇಷದ ಭಾಷಣವನ್ನು ಮಾಡಿದ್ದಾರೆ ಎಂದು ಎರಡು ನಿಮಿಷಗಳ ವಿಡಿಯೊದ ಶೀರ್ಷಿಕೆಯಲ್ಲಿ ಬರೆಯಲಾಗಿದೆ.
Recommended Video
ಯಾವುದೇ ಹಿಂದೂ ಹುಡುಗಿಯನ್ನು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ವ್ಯಕ್ತಿ ಚುಡಾಯಿಸಿದರೆ, ಆ ಸಮುದಾಯದ ಮಹಿಳೆಯ ಮೇಲೆ ತಾನೂ ಅತ್ಯಾಚಾರ ಮಾಡುತ್ತಾನೆ ಎಂದು ಬಜರಂಗದಾಸ್ ಮುನಿ ವಿಡಿಯೋದಲ್ಲಿ ಹೇಳುವುದನ್ನು ಕೇಳಬಹುದು. ಅವರ ಈ ವಿಡಿಯೋಕ್ಕೆ ಆಕ್ಷೇಪಾರ್ಹ ಕಾಮೆಂಟ್‌ಗಳು ಹೊರಬಂದಿದೆ. ಅವರ ಮೆರವಣಿಗೆ ಮಸೀದಿಯ ಬಳಿ ತಲುಪಿದಾಗ, ಅವರು ಧ್ವನಿವರ್ಧಕದಲ್ಲಿ ದ್ವೇಷದ ಭಾಷಣವನ್ನು ಮಾಡಲು ಪ್ರಾರಂಭಿಸಿದರು ಎಂದು ಆರೋಪಿಸಲಾಗಿದೆ. ವಿಡಿಯೋದಲ್ಲಿ "ಖೈರಾಬಾದ್‌ನಲ್ಲಿ ಒಬ್ಬ ಹಿಂದೂ ಹುಡುಗಿಯನ್ನು ನೀವು ಚುಡಾಯಿಸಿದರೆ, ನಾನು ನಿಮ್ಮ ಮಗಳು ಮತ್ತು ಸೊಸೆಯನ್ನು ನಿಮ್ಮ ಮನೆಯಿಂದ ಬಹಿರಂಗವಾಗಿ ಕರೆತಂದು ಅತ್ಯಾಚಾರ ಮಾಡುತ್ತೇನೆ ಎಂದು ನಾನು ನಿಮಗೆ ತುಂಬಾ ಪ್ರೀತಿಯಿಂದ ಹೇಳುತ್ತಿದ್ದೇನೆ" ಎಂದು ಅವರು ಹೇಳಿದರು.
ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿದ ವೀಡಿಯೊದಲ್ಲಿ, ಧಾರ್ಮಿಕ ಮುಖಂಡರೊಬ್ಬರು ನಿರ್ದಿಷ್ಟ ಸಮುದಾಯದ ಮಹಿಳೆಯರನ್ನು ಅಪಹರಿಸಿ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕುತ್ತಿರುವುದನ್ನು ಕೇಳಬಹುದು. ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಸರಿ ವಸ್ತ್ರಧಾರಿ ಬಜರಂಗ ಮುನಿ ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ.

ವೀಡಿಯೊದಲ್ಲಿ, ಕೇಸರಿ ವಸ್ತ್ರಧಾರಿ ವಾಹನದ ಒಳಗಿನಿಂದ ಮೈಕ್‌ನಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅವರು ಖೈರಾಬಾದ್ ಎಂಬ ಪಟ್ಟಣದಲ್ಲಿ ಧಾರ್ಮಿಕ ಮುಖಂಡರಾಗಿದ್ದಾರೆಂದು ತಿಳಿದುಬಂದಿದೆ. ವಿಡಿಯೋದಲ್ಲಿ ಅವನು ಹಿಂದಿಯಲ್ಲಿ ಹೇಳುವುದನ್ನು ಕೇಳಬಹುದು, "ಒಂದು ಪ್ರದೇಶದಲ್ಲಿ ಯಾವುದೇ ಹುಡುಗಿಗೆ ಪುರುಷ ಕಿರುಕುಳ ನೀಡಿದರೆ, ನಾನು ನಿಮ್ಮ ಹೆಣ್ಣುಮಕ್ಕಳನ್ನು ನಿಮ್ಮ ಮನೆಯಿಂದ ಎತ್ತಿಕೊಂಡು ಅತ್ಯಾಚಾರ ಮಾಡುತ್ತೇನೆ" ಎಂದಿದ್ದಾರೆ. ಅವರ ಈ ಹೇಳಿಕೆಗೆ ನೆರೆದವರಿಂದ ಹರ್ಷೋದ್ಘಾರ ವ್ಯಕ್ತವಾಯಿತು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ, ಉತ್ತರಪ್ರದೇಶ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ದೀಕ್ಷಿತ್ ನೇತೃತ್ವದಲ್ಲಿ ಸೀತಾಪುರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆಯಲ್ಲಿ ಹೊರಬೀಳುವ ಸತ್ಯ ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications