ಹೇಮಾ ಮಾಲಿನಿ ಜೊತೆ ಜಯಂತ್ ಚೌಧರಿ ಹೋಲಿಕೆ ಅಸಾಧ್ಯ: ಅನುರಾಗ್ ಠಾಕೂರ್
ಲಕ್ನೋ, ಫೆಬ್ರವರಿ 2: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಕಣದಲ್ಲಿ ಮಥುರಾದ ಬಿಜೆಪಿ ಸಂಸದೆ ಹೇಮಾ ಮಾಲಿನಿ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹೇಮಾ ಮಾಲಿನಿ ಎಂಬ ಹೆಸರನ್ನು ಬಳಸಿದ ರಾಷ್ಟ್ರೀಯ ಲೋಕ ದಳ ಮುಖ್ಯಸ್ಥ ಜಯಂತ್ ಚೌಧರಿ ಹೇಳಿಕೆ ವಿರುದ್ಧ ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿರುಗೇಟು ನೀಡಿದ್ದಾರೆ.
ಬುಧವಾರ ಎಎನ್ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್, ಮಥುರಾ ಸಂಸದೆಯ ಜೊತೆ ಆರ್‌ಎಲ್‌ಡಿ ಮುಖ್ಯಸ್ಥರನ್ನು ಹೋಲಿಸಲು ಸಾಧ್ಯವಿಲ್ಲ ಎಂದರು.
"ಜಯಂತ್ ಜಿ ಎಂದಿಗೂ ಹೇಮಾ ಮಾಲಿನಿ ಆಗಲು ಸಾಧ್ಯವಿಲ್ಲ. ಏಕೆಂದರೆ ಅವರು ನಟಿಯಾಗಿ ಮತ್ತು ನಾಯಕರಾಗಿ ದೇಶ ಮತ್ತು ಪ್ರಪಂಚದಲ್ಲಿ ವಿಭಿನ್ನ ಸ್ಥಾನ ಹೊಂದಿದ್ದಾರೆ. ಮಥುರಾದ ಜನರು ಆಕೆಯ ಮೇಲೆ ಅಪಾರ ಪ್ರೀತಿಯನ್ನು ಧಾರೆಯೆರೆದು ಅಧಿಕಾರಕ್ಕೆ ತಂದಿದ್ದಾರೆ," ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ಮಥುರಾ ಕಲ್ಯಾಣಕ್ಕಾಗಿ ಹೇಮಾ ಮಾಲಿನಿ ಕಾರ್ಯ:
ಬಿಜೆಪಿ ಸಂಸದೆ ಹೇಮಾ ಮಾಲಿನಿ ರಾಜ್ಯದ ಜನರಿಗಾಗಿ ಕೆಲಸ ಮಾಡಿದ್ದಾರೆ ಎಂದು ಯುಪಿ ಚುನಾವಣೆಯ ಸಹ ಉಸ್ತುವಾರಿ ಅನುರಾಗ್ ಠಾಕೂರ್ ಹೇಳಿದ್ದಾರೆ. "ಹೇಮಾ ಜೀ ಎಲ್ಲಿದ್ದಾರೆ ಎಂಬುದು ಮುಖ್ಯವಲ್ಲ, ಅವರು ಯಾವಾಗಲೂ ಮಥುರಾ ಮತ್ತು ಉತ್ತರ ಪ್ರದೇಶದ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಿದ್ದಾರೆ," ಎಂದರು.
ಹೇಮಾ ಮಾಲಿನಿ ಜನರ ನಡುವೆ ಬದುಕುವ ನಾಯಕಿ:
ಬಿಜೆಪಿ ಸಂಸದೆ ಹೇಮಾ ಮಾಲಿನಿಯವರನ್ನು ಶ್ಲಾಘಿಸಿದ ಠಾಕೂರ್, ಅವರು ಸಾಮಾನ್ಯ ಜನರ ನಡುವೆ ವಾಸಿಸುವ ನಾಯಕರು ಎಂದು ಪ್ರತಿಪಾದಿಸಿದರು. "ಆರ್‌ಎಲ್‌ಡಿ ಕಾರ್ಯಕರ್ತರು ಜಯಂತ್ ಚೌಧರಿಯನ್ನು ಭೇಟಿ ಮಾಡಲು ದೆಹಲಿಗೆ ಭೇಟಿ ನೀಡಬೇಕಾಗಿದೆ, ಆದರೆ ಮಾಲಿನಿ ಜಿ ಸಾಮಾನ್ಯ ಜನರ ನಡುವೆ ವಾಸಿಸುವ ನಾಯಕರಾಗಿದ್ದಾರೆ," ಎಂದರು.
ನಾನು ಹೇಮಾ ಮಾಲಿನಿ ಆಗುವುದಕ್ಕೆ ಬಯಸುವುದಿಲ್ಲ:
"ಅವರೆಲ್ಲರೂ ನನ್ನ ಬಗ್ಗೆ ಏನು ಹೇಳುತ್ತಾರೋ ಗೊತ್ತಿಲ್ಲ. ಅವರಿಗೆ ನನ್ನ ಬಗ್ಗೆ ಪ್ರೀತಿ ಅಥವಾ ಭಾವನೆ ಇದೆ ಅಂತಲ್ಲ. ನಾನು ಅವರಿಗೆ ಹೇಳುತ್ತೇನೆ. 'ನನ್ನನ್ನು ಸಮಾಧಾನಪಡಿಸಿ ನಿಮಗೆ ಏನು ಪ್ರಯೋಜನವಿದೆ?. ನಾನು ಹೇಮಾ ಮಾಲಿನಿಯಾಗಲು ಬಯಸುವುದಿಲ್ಲ. ಜನರಿಗಾಗಿ ಏನು ಮಾಡುತ್ತೀರಿ? ಏಳು ರೈತರ ಕುಟುಂಬಗಳಿಗೆ ಏನು ಕೊಟ್ಟಿದ್ದೀರಿ? ಅಜಯ್ ಮಿಶ್ರಾ ಇನ್ನೂ ಏಕೆ ಸಂಪುಟದಲ್ಲಿ ಸಚಿವರಾಗಿದ್ದಾರೆ?, ಎಂದು ಜಯಂತ್ ಚೌಧರಿ ಪ್ರಶ್ನೆ ಮಾಡಿದ್ದರು.
ಜಯಂತ್ ಚೌಧರಿ ಸೆಳೆಯಲು ಅಮಿತ್ ಶಾ ಪ್ರಯತ್ನ:
ಕಳೆದ ಜನವರಿ 26ರಂದು ನವದೆಹಲಿಯಲ್ಲಿ ಜಾಟ್ ನಾಯಕರ ಸಭೆ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಲೋಕ ದಳದ ಪರವಾಗಿ ಮಾತನಾಡಿದ್ದರು. ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ ಕುರಿತು ಮೃದು ಧೋರಣೆ ಪ್ರದರ್ಶಿಸಿದ ಅಮಿತ್ ಶಾ, ಆರ್‌ಎಲ್‌ಡಿ ಪಾಲಿಗೆ ಬಿಜೆಪಿ ಸದಾ ತೆರೆದ ಮನೆ ಆಗಿರುತ್ತದೆ. ಜಯಂತ್ ಚೌಧರಿ ಯಾವಾಗ ಬೇಕಿದ್ದರೂ ಭಾರತೀಯ ಜನತಾ ಪಕ್ಷವನ್ನು ಸೇರಿಕೊಳ್ಳಬಹುದು ಎಂದಿದ್ದರು.
ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬೀಳುವವರೆಗೂ ಮಾತ್ರ ಅಖಿಲೇಶ್ ಯಾದವ್ ಮತ್ತು ಜಯಂತ್ ಚೌಧರಿ ಒಂದಾಗಿರುತ್ತಾರೆ. ಫಲಿತಾಂಶದ ನಂತರದಲ್ಲಿ ಒಂದು ವೇಳೆ ಸಮಾಜವಾದಿ ಪಕ್ಷಕ್ಕೆ ಅಧಿಕಾರ ಸಿಕ್ಕರೆ, ಅಜಂ ಖಾನ್ ಸಂಪುಟವನ್ನು ಸೇರುತ್ತಾರೆ. ಈಗ ಅಖಿಲೇಶ್ ಜೊತೆಗೆ ಗುರುತಿಸಿಕೊಂಡಿರುವ ಜಯಂತ್ ಚೌಧರಿ ಸರ್ಕಾರದಿಂದ ಹೊರಗುಳಿಯುತ್ತಾರೆ ಎಂದು ಅಮಿತ್ ಶಾ ಆರೋಪಿಸಿದ್ದರು.












Click it and Unblock the Notifications