ಯುಪಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಮ್ಮುಖದಲ್ಲಿ ಎಸ್‌ಪಿ, ಬಿಎಸ್‌ಪಿ ನಾಯಕರು ಬಿಜೆಪಿಗೆ ಸೇರ್ಪಡೆ
ಲಕ್ನೋ, ಜನವರಿ 29: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಪಕ್ಷಾಂತರ ಪರ್ವ ಮುಂದುವರಿದಿದೆ. ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷದ ನಾಯಕರು ಭಾರತೀಯ ಜನತಾ ಪಕ್ಷದ ಕಡೆಗೆ ಮುಖ ಮಾಡಿದ್ದಾರೆ.
ಲಕ್ನೋದಲ್ಲಿ ಶನಿವಾರ ಯುಪಿ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್, ಕೇಂದ್ರ ಕೃಷಿ ರಾಜ್ಯ ಸಚಿವೆ ಮತ್ತು ಉತ್ತರ ಪ್ರದೇಶ ಚುನಾವಣಾ ಸಹ ಪ್ರಭಾರಿ ಶೋಭಾ ಕರಂದ್ಲಾಜೆ ಸಮ್ಮುಖದಲ್ಲಿ ಹಲವು ನಾಯಕರು ಬಿಜೆಪಿಗೆ ಸೇರ್ಪಡೆಯಾದರು.
ಸಿಧೌಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮನೀಶ್ ರಾವತ್ ಮತ್ತು ಹಮೀರ್‌ಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಸಮಾಜವಾದಿ ಪಕ್ಷದ ಮಾಜಿ ಅಭ್ಯರ್ಥಿ ಡಾ ಮನೋಜ್ ಕುಮಾರ್ ಪ್ರಜಾಪತಿ ಕಮಲ ಪಕ್ಷಕ್ಕೆ ಸೇರಿಕೊಂಡರು. ಉತ್ತರ ಪ್ರದೇಶದ ಮಾಜಿ ರಾಜ್ಯ ಸಚಿವ ಮತ್ತು ಭದೋಹಿ ಅಸೆಂಬ್ಲಿ ಕ್ಷೇತ್ರದ ಬಿಎಸ್‌ಪಿ ಶಾಸಕ ರಂಗನಾಥ್ ಮಿಶ್ರಾ ಕೂಡಾ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.
ಉತ್ತರ ಪ್ರದೇಶದಲ್ಲಿ ಬಿಜೆಪಿ ವರ್ಚಸ್ಸು ಹೆಚ್ಚಳ:
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಭಾವಶಾಲಿ ಆಡಳಿತದಿಂದಾಗಿ ವಿರೋಧ ಪಕ್ಷದ ನಾಯಕರು ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಾರೆ. ರಾಜ್ಯಾದ್ಯಂತ ಬಿಜೆಪಿ ವರ್ಚಸ್ಸು ಹೆಚ್ಚುತ್ತಿದೆ. ಮುಂಬರುವ ವಿಧಾನಸಭಾ ಚುನವಣೆಯಲ್ಲಿ ಬಿಜೆಪಿ ನಿಚ್ಚಳ ಗೆಲುವು ಸಾಧಿಸಲಿದೆ ಎಂದು ಉತ್ತರ ಪ್ರದೇಶದ ಚುನಾವಣಾ ಸಹ ಉಸ್ತುವಾರಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯ ಪಟ್ಟಿದ್ದಾರೆ.

ಮುಜಾಫರ್‌ನಗರದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಪ್ರಚಾರ:
ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿರುವ ಮುಜಾಫರ್‌ನಗರ ಜಿಲ್ಲೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಶನಿವಾರ ಭರ್ಜರಿ ಪ್ರಚಾರ ನಡೆಸಿದರು. ಇದೇ ವೇಳೆ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಲೋಕ ದಳದ ವಿರುದ್ಧ ವಾಗ್ದಾಳಿ ಮುಂದುವರಿಸಿದರು. ಜಯಂತ್ ಚೌಧರಿಯವರನ್ನು ಯಾರು ಆಹ್ವಾನಿಸುತ್ತಿದ್ದಾರೆ, ಅವರನ್ನು ಆಹ್ವಾನಿಸುವ ಸ್ಥಿತಿಯಲ್ಲಿ ಯಾರಿದ್ದಾರೆ ಎಂದು ಪ್ರಶ್ನೆ ಮಾಡಿದರು.
"ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ಫಲಿತಾಂಶ ಬರುವವರೆಗೂ ಮಾತ್ರ ಅಖಿಲೇಶ್ ಯಾದವ್ ಮತ್ತು ಜಯಂತ್ ಚೌಧರಿ ಒಂದಾಗಿರುತ್ತಾರೆ. ಒಂದು ವೇಳೆ ಸಮಾಜವಾದಿ ಪಕ್ಷದ ಸರ್ಕಾರ ರಚನೆಯಾದರೆ ಅಜಂ ಖಾನ್ ಸರ್ಕಾರದೊಳಗೆ ಬರುತ್ತಾರೆ, ಅದೇ ಸಮಯಕ್ಕೆ ಜಯಂತ್ ಭಾಯ್ ಹೊರಗೆ ಉಳಿಯುತ್ತಾರೆ. ಚುನಾವಣೆ ಬಳಿಕೆ ಏನಾಗುತ್ತದೆ ಎಂಬುದನ್ನು ಅವರ ಅಭ್ಯರ್ಥಿಗಳ ಪಟ್ಟಿಯೇ ಹೇಳುತ್ತದೆ," ಎಂದು ಅಮಿತ್ ಶಾ ಟೀಕಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.
2017ರಲ್ಲಿ ಮತದಾರರ ತೀರ್ಪು ಹೇಗಿತ್ತು?
ಈ ಹಿಂದೆ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.












Click it and Unblock the Notifications