UP Election Result 2022: ಕೈ ಕಟ್, ಸೈಕಲ್ ಮತ್ತೆ ಪಂಚರ್: ಕಮಲದ ಕಲರವ
ಲಕ್ನೋ ಮಾರ್ಚ್ 10: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಅಂತಿಮ ಫಲಿತಾಂಶ ಇನ್ನೇನು ಕೆಲವೇ ಗಂಟೆಗಳಲ್ಲಿ ಹೊರಬೀಳಲಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಯುಪಿ ಜನರು ಮತ್ತು ನಾಯಕರು ಕಾಯುತ್ತಿದ್ದ ಯುಪಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಎಕ್ಸಿಟ್ ಪೋಲ್‌ಗಳ ಗದ್ದಲದ ನಡುವೆಯೇ ಉತ್ತರ ಪ್ರದೇಶದ 403 ವಿಧಾನಸಭಾ ಸ್ಥಾನಗಳಿಗೆ ಇಂದು ಮತ ಎಣಿಕೆ ನಡೆಯುತ್ತಿದೆ. ಮತ ಎಣಿಕೆಗೆ ಚುನಾವಣಾ ಆಯೋಗದಿಂದ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು ಗಂಟೆಗೊಮ್ಮೆ ನವೀಕರಣಗಳನ್ನು ಮಾಡಲಾಗುತ್ತಿದೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬೆಳಗ್ಗೆ 11 ಗಂಟೆಯವರೆಗಿನ ಫಲಿತಾಂಶದಲ್ಲಿ ಬಿಜೆಪಿ ಅಗ್ರಸ್ಥಾನದಲ್ಲಿದೆ. ಭಾರತೀಯ ಜನತಾ ಪಕ್ಷವು ಯುಪಿಯಲ್ಲಿ ಮತ್ತೊಮ್ಮೆ ಭರ್ಜರಿ ಬಹುಮತವನ್ನು ಪಡೆದುಕೊಂಡಿದೆ. ಯುಪಿಯಲ್ಲಿ ಬಿಜೆಪಿ 273 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಮತ್ತೊಂದೆಡೆ, ಸಮಾಜವಾದಿ ಪಕ್ಷದ ಮೈತ್ರಿ 124 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಹುಜನ ಸಮಾಜ ಪಕ್ಷ 6 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು 7 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
ಎಕ್ಸಿಟ್ ಪೋಲ್‌ಗಳಲ್ಲಿ ಯುಪಿಯಲ್ಲಿ ಯಾರ ಸರ್ಕಾರ?
ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿವೆ. ಇದರಲ್ಲಿ ಮೊದಲ ಹಂತದ ಮತದಾನ ಫೆಬ್ರವರಿ 10 ರಂದು ಮತ್ತು ಕೊನೆಯ ಹಂತ ಮಾರ್ಚ್ 7 ರಂದು ನಡೆಯಿತು. ಮಾರ್ಚ್ 7 ರ ಸಂಜೆ ಬಿಡುಗಡೆಯಾದ ಎಕ್ಸಿಟ್ ಪೋಲ್ ಫಲಿತಾಂಶಗಳು ಯುಪಿಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಮತ್ತೊಮ್ಮೆ ಭಾರತೀಯ ಜನತಾ ಪಕ್ಷದ ಸರ್ಕಾರ ರಚನೆಯಾಗಲಿದೆ ಎಂದು ಹೇಳಿವೆ. ಅದೇ ಸಮಯದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ವಿಪಕ್ಷ ನಾಯಕರು, ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ನಿರಾಕರಿಸುತ್ತಾ, ಯುಪಿ ಜನರು ಈ ಬಾರಿ ಬದಲಾವಣೆಗೆ ಮತ ಹಾಕಿದ್ದಾರೆ ಮತ್ತು ರಾಜ್ಯದಿಂದ ಬಿಜೆಪಿ ನಿರ್ಗಮನ ಖಚಿತ ಎಂದು ಸ್ಪಷ್ಟವಾಗಿ ಹೇಳಿದ್ದರು. ಆದರೆ ಇಂದಿನ ಫಲಿತಾಂಶ ಗಮನಿಸುತ್ತಿದ್ದರೆ ವಿಪಕ್ಷ ನಾಯಕರ ಹೇಳಿಕೆಗೆ ತದ್ವಿರುದ್ಧವಾಗಿದೆ.

ಉತ್ತರ ಪ್ರದೇಶದ 403 ವಿಧಾನಸಭಾ ಸ್ಥಾನಗಳ ಪೈಕಿ ಅಧಿಕ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷವು ಪ್ರಚಂಡ ಮುನ್ನಡೆ ಸಾಧಿಸಿದೆ. ಚುನಾವಣೆಯಲ್ಲಿ ಎಲ್ಲರ ಕಣ್ಣು ನೆಟ್ಟಿರುವ ಸ್ಥಾನಗಳ ಪೈಕಿ ಮೈನ್‌ಪುರಿಯ ಕರ್ಹಾಲ್ ಕ್ಷೇತ್ರವೂ ಇದೆ. ಇಲ್ಲಿ ಎಸ್‌ಪಿಯಿಂದ ಮಾಜಿ ಸಿಎಂ ಅಖಿಲೇಶ್ ಯಾದವ್ ಮತ್ತು ಕೇಂದ್ರದಲ್ಲಿ ಬಿಜೆಪಿಯಿಂದ ಸಚಿವ ಎಸ್‌ಪಿ ಬಘೇಲ್ ಸ್ಪರ್ಧಿಸುತ್ತಿದ್ದಾರೆ. ಅಖಿಲೇಶ್ ಯಾದವ್ ಅವರ ಸೈಕಲ್ ಕರ್ಹಾಲ್ ರೇಸ್ ನಲ್ಲಿ ಮುಂದಿದೆ. ಇದು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಮೊದಲ ವಿಧಾನಸಭಾ ಚುನಾವಣೆಯಾಗಿದೆ.
ಕರ್ಹಾಲ್ ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೆ ಸುಮಾರು 36 ಸಾವಿರ ಮತಗಳ ಎಣಿಕೆ ನಡೆದಿದ್ದು, ಈ ಪೈಕಿ ಅಖಿಲೇಶ್ ಯಾದವ್ 25 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದಾರೆ. ಅವರ ನಂತರ ಬಿಜೆಪಿಯ ಎಸ್‌ಪಿ ಬಘೇಲ್ 9 ಸಾವಿರ ಮತಗಳನ್ನು ಪಡೆದಿದ್ದಾರೆ. ಹೀಗಿರುವಾಗ ಅಖಿಲೇಶ್ ಸುಮಾರು 16 ಸಾವಿರ ಮತಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಬಹುಜನ ಸಮಾಜ ಪಕ್ಷದ ಕುಲದೀಪ್ ನಾರಾಯಣ್ ಇಲ್ಲಿಯವರೆಗೆ 1900 ಮತಗಳನ್ನು ಪಡೆದಿದ್ದಾರೆ. ಯುಪಿ ವಿಧಾನಸಭಾ ಚುನಾವಣೆಯ ನಾಲ್ಕನೇ ಹಂತದಲ್ಲಿ ಕರ್ಹಾಲ್ ವಿಧಾನಸಭೆಯಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಿತು. ಈ ಚುನಾವಣೆಯಲ್ಲಿ ಕರ್ಹಾಲ್ ಕ್ಷೇತ್ರದಲ್ಲಿ ಶೇ.66ರಷ್ಟು ಮತದಾನವಾಗಿದೆ.

ಕರ್ಹಾಲ್‌ನಲ್ಲಿ ಎಸ್‌ಪಿ ಪ್ರಬಲ
ಕರ್ಹಾಲ್ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷ ಉತ್ತಮ ಪ್ರಭಾವ ಬೀರಿದೆ. ಕಳೆದ ಮೂರು ದಶಕಗಳಲ್ಲಿ ಮುಲಾಯಂ ಸಿಂಗ್ ಬೆಂಬಲಿತ ಅಭ್ಯರ್ಥಿ ಮಾತ್ರ ಇಲ್ಲಿಂದ ಗೆಲುವು ಸಾಧಿಸುತ್ತಿದ್ದಾರೆ. ಕರ್ಹಾಲ್ ವಿಧಾನಸಭಾ ಸ್ಥಾನಕ್ಕೆ 1985 ರಲ್ಲಿ ದಲಿತ ಮಜ್ದೂರ್ ಕಿಸಾನ್ ಪಕ್ಷದ ಬಾಬುರಾಮ್ ಯಾದವ್ ಶಾಸಕರಾಗಿ ಆಯ್ಕೆಯಾಗಿದ್ದರು.
ಚುನಾವಣಾ ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ? ಎಲ್ಲಿ?
ಒನ್ ಇಂಡಿಯಾ ಕನ್ನಡದ ಲೈವ್ ಲಿಂಕ್ ಮೂಲಕ ನೀವು ಪಂಚ ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶವನ್ನು ನೀವು ನೋಡಬಹುದು. ಇದನ್ನು ಹೊರತುಪಡಿಸಿ ಚುನಾವಣಾ ಫಲಿತಾಂಶಗಳನ್ನು ಭಾರತೀಯ ಚುನಾವಣಾ ಆಯೋಗದ (ಇಸಿಐ) ವೆಬ್‌ಸೈಟ್ ಅಂದರೆ eciresults.nic.in ನಲ್ಲಿ ಪರಿಶೀಲಿಸಬಹುದು.












Click it and Unblock the Notifications