UP Election Result 2022: ಯುಪಿಯಲ್ಲಿ ಮ್ಯಾಜಿಕ್ ಮಾಡಿದ ಬಿಜೆಪಿ
ಉತ್ತರಪ್ರದೇಶದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಮಾಡಿದ ಪ್ರಯತ್ನ ಯಶಸ್ವಿಯಾದಂತೆ ಕಾಣಿಸುತ್ತಿದೆ. ಈ ಬಾರಿ ಮತ್ತೆ ಬಿಜೆಪಿ ಉತ್ತರಪ್ರದೇಶದಲ್ಲಿ ಮ್ಯಾಜಿಕ್ ಮಾಡಿದೆ. ಬೆಳಗ್ಗೆ 11.30 ಸುಮಾರಿಗೆ 267 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿ ಗೆಲುವಿನ ಬಾವುಟ ಹಾರಿಸುತ್ತಿದೆ. ಹೀಗಾಗಿ ಸಿಎಂ ಯೋಗಿ ಆದಿತ್ಯನಾಥ್ ಅವರು ಸ್ಪರ್ಧಿಸಿದ್ದ ಗೋರಖ್‌ಪುರ ಕ್ಷೇತ್ರದಲ್ಲಿ ಈಗಾಗಲೇ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.
267 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದರೆ, 121 ಕ್ಷೇತ್ರಗಳಲ್ಲಿ ಎಸ್‌ಪಿ, ಕಾಂಗ್ರೆಸ್ 03, ಬಿಎಸ್‌ಪಿ 06 ಹಾಗೂ ಇತರೆ ಪಕ್ಷಗಳು 03 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಸಿರತು ಕ್ಷೇತ್ರದಲ್ಲಿ ಎಸ್‌ಪಿ ಅಭ್ಯರ್ಥಿ ಡಾ. ಪಲ್ಲವಿ ಪಟೇಲ್ ಗೆಲುವಿನ ಬಾವುಟ ಹಾರಿಸುವ ಲಕ್ಷಣಗಳು ಹೆಚ್ಚಾಗಿದ್ದು ಬಿಜೆಪಿ ಅಭ್ಯರ್ಥಿ ಕೇಶವ್ ಪ್ರಸಾದ್ ಮೌರ್ಯ ಅವರಿಗೆ ಹಿನ್ನಡೆಯಾಗಿದೆ.
ಬೆಳಗ್ಗೆ 11.30 ಸುಮಾರಿಗೆ ವಾರಣಾಶಿ ದಕ್ಷಿಣದಲ್ಲಿ ಎಸ್‌ಪಿ ಅಭ್ಯರ್ಥಿ ರಾಮೇಶ್ವರನಾಥ್ ದೀಕ್ಷಿತ್ ಮುನ್ನಡೆ ಸಾಧಿಸಿದರೆ, ಬಿಜೆಪಿ ಅಭ್ಯರ್ಥಿ ನೀಲಕಂಠ ತಿವಾರಿ ಅವರಿಗೆ ಹಿನ್ನಡೆಯಾಗಿದೆ. ಉನ್ನಾವೋದಲ್ಲಿ ಬಿಜೆಪಿ ಅಭ್ಯರ್ಥಿ ಪಂಕಜ್ ಗುಪ್ತಾ ಅವರು ಮುನ್ನಡೆ ಸಾಧಿಸಿದರೆ ಕಾಂಗ್ರೆಸ್ ಅಭ್ಯರ್ಥಿ ಆಶಾ ಸಿಂಗ್ ಅವರಿಗೆ ಹಿನ್ನಡೆಯಾಗಿದೆ.

ಯುಪಿಯಲ್ಲಿ ಏಳು ಹಂತಗಳ ಚುನಾವಣೆ:
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10ರಂದು ಮೊದಲ ಹಂತದಲ್ಲಿ ರಾಜ್ಯದ ಪಶ್ಚಿಮ ಭಾಗದ 11 ಜಿಲ್ಲೆಗಳ 58 ಸ್ಥಾನಗಳಿಗೆ ಮತದಾನ ನಡೆಯಿತು. ಎರಡನೇ ಹಂತದಲ್ಲಿ ಫೆಬ್ರವರಿ 14ರಂದು ರಾಜ್ಯದ 55 ಸ್ಥಾನಗಳಿಗೆ ಮತದಾನ ನಡೆಯಿತು. ಉತ್ತರ ಪ್ರದೇಶದಲ್ಲಿ ಫೆಬ್ರವರಿ 20ರಂದು ಮೂರನೇ ಹಂತದಲ್ಲಿ 59 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯಿತು. ಫೆಬ್ರವರಿ 23ರಂದು ನಾಲ್ಕನೇ ಹಂತದಲ್ಲಿ 60 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಸಲಾಗಿತ್ತು. ತದನಂತರ ಫೆಬ್ರವರಿ 27ರಂದು ಐದನೇ ಹಂತದಲ್ಲಿ 60 ಸ್ಥಾನಗಳಿಗೆ ಚುನಾವಣೆ ನಡೆಯಿತು. ಮಾರ್ಚ್ 3ರಂದು ಆರನೇ ಹಂತದಲ್ಲಿ 57 ಸ್ಥಾನಗಳಿಗೆ ಮತ್ತು ಮಾರ್ಚ್ 7ರಂದು ಅಂತಿಮವಾಗಿ ಏಳನೇ ಹಂತದಲ್ಲಿ 54 ಕ್ಷೇತ್ರಗಳಿಗೆ ಮತದಾನ ನಡೆಸಲಾಗಿತ್ತು.
ಚುನಾವಣಾಪೂರ್ವ ಸಮೀಕ್ಷೆ ಹೇಳಿದ್ದೇನು?:
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಹಲವು ಸಂಸ್ಥೆಗಳು ಅಭಿಪ್ರಾಯ ಸಂಗ್ರಹಿಸಿ ಸಮೀಕ್ಷೆ ನಡೆಸಿದ್ದವು. ಅದೇ ರೀತಿ ಗ್ರೌಂಡ್ ಜೀರೋ ರಿಸರ್ಚ್‌ನ ಅಭಿಪ್ರಾಯ ಸಂಗ್ರಹದ ಪ್ರಕಾರ, ಭಾರತೀಯ ಜನತಾ ಪಕ್ಷವು ಉತ್ತರ ಪ್ರದೇಶದಲ್ಲಿ ಸತತ ಎರಡನೇ ಅವಧಿಗೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಲಿದೆ ಎಂದು ಭವಿಷ್ಯ ನುಡಿದಿತ್ತು. ಉತ್ತರ ಪ್ರದೇಶದ 403 ವಿಧಾನಸಭೆ ಕ್ಷೇತ್ರಗಳ ಪೈಕಿ ಆಡಳಿತಾರೂಢ ಕೇಸರಿ ಪಕ್ಷವು 230 ರಿಂದ 235 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಸಮಾಜವಾದಿ ಪಕ್ಷದ ನೇತೃತ್ವದ ಮೈತ್ರಿಕೂಟ 160 ರಿಂದ 165 ಸ್ಥಾನಗಳನ್ನು ಗೆಲ್ಲುತ್ತದೆ. ಕಾಂಗ್ರೆಸ್ 3 ರಿಂದ 7 ಹಾಗೂ ಬಿಎಸ್ಪಿ 2 ರಿಂದ 5 ಸ್ಥಾನಗಳನ್ನು ಪಡೆಯುತ್ತವೆ ಎಂದು ಅಂಕಿ-ಅಂಶಗಳು ತಿಳಿಸಿದ್ದವು.

ಮಾ.10ರಂದು ಪಂಚರಾಜ್ಯಗಳ ಚುನಾವಣಾ ಭವಿಷ್ಯ:
ಉತ್ತರ ಪ್ರದೇಶದ 403 ವಿಧಾನಸಭೆ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಮತದಾನ ನಡೆಸಲಾಗಿದೆ. ಉತ್ತರ ಪ್ರದೇಶದ ಹೊರತಾಗಿ ನಾಲ್ಕು ರಾಜ್ಯಗಳಲ್ಲೂ ವಿಧಾನಸಭೆ ಚುನಾವಣೆ ನಡೆದಿದೆ. ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರದಲ್ಲೂ ಚುನಾವಣೆ ನಡೆದಿದ್ದು, ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಮಾರ್ಚ್ 10ರಂದು ಹೊರಬೀಳಲಿದೆ.
ಕಳೆದ 2017ರಲ್ಲಿ ಯುಪಿ ಮತದಾರರ ತೀರ್ಪು?:
2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.
ಚುನಾವಣಾ ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ? ಎಲ್ಲಿ?
ಒನ್ ಇಂಡಿಯಾ ಕನ್ನಡದ ಲೈವ್ ಲಿಂಕ್ ಮೂಲಕ ನೀವು ಪಂಚ ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶವನ್ನು ನೀವು ನೋಡಬಹುದು. ಇದನ್ನು ಹೊರತುಪಡಿಸಿ ಚುನಾವಣಾ ಫಲಿತಾಂಶಗಳನ್ನು ಭಾರತೀಯ ಚುನಾವಣಾ ಆಯೋಗದ (ಇಸಿಐ) ವೆಬ್‌ಸೈಟ್ ಅಂದರೆ eciresults.nic.in ನಲ್ಲಿ ಪರಿಶೀಲಿಸಬಹುದು.












Click it and Unblock the Notifications