ಅಲಹಾಬಾದ್, ಫೈಜಾಬಾದ್ ಹೆಸರು ಬದಲಿಗೆ ಉ.ಪ್ರ ಸಚಿವ ಸಂಪುಟ ಒಪ್ಪಿಗೆ
ಲಖನೌ, ನವೆಂಬರ್ 13: ಉತ್ತರಪ್ರದೇಶ ಸರಕಾರವು ಮಂಗಳವಾರ ಅಧಿಕೃತವಾಗಿ ಅಲಹಾಬಾದ್ ಹಾಗೂ ಫೈಜಾಬಾದ್ ಹೆಸರುಗಳ ಮರು ನಾಮಕರಣಕ್ಕೆ ಅಂತಿಮ ಅಂಕಿತ ಹಾಕಿದೆ. ಅಲಹಾಬಾದ್ ಹಾಗೂ ಫೈಜಾಬಾದ್ ವಿಭಾಗವನ್ನು ಕ್ರಮವಾವಿ ಪ್ರಯಾಗ್ ರಾಜ್ ಹಾಗೂ ಅಯೋಧ್ಯಾ ವಿಭಾಗ ಎಂದು ಕರೆಯಲಾಗುವುದು.
ಅಲಹಾಬಾದ್ ಜಿಲ್ಲೆಯನ್ನು ಪ್ರಯಾಗ್ ರಾಜ್ ಎಂದು ಬದಲಿಸುವುದಾಗಿ ಕಳೆದ ತಿಂಗಳು ಹೇಳಲಾಗಿತ್ತು. ಇನ್ನು ಫೈಜಾಬಾದ್ ಅನ್ನು ಅಯೋಧ್ಯಾ ಎಂದು ಮರು ನಾಮಕರಣ ಮಾಡುವುದಾಗಿ ದೀಪಾವಳಿಯ ಹಿಂದಿನ ದಿನ ಘೋಷಣೆ ಮಾಡಲಾಗಿತ್ತು.
ಇನ್ನು ಮುಂದೆ ಅಲಹಾಬಾದ್ ಎಂಬ ಹೆಸರು ಇರುವುದಿಲ್ಲ. ನಾವು ರಾಜ್ಯ ಸಚಿವ ಸಂಪುಟದ ಒಪ್ಪಿಗೆಗಾಗಿ ಕೇಳುತ್ತೇವೆ ಎಂದು ಸರಕಾರದ ಹಿರಿಯ ಅಧಿಕಾರಿ ಸೋಮವಾರ ತಿಳಿಸಿದ್ದರು. ಮಂಗಳವಾರದಂದು ಸೇರಲಿರುವ ಸಂಪುಟ ಸಭೆಯಲ್ಲಿ ಅಂತಿಮ ಅಂಕಿತ ಹಾಕುವುದಾಗಿ ಕೂಡ ಹೇಳಿದ್ದರು.

ಇನ್ನಷ್ಟು ಜಿಲ್ಲೆಗಳ ಹೆಸರನ್ನು ಬದಲಿಸುವ ಬಗ್ಗೆ ಕೂಡ ಸರಕಾರ ಚಿಂತನೆ ನಡೆಸುತ್ತಿದೆ. ಮೀರತ್ ನ ಸರ್ದಾನದ ಬಿಜೆಪಿ ಶಾಸಕ ಸಂಗೀತ್ ಸೋಮ್, ಮುಜಾಫರ್ ನಗರ್ ಅನ್ನು ಲಕ್ಷ್ಮೀನಗರ್ ಎಂದು ಬದಲಿಸುವಂತೆ ಒತ್ತಾಯ ಮಾಡಿದ್ದಾರೆ.
"ಹಲವು ಜಿಲ್ಲೆಗಳ ಹೆಸರು ಬದಲಾವಣೆಗೆ ನಾವು ಬೇಡಿಕೆ ಇಟ್ಟಿದ್ದೇವೆ. ಸದ್ಯಕ್ಕೆ ಇರುವ ಪ್ರಸ್ತಾವದ ಪ್ರಕಾರ ಫೈಜಾಬಾದ್ ಹಾಗೂ ಅಲಹಾಬಾದ್ ವಿಭಾಗದ ಬಗ್ಗೆ ಮಾತ್ರ ಸಚಿವ ಸಂಪುಟದ ಒಪ್ಪಿಗೆ ಪಡೆಯಲು ಕಳುಹಿಸಲಾಗಿದೆ" ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದರು.












Click it and Unblock the Notifications