ಉ.ಪ್ರದೇಶ ವಿಧಾನಸಭೆ ಚುನಾವಣೆ: ಪಕ್ಷ ಬಲಪಡಿಸಲು ಅಖಿಲೇಶ್ ಬಿಗ್ ಪ್ಲ್ಯಾನ್
ಲಕ್ನೋ, ಡಿಸೆಂಬರ್ 13: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆದಿದ್ದು ಪೂರ್ವಾಂಚಲ್ ಪ್ರದೇಶದಲ್ಲಿ ಬ್ರಾಹ್ಮಣರ ನಡುವೆ ತನ್ನ ಸ್ಥಾನವನ್ನು ಬಲಪಡಿಸುವ ಉದ್ದೇಶದಿಂದ ಸಮಾಜವಾದಿ ಪಕ್ಷ ಬಿಗ್ ಪ್ಲ್ಯಾನ್ ಮಾಡಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ಹಾಲಿ ಶಾಸಕರು, ಮಾಜಿ ವಿಧಾನ ಪರಿಷತ್ತಿನ ಅಧ್ಯಕ್ಷರು ಮತ್ತು ಇತರ ಹಿರಿಯ ನಾಯಕರನ್ನು ಭಾನುವಾರ ಲಕ್ನೋದಲ್ಲಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಸಮ್ಮುಖದಲ್ಲಿ ಎಸ್‌ಪಿಗೆ ಸೇರ್ಪಡೆಗೊಳಿಸಿಕೊಳ್ಳಲಾಯಿತು.
ಈ ಪಟ್ಟಿಯಲ್ಲಿ ಗೋರಖ್‌ಪುರದ ಚಿಲ್ಲುಪರ್ ಕ್ಷೇತ್ರದಿಂದ ಹಾಲಿ ಬಿಎಸ್‌ಪಿ ಶಾಸಕ ವಿನಯ್ ಶಂಕರ್ ತಿವಾರಿ ಮತ್ತು ಅವರ ಸಹೋದರ ಸಂತ ಕಬೀರ್ ನಗರದ ಮಾಜಿ ಸಂಸದ ಕುಶಾಲ್ ತಿವಾರಿ ಸೇರಿದ್ದಾರೆ. ವಿನಯ್ ಅವರು ಮಾಜಿ ಕ್ಯಾಬಿನೆಟ್ ಸಚಿವ ಹರಿಶಂಕರ್ ತಿವಾರಿ ಅವರ ಪುತ್ರರಾಗಿದ್ದು, ಅವರು 70 ಮತ್ತು 80 ರ ದಶಕದಲ್ಲಿ ಪ್ರಬಲ ವ್ಯಕ್ತಿಯಾಗಿ ಇಮೇಜ್ ಗಳಿಸಿದ್ದರು ಮತ್ತು ರಾಜ್ಯ ಸರ್ಕಾರದಲ್ಲಿ ಹಲವಾರು ಬಾರಿ ಸಚಿವರಾಗಿದ್ದರು.
ಎಸ್‌ಪಿಗೆ ಸೇರ್ಪಡೆಯಾದ ಇತರರು ಖಲೀಲಾಬಾದ್‌ನ ಬಿಜೆಪಿ ಶಾಸಕ, ದಿಗ್ವಿಜಯ್ ನಾರಾಯಣ್ ಅಲಿಯಾಸ್ ಜೈ ಚೌಬೆ, ಮಾಜಿ ವಿಧಾನ ಪರಿಷತ್ತಿನ ಅಧ್ಯಕ್ಷ ಗಣೇಶ್ ಶಂಕರ್ ಪಾಂಡೆ, ಇವರು ತಿವಾರಿ ಅವರ ಸಂಬಂಧಿಕರೂ ಆಗಿದ್ದಾರೆ. ಜೊತೆಗೆ ಕರ್ನೈಲ್‌ಗಂಜ್‌ನ ಬಿಎಸ್‌ಪಿಯ ಸಂತೋಷ್ ತಿವಾರಿ ಮತ್ತು ಬಹುತೇಕ ಬ್ರಾಹ್ಮಣ ಸಮುದಾಯದಿಂದ ಬಂದವರು ಮತ್ತು ಪೂರ್ವಾಂಚಲ್‌ನ ಇತರ ನಾಯಕರು ಇದರಲ್ಲಿದ್ದಾರೆ.

ಈ ಬೆಳವಣಿಗೆಯನ್ನು ಪೂರ್ವಾಂಚಲ್ ಪ್ರದೇಶದಲ್ಲಿ ತನ್ನ ಪಕ್ಷದ ಸ್ಥಾನವನ್ನು ಬಲಪಡಿಸಲು ಅಖಿಲೇಶ್ ಯಾದವ್‌ರ ಮತ್ತೊಂದು ಪ್ರಮುಖ ಪ್ರಯತ್ನವೆಂದು ಹೇಳಲಾಗುತ್ತದೆ. ಈ ಹಿಂದೆ ಜೈಲಿನಲ್ಲಿರುವ ಡಾನ್ ಮುಖ್ತಾರ್ ಅನ್ಸಾರಿ ಅವರ ಸಹೋದರ ಸಿಬ್ಗತುಲ್ಲಾ ಅನ್ಸಾರಿ ಅವರು ಎಸ್‌ಪಿಗೆ ಸೇರ್ಪಡೆಗೊಂಡರು. ಇತ್ತೀಚೆಗೆ ಬಿಜೆಪಿಯ ಮಾಜಿ ಮಿತ್ರ ಓಂ ಪ್ರಕಾಶ್ ರಾಜ್‌ಭರ್ ಸುಹೇಲ್‌ದೇವ್ 2022 ರ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಪಿಯ ಮೈತ್ರಿ ಪಾಲುದಾರನಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಅನ್ಸಾರಿ ಮತ್ತು ಒಪಿ ರಾಜ್‌ಭರ್ ಇಬ್ಬರೂ ಪೂರ್ವಾಂಚಲ್‌ನಲ್ಲಿ ಪ್ರಭಾವ ಹೊಂದಿದ್ದಾರೆ.
ನಾಯಕರನ್ನು ಸ್ವಾಗತಿಸಿದ ಅಖಿಲೇಶ್, "ಇಂತಹ ದೊಡ್ಡ ಮತ್ತು ಪ್ರಭಾವಿ ಕುಟುಂಬ ನಮ್ಮೊಂದಿಗೆ ಬಂದಿರುವುದಕ್ಕೆ ನನಗೆ ಸಂತೋಷವಾಗಿದೆ ಮತ್ತು ಈಗ ಸಮಾಜವಾದಿ ಪಕ್ಷಕ್ಕೆ ಯಾವುದೇ ಸ್ಪರ್ಧೆ ಇಲ್ಲ" ಎಂದು ಹೇಳಿದರು. ಜೊತೆಗೆ ಅವರ ಸಮುದಾಯಕ್ಕೆ ಎಲ್ಲಾ ಸಹಾಯದ ಭರವಸೆ ನೀಡಿದರು.
ಜೊತೆಗೆ ಆಡಳಿತರೂಢ ಪಕ್ಷದ ವಿರುದ್ದ ವಾಗ್ದಾಳಿ ಮಾಡಿದ ಅಖಿಲೇಶ್, ಜಾತಿ ಮತ್ತು ಧರ್ಮದ ಆಧಾರದ ಮೇಲೆ ಸರ್ಕಾರ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ ಎಂದು ಆರೋಪಿಸಿದರು. "ಈ ಸರ್ಕಾರವು ಬ್ರಿಟಿಷರ ಒಡೆದು ಆಳುವ ನೀತಿಯನ್ನು ಅಳವಡಿಸಿಕೊಂಡಂತೆ ತೋರುತ್ತಿದೆ. ಬ್ರಿಟಿಷರು ಒಡೆದು ಆಳುತ್ತಿದ್ದರೆ, ಬಿಜೆಪಿಯವರು ಭಯ ಹುಟ್ಟಿಸಿ ಆಡಳಿತ ನಡೆಸುತ್ತಿದ್ದಾರೆ. ಜನರು ಈಗ ಇದನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು 2022 ರ ಚುನಾವಣೆಯಲ್ಲಿ ಜನರು ಅವರಿಗೆ (ಬಿಜೆಪಿ) ಪಾಠ ಕಲಿಸುತ್ತಾರೆ" ಎಂದರು.
ಇತ್ತೀಚೆಗಷ್ಟೇ ಬಿಎಸ್‌ಪಿಯಿಂದ ಉಚ್ಛಾಟಿತರಾಗಿರುವ ವಿನಯ್ ಶಂಕರ್ ತಿವಾರಿ ಅವರು, ಅಖಿಲೇಶ್ ಅವರನ್ನು ಜನಪ್ರಿಯ ನಾಯಕ ಎಂದು ಬಣ್ಣಿಸಿದ್ದು, ಬಿಜೆಪಿ ಸರ್ಕಾರದ ಅಡಿಯಲ್ಲಿ ಪ್ರಜಾಪ್ರಭುತ್ವವು ನಿರಂಕುಶಾಧಿಕಾರದಿಂದ ಮಬ್ಬಾಗಿದೆ ಎಂದು ಹೇಳಿದ್ದಾರೆ. "ಸರ್ಕಾರವು ಜನರನ್ನು ವಿಭಜಿಸಿದೆ ಮತ್ತು ದ್ವೇಷವನ್ನು ಹುಟ್ಟುಹಾಕಿದೆ" ಎಂದು ಅವರು ದೂರಿದ್ದರು.
ಸರ್ಕಾರವು ತನ್ನ ಸಾಧನೆಗಳನ್ನು ಜಾಹೀರಾತು ಮಾಡುವ ದೊಡ್ಡ ಹೋರ್ಡಿಂಗ್‌ಗಳನ್ನು ಸ್ಥಾಪಿಸಿದೆ ಆದರೆ ನೆಲದ ವಾಸ್ತವವು ಸಂಪೂರ್ಣವಾಗಿ ವಿಭಿನ್ನವಾಗಿದೆ ಎಂದು ತಿವಾರಿ ಹೇಳಿದರು. "ಈ ಆಡಳಿತದಲ್ಲಿ ಬ್ರಾಹ್ಮಣರು ನ್ಯಾಯದಿಂದ ಸಂಪೂರ್ಣವಾಗಿ ವಂಚಿತರಾಗಿದ್ದಾರೆ" ಎಂದು ಅವರು ಹೇಳಿದರು.












Click it and Unblock the Notifications