ಪಾಕ್ ಉಗ್ರನ ಜೊತೆ ನಂಟು: ತುಮಕೂರು, ದಾವಣಗೆರೆಯಲ್ಲಿ ಇಬ್ಬರ ಬಂಧನ
ತುಮಕೂರು: ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರಲು ಪಾಕಿಸ್ತಾನ ಮೂಲದ ಉಗ್ರರು ರೂಪಿಸಿದ್ದ ಭಾರಿ ಸಂಚೊಂದನ್ನು ಕೇಂದ್ರ ಗುಪ್ತಚರ ಇಲಾಖೆ ಹಾಗೂ ತುಮಕೂರು ನಗರ ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ಯಶಸ್ವಿಯಾಗಿ ವಿಫಲಗೊಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ, ಪಾಕಿಸ್ತಾನದ ಮೋಸ್ಟ್ ವಾಂಟೆಡ್ ಉಗ್ರ ರಾಣಾ ಉನೇನ್ ಎಂಬಾತನ ಜೊತೆ ನಿರಂತರ ಸಂಪರ್ಕದಲ್ಲಿದ್ದ ಆಪಾದನೆ ಮೇಲೆ ರಾಜ್ಯದ ಇಬ್ಬರು ಯುವಕರನ್ನು ಉಗ್ರ ನಿಗ್ರಹ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ತುಮಕೂರು ಮೂಲದ ಅಲ್ಲಾಬಕ್ಷು ಹಾಗೂ ದಾವಣಗೆರೆಯಲ್ಲಿ ತಲೆಮರೆಸಿಕೊಂಡಿದ್ದ ಜಮೀರ್ ಖಾನ್ ಎಂದು ಗುರುತಿಸಲಾಗಿದೆ. ಕೇವಲ 20 ದಿನಗಳ ಅವಧಿಯಲ್ಲಿ ಈ ಯುವಕರು ಪಾಕಿಸ್ತಾನಿ ಉಗ್ರನೊಂದಿಗೆ ನಡೆಸಿದ ಸಂಪರ್ಕ ಹಾಗೂ ಅವರು ರೂಪಿಸುತ್ತಿದ್ದ ಯೋಜನೆಗಳು ಇದೀಗ ಪೊಲೀಸ್ ತನಿಖೆಯಿಂದ ಬಯಲಾಗಿದ್ದು, ಹಲವು ಆತಂಕಕಾರಿ ಸತ್ಯಗಳು ಹೊರಬಿದ್ದಿವೆ. ಭಾರತೀಯ ಯುವಕರನ್ನು, ಅದರಲ್ಲೂ ವಿಶೇಷವಾಗಿ ಕರ್ನಾಟಕದ ಯುವಕರನ್ನು ಗುರಿಯಾಗಿಸಿಕೊಂಡು ಉಗ್ರರು ಸಾಮಾಜಿಕ ಜಾಲತಾಣಗಳ ಮೂಲಕ ಹೇಗೆ ಬ್ರೈನ್ ವಾಶ್ ಮಾಡುತ್ತಿದ್ದಾರೆ ಎಂಬುದಕ್ಕೆ ಈ ಪ್ರಕರಣ ತಾಜಾ ಉದಾಹರಣೆಯಾಗಿದೆ.

ಸೋಷಿಯಲ್ ಮೀಡಿಯಾ ಮೂಲಕ ಬಲೆಗೆ
ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆಗಳಿಗೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಕ್ರಿಮಿನಲ್ ರಾಣಾ ಉನೇನ್, ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಈ ಸಾಮಾನ್ಯ ಯುವಕರನ್ನು ಸುಮಾರು ಒಂದು ತಿಂಗಳ ಹಿಂದೆ ಇನ್‌ಸ್ಟಾಗ್ರಾಮ್ ಮುಖಾಂತರ ಪರಿಚಯ ಮಾಡಿಕೊಂಡಿದ್ದ. ಆರಂಭದಲ್ಲಿ ಇಸ್ಲಾಂ ಧರ್ಮ, ಪ್ರವಾದಿಗಳ ವಿಚಾರಗಳ ಬಗ್ಗೆ ಸಂದೇಶಗಳನ್ನು ಕಳುಹಿಸುತ್ತಿದ್ದ.
ಆ ನಂತರ ಎಕ್ಸ್ ಮೂಲಕ ಚಾಟ್ ಮಾಡಿ, ಕೊನೆಗೆ ವಾಟ್ಸ್ ಆ್ಯಪ್ ಗ್ರೂಪ್‌ವೊಂದಕ್ಕೆ ಸೇರಿಸಿಕೊಂಡಿದ್ದ. ಸಮುದಾಯದ ಒಗ್ಗಟ್ಟು ಮುಖ್ಯ ಎಂದು ನಂಬಿಸುತ್ತಲೇ, ನಿಧಾನವಾಗಿ ದೇಶದ ವಿರುದ್ಧ ದ್ವೇಷ ಬಿತ್ತುವ ಹಾಗೂ ಪ್ರತೀಕಾರ ತೀರಿಸಿಕೊಳ್ಳುವ ಚರ್ಚೆಗಳನ್ನು ಆರಂಭಿಸಿದ್ದ ಎಂಬ ಮಾಹಿತಿ ತನಿಖೆ ವೇಳೆ ಲಭ್ಯವಾಗಿದೆ.
ಪುಣೆ ಮೌಲ್ವಿ ಹತ್ಯೆಗೆ ಪ್ರತೀಕಾರದ ಸಂಚು
ತಮ್ಮದೇ ಸಮುದಾಯದವರನ್ನೆಲ್ಲಾ ಒಗ್ಗೂಡಿಸುವ ನೆಪದಲ್ಲಿ ರಾಣಾ ಉನೇನ್, ಪುಣೆಯಲ್ಲಿ ನಡೆದಿದ್ದ ಮೌಲ್ವಿ ಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರತೀಕಾರದ ಮಾತುಗಳನ್ನಾಡಿದ್ದ ಎನ್ನಲಾಗಿದೆ. "ಯಾರನ್ನೂ ಯಾವ ಕಾರಣಕ್ಕೂ ಬಿಡಬಾರದು, ನಮ್ಮ ಪ್ರತೀಕಾರ ಕಠಿಣವಾಗಿರಬೇಕು" ಎಂದು ಈ ಯುವಕರನ್ನು ಪ್ರಚೋದಿಸುತ್ತಿದ್ದ. ಅಲ್ಲದೆ, ದೇಶದ ವಿವಿಧೆಡೆ ಇರುವ ತನ್ನ ಹಿಂಬಾಲಕರ ಜೊತೆಗೂಡಿ ಈ ಯುವಕರಿಗೆ ವಿಧ್ವಂಸಕ ಕೃತ್ಯಗಳಿಗೆ ಬೇಕಾದ ತಯಾರಿಗಳ ಬಗ್ಗೆಯೂ ಚರ್ಚೆ ನಡೆಸಿದ್ದ. ಇದೇ ವೇಳೆ ಅಲ್ಲಾಬಕ್ಷು ಹಾಗೂ ಜಮೀರ್ ಖಾನ್ ಅವರನ್ನು ಪರಸ್ಪರ ಪರಿಚಯ ಮಾಡಿಸಿದ್ದನಂತೆ.
ಎಸ್‌ಪಿ ಡಾ.ಎಚ್ ಟಿ ಶೇಖರ್ ಸ್ಪಷ್ಟನೆ
ಈ ಇಬ್ಬರು ಯುವಕರು ರಾಣಾನ ಸಂಪರ್ಕದಲ್ಲಿರುವ ಖಚಿತ ಮಾಹಿತಿ ಕೇಂದ್ರ ಗುಪ್ತಚರ ಇಲಾಖೆಗೆ ಲಭ್ಯವಾಗಿತ್ತು. ಕೂಡಲೇ ತುಮಕೂರು ನಗರ ಪೊಲೀಸರಿಗೆ ಅಲರ್ಟ್ ನೀಡಲಾಯಿತು. ಕಾರ್ಯಾಚರಣೆಗಿಳಿದ ಪೊಲೀಸರು ತುಮಕೂರಿನಲ್ಲಿ ಅಲ್ಲಾಬಕ್ಷುನನ್ನು ಹಾಗೂ ದಾವಣಗೆರೆಗೆ ತೆರಳಿ ಜಮೀರ್ ಖಾನ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ದಾವಣಗೆರೆ ಎಸ್‌ಪಿ ಡಾ.ಎಚ್ ಟಿ ಶೇಖರ್ ಪ್ರತಿಕ್ರಿಯಿಸಿದ್ದು, "ತುಮಕೂರು ಪೊಲೀಸರು ದಾವಣಗೆರೆಗೆ ಬಂದಿದ್ದರು. ಸ್ಥಳೀಯ ಪೊಲೀಸರ ಸಹಕಾರದಿಂದ ಓರ್ವ ಯುವಕನನ್ನು ವಶಕ್ಕೆ ಪಡೆದಿರುವುದು ನಿಜ. ಆದರೆ, ಈ ಪ್ರಕರಣದ ಹೆಚ್ಚಿನ ಮಾಹಿತಿ ಮತ್ತು ಮುಂದಿನ ತನಿಖೆ ತುಮಕೂರು ಪೊಲೀಸರ ಬಳಿ ಇದೆ" ಎಂದು ಸ್ಪಷ್ಟನೆ ನೀಡಿದ್ದಾರೆ.
ಸದ್ಯ ಪೊಲೀಸರು ಬಂಧಿತ ಯುವಕರ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿದ್ದು, ಕಾಲ್ ರೆಕಾರ್ಡ್ಸ್ ಹಾಗೂ ವಾಟ್ಸ್ ಆ್ಯಪ್ ಚಾಟ್‌ಗಳನ್ನು ತೀವ್ರವಾಗಿ ಪರಿಶೀಲಿಸುತ್ತಿದ್ದಾರೆ. ಪಾಕ್ ಉಗ್ರ ರಾಣಾ ಉನೇನ್ ಹಿನ್ನೆಲೆ ಏನು? ಆತ ಯಾವ ಭಯೋತ್ಪಾದಕ ಸಂಘಟನೆಗೆ ಸೇರಿದವನು? ಕರ್ನಾಟಕದಲ್ಲಿ ಇನ್ನೂ ಎಷ್ಟು ಯುವಕರು ಈತನ ಜಾಲದಲ್ಲಿ ಸಿಲುಕಿದ್ದಾರೆ? ಎಂಬಿತ್ಯಾದಿ ಆಯಾಮಗಳಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.












Click it and Unblock the Notifications