ಉತ್ತರ ಪ್ರದೇಶದ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಆಸ್ತಿ ಮೌಲ್ಯ 40.14 ಕೋಟಿ, ಕಾರು ಇಲ್ಲ!
ಲಕ್ನೋ, ಜನವರಿ 31: ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕರ್ಹಾಲ್ ಕ್ಷೇತ್ರದಿಂದ ಸ್ಪರ್ಧಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತಮ್ಮ ಆಸ್ತಿ ಮೌಲ್ಯವನ್ನು ಘೋಷಿಸಿದ್ದಾರೆ. ಸೋಮವಾರ ಮೈನ್‌ಪುರಿಯ ಕರ್ಹಾಲ್ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿರುವ ಅವರು. 40.14 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿರುವುದಾಗಿ ದಾಖಲೆ ಪತ್ರಗಳನ್ನು ನೀಡಿದ್ದಾರೆ.
ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಮತ್ತು ಅವರ ಮಗಳು 40.14 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ, ಆದರೆ ಸ್ವಂತ ವಾಹನಗಳನ್ನು ಹೊಂದಿಲ್ಲ. ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ 5.34 ಲಕ್ಷಕ್ಕೂ ಹೆಚ್ಚು ಮೌಲ್ಯದ ವ್ಯಾಯಾಮ ಯಂತ್ರ ಮತ್ತು 76,015 ರೂಪಾಯಿ ಬೆಲೆಯ ಫೋನ್ ಹೊಂದಿದ್ದಾರೆ.
ಅಖಿಲೇಶ್ ಯಾದವ್ ಯಾವುದೇ ಬಂದೂಕುಗಳನ್ನು ಹೊಂದಿಲ್ಲ. ಯಾದವ್ ಮತ್ತು ಅವರ ಪತ್ನಿ ಹಾಗೂ ಪುತ್ರಿ ಅದಿತಿಯ ಒಟ್ಟು ಆಸ್ತಿ ಮೌಲ್ಯ 40.14 ಕೋಟಿ ರೂಪಾಯಿ ಎಂದು ನಾಮಪತ್ರ ಸಲ್ಲಿಕೆ ವೇಳೆ ನೀಡಿದ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.

ಅಖಿಲೇಶ್ ಯಾದವ್ ಸ್ಥಿರ ಆಸ್ತಿ ಮೌಲ್ಯ:
ಅಖಿಲೇಶ್ ಯಾದವ್ 17.22 ಕೋಟಿ ಮೌಲ್ಯದ ಸ್ಥಿರ ಆಸ್ತಿ ಹೊಂದಿದ್ದರೆ, ಅವರ ಪತ್ನಿ ಡಿಂಪಲ್ ಯಾದವ್ 9.61 ಕೋಟಿ ಮೌಲ್ಯದ ಸ್ಥಿರ ಆಸ್ತಿ ಹೊಂದಿದ್ದಾರೆ. ಅವರ ಸ್ಥಿರಾಸ್ತಿಗಳ ಒಟ್ಟು ಮೌಲ್ಯ 26.83 ಕೋಟಿ ರೂಪಾಯಿ ಆಗಿದೆ. ಎಸ್‌ಪಿ ಮುಖ್ಯಸ್ಥರು 28.97 ಲಕ್ಷ ರೂ.ಗಿಂತ ಹೆಚ್ಚಿನ ಹೊಣೆಗಾರಿಕೆ ಹೊಂದಿದ್ದರೆ, ಅವರ ಪತ್ನಿ 14.26 ಲಕ್ಷ ರೂಪಾಯಿ ಹೊಂದಿದ್ದಾರೆ.
ಸಾಲದ ವಿವರ:
ಅಖಿಲೇಶ್ ಯಾದವ್ ತಮ್ಮ ತಂದೆ ಮುಲಾಯಂ ಸಿಂಗ್ ಯಾದವ್‌ಗೆ 2.13 ಕೋಟಿ ರೂಪಾಯಿಗೂ ಹೆಚ್ಚು ಸಾಲವನ್ನು ನೀಡಿದ್ದಾರೆ; ಅದೇ ರೀತಿ ತಮ್ಮ ಪತ್ನಿ ಡಿಂಪಲ್ ಯಾದವ್ ಅವರಿಂದ ಸ್ವತಃ ಅಖಿಲೇಶ್ ಯಾದವ್ 8.15 ಲಕ್ಷ ರೂಪಾಯಿ ಸಾಲವನ್ನು ಪಡೆದುಕೊಂಡಿದ್ದಾರೆ.
ಸಮಾಜವಾದಿ ಪಕ್ಷದ ಭದ್ರಕೋಟೆ ಮೈನ್‌ಪುರಿ ಜಿಲ್ಲೆ:
ಮೈನ್‌ಪುರಿಯು ಸಾಂಪ್ರದಾಯಿಕವಾಗಿ ಸಮಾಜವಾದಿ ಪಕ್ಷದ ಭದ್ರಕೋಟೆಯಾಗಿದೆ. ಈ ಲೋಕಸಭಾ ಕ್ಷೇತ್ರವು ಸತತ ಒಂಬತ್ತು ಅವಧಿಗಳಿಂದ ಎಸ್‌ಪಿ ಬಳಿ ಇದೆ. ಹಾಲಿ ಸಂಸದ ಮತ್ತು ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಐದನೇ ಬಾರಿಗೆ ಪ್ರತಿನಿಧಿಸುತ್ತಿದ್ದಾರೆ. ಪ್ರಸ್ತುತ, ಮೈನ್‌ಪುರಿ ಜಿಲ್ಲೆಯ ನಾಲ್ಕು ವಿಧಾನಸಭಾ ಸ್ಥಾನಗಳ ಪೈಕಿ ಮೂರು ಸ್ಥಾನಗಳನ್ನು ಎಸ್‌ಪಿ ಹೊಂದಿದೆ.
ಯಾದವ್ ಪ್ರಾಬಲ್ಯದ ಕ್ಷೇತ್ರವಾದ ಕರ್ಹಾಲ್ ಅನ್ನು 2007 ರಿಂದ ಸೊಬರಣ್ ಸಿಂಗ್ ಯಾದವ್ ಪ್ರತಿನಿಧಿಸುತ್ತಿದ್ದಾರೆ. ಬಿಜೆಪಿಯು 2002 ರಲ್ಲಿ ತನ್ನ ಅಭ್ಯರ್ಥಿ ಸೋವರನ್ ಸಿಂಗ್ ಚುನಾವಣೆಯಲ್ಲಿ ಈ ಸ್ಥಾನವನ್ನು ಕೊನೆಯದಾಗಿ ಗೆದ್ದುಕೊಂಡಿತ್ತು. 2014 ರಲ್ಲಿ, ಮುಲಾಯಂ ಸಿಂಗ್ ಯಾದವ್ ಅವರು ಮೈನ್‌ಪುರಿ ಕ್ಷೇತ್ರವನ್ನು 3.25 ಲಕ್ಷ ಮತಗಳ ಅಂತರದಿಂದ ಗೆದ್ದರು, ಆದರೆ ನಂತರ ಸ್ಥಾನವನ್ನು ತೊರೆದರು (ಅಜಂಗಢವನ್ನು ಉಳಿಸಿಕೊಂಡರು). ಅವರ ಮೊಮ್ಮಗ ತೇಜ್ ಪ್ರತಾಪ್ ಯಾದವ್ 3.50 ಲಕ್ಷ ಮತಗಳ ಅಂತರದಿಂದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.
ಯುಪಿಯಲ್ಲಿ ಏಳು ಹಂತಗಳಲ್ಲಿ ವಿಧಾನಸಭೆ ಚುನಾವಣೆ
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.
ಈ ಹಿಂದೆ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.












Click it and Unblock the Notifications