ರಾಹುಲ್‌ಗೆ ದೇವಸ್ಥಾನದಲ್ಲಿ ಹೇಗೆ ಕುಳಿತುಕೊಳ್ಳಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ಲ: ಯೋಗಿ
ಲಕ್ನೋ, ಜನವರಿ 03: ಅಮೇಥಿಯ ಮಾಜಿ ಸಂಸದ ರಾಹುಲ್ ಗಾಂಧಿಗೆ ದೇವಸ್ಥಾನದಲ್ಲಿ ಹೇಗೆ ಕುಳಿತುಕೊಳ್ಳಬೇಕು ಎನ್ನುವ ಕನಿಷ್ಠ ಜ್ಞಾನವೂ ಇಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವ್ಯಂಗ್ಯವಾಡಿದ್ದಾರೆ.
ಅಮೇಥಿಯಲ್ಲಿ ಯೋಗಿ ನಡೆಸಿದ ಮೆರವಣಿಗೆಯಲ್ಲಿ ಮಾತನಾಡಿರುವ ಅವರು, ಹಿಂದುತ್ವ, ಹಿಂದು ಧರ್ಮದ ಬಗ್ಗೆ ಎಷ್ಟು ತಿಳಿದಿರಲು ಸಾಧ್ಯ, ರಾಹುಲ್ ಗಾಂಧಿ ಭೇಟಿ ನೀಡಿದ ದೇವಸ್ಥಾನದ ಅರ್ಚಕರು ಹೇಗೆ ಕುಳಿತುಕೊಳ್ಳಬೇಕು ಎಂಬುದರ ಬಗ್ಗೆ ತಿಳಿಸಿಕೊಟ್ಟಿದ್ದರು.
ಕೊರೊನಾ ಸೋಂಕಿನ ಸಂದರ್ಭದಲ್ಲಿ ಸಮಾಜವಾದಿ ಪಕ್ಷ, ಕಾಂಗ್ರೆಸ್ ಅಥವಾ ಬಹುಜನ ಸಮಾಜವಾದಿ ಪಕ್ಷದ ನಾಯಕರು ಜನರ ಕಷ್ಟಗಳಿಗೆ ಸ್ಪಂದಿಸಲಿಲ್ಲ. ಇದೀಗ ಚುನಾವಣೆ ಹತ್ತಿರ ಬಂದಿರುವಾಗ ಎಲ್ಲರೂ ಕಾಣಿಸಿಕೊಳ್ಳುತ್ತಿದ್ದಾರೆ, ಬಳಿಕ ಮತ್ತೆ ನಾಲ್ಕೂವರೆ ವರ್ಷ ಕಣ್ಣಿಗೆ ಕಾಣಿಸುವುದಿಲ್ಲ ಎಂದು ಯೋಗಿ ದೂರಿದರು.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಾನು ಕೂಡಾ ಸ್ಪರ್ಧಿಸುವುದಾಗಿ ಖಚಿತಪಡಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದರೆ ಯಾವ ಕ್ಷೇತ್ರದಲ್ಲಿ ತಾನು ಸ್ಪರ್ಧೆಗೆ ಇಳಿಯುತ್ತೇನೆ ಎಂಬುವುದನ್ನು ಪಕ್ಷದ ನಾಯಕತ್ವ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಿಂದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆ, ಮಥುರಾ ಅಥವಾ ತವರು ಜಿಲ್ಲೆ ಗೋರಖ್‌ಪುರದಿಂದ ಸ್ಪರ್ಧಿಸುವರೇ ಎಂದು ಮಾಧ್ಯಮಗಳು ಪ್ರಶ್ನೆ ಮಾಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಆದಿತ್ಯನಾಥ್, "ಪಕ್ಷ ಎಲ್ಲಿ ಹೇಳುತ್ತದೆಯೋ ಅಲ್ಲೇ ನಾನು ಚುನಾವಣೆ ಎದುರಿಸುತ್ತೇನೆ," ಎಂದು ಹೇಳಿದ್ದಾರೆ.
ಪ್ರಸ್ತುತ ಉತ್ತರ ಪ್ರದೇಶ ವಿಧಾನ ಪರಿಷತ್ತಿನ ಸದಸ್ಯರಾಗಿರುವ ಯೋಗಿ ಆದಿತ್ಯನಾಥ್ ಲಕ್ನೋದಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಮಾಡಲು ಸಾಧ್ಯವಾಗದ ಕೆಲಸವೇನಾದರೂ ಇದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಯೋಗಿ, "ಏನೇ ಹೇಳಿದರೂ ಮಾಡಿದ್ದೇನೆ. ಯಾವುದೇ ಪಶ್ಚಾತ್ತಾಪ ಪಡಬೇಕಾದ ಯಾವುದೇ ಕೆಲಸ ಉಳಿದಿಲ್ಲ," ಎಂದರು.
ಬಿಜೆಪಿಯು "ಬಹಳ ದೊಡ್ಡ ಕುಟುಂಬ" ಮತ್ತು ಅದರಲ್ಲಿ ಜನರ ಪಾತ್ರವು ಕಾಲ ಕಳೆದಂತೆ ಬದಲಾವಣೆ ಆಗುತ್ತಲೇ ಹೋಗುತ್ತದೆ ಎಂದು ಹೇಳುವ ಮೂಲಕ ಪಕ್ಷದ ಟಿಕೆಟ್ ಪಡೆಯುವ ಬಗ್ಗೆ ಕೆಲವು ಹಾಲಿ ಶಾಸಕರಲ್ಲಿ ಕಂಡುಬಂದ ಕಳವಳವನ್ನು ನಿವಾರಿಸಲು ಮುಖ್ಯಮಂತ್ರಿ ಪ್ರಯತ್ನಿಸಿದರು.
"ಪ್ರತಿಯೊಬ್ಬ ವ್ಯಕ್ತಿಯ ಪಾತ್ರವು ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ಆಗಿರುತ್ತದೆ. ಯಾವುದೇ ವ್ಯಕ್ತಿಯಾಗಲಿ ಎಲ್ಲಾ ಸಂದರ್ಭದಲ್ಲೂ ಸರ್ಕಾರದಲ್ಲಿ ಇರಬೇಕು ಎಂಬ ಅಗತ್ಯವಿಲ್ಲ. ಕೆಲವೊಮ್ಮೆ ಸರ್ಕಾರದ ಕೆಲಸ ಬಿಟ್ಟು ಸಂಘಟನೆಯ ಕೆಲಸವನ್ನು ಮಾಡಬಹುದು," ಎಂದಿದ್ದಾರೆ. "ಚುನಾವಣೆಯ ದಿನಾಂಕ ಘೋಷಣೆ ಆದ ಬಳಿಕವೂ ಕೋವಿಡ್ ಮಾರ್ಗಸೂಚಿಯನ್ನು ಅನುಸರಣೆ ಮಾಡಲಾಗುವುದು," ಎಂದು ಮುಖ್ಯಮಂತ್ರಿ ಹೇಳಿದರು.












Click it and Unblock the Notifications