ಉತ್ತರ ಪ್ರದೇಶ ಸಚಿವೆ ವಿರುದ್ಧ ಜಾಮೀನು ರಹಿತ ವಾರೆಂಟ್
ಲಕ್ನೋ, ಅಕ್ಟೋಬರ್ 10: ಉತ್ತರ ಪ್ರದೇಶದ ಪ್ರವಾಸೋದ್ಯಮ ಖಾತೆ ಸಚಿವೆ ರೀಟಾ ಬಹುಗುಣ ಜೋಶಿ ವಿರುದ್ಧ ಅಲಹಾಬಾದ್‌ನ ವಿಶೇಷ ನ್ಯಾಯಾಲಯವೊಂದು ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ. ಅಕ್ಟೋಬರ್ 31ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಸೂಚಿಸಿದೆ.
2010ರಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣ ಈಗ ಸಚಿವೆ ರೀಟಾರನ್ನು ಕಾಡುತ್ತಿದೆ. ವಿಧಾನ ಸಭೆಯೊಳಗೆ ನಿಯಮಬಾಹಿರ ಪ್ರವೇಶ ಪಡೆದಿದ್ದರು. ಸಂಸದರು, ಶಾಸಕರ ವಿರುದ್ಧದ ಕ್ರಿಮಿನಲ್ ಕೇಸ್ ಗಳ ವಿಚಾರಣೆಗಳನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳಲು ವಿಶೇಷ ನ್ಯಾಯಾಲಯವು ಮುಂದಾಗಿದೆ.
ಕೇಂದ್ರ ಸರ್ಕಾರವು 11 ರಾಜ್ಯಗಳಲ್ಲಿ 12 ವಿಶೇಷ ನ್ಯಾಯಲಯಗಳನ್ನು ಸ್ಥಾಪಿಸಿದ್ದು, ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸಲಾಗುತ್ತದೆ.

ಉತ್ತರಪ್ರದೇಶ ಕಾಂಗ್ರೆಸ್ ನ ಮುಖ್ಯಸ್ಥೆಯಾಗಿದ್ದ ರೀಟಾ ಅವರು ಸಿ ಆರ್ ಪಿಸಿ 144 ಸೆಕ್ಷನ್ ಉಲ್ಲಂಘಿಸಿ, ಸಾರ್ವಜನಿಕ ಸಭೆ ನಡೆಸಿದ್ದಲ್ಲದೆ, ಪ್ರಚೋದನಕಾರಿ ಭಾಷಣದ ಮೂಲಕ ಕಾರ್ಯಕರ್ತರು ರೊಚ್ಚಿಗೆದ್ದು, ವಿಧಾನಸಭೆಗೆ ಮುತ್ತಿಗೆ ಹಾಕಲು ಪ್ರೇರಿಸಿದರು ಎಂಬ ಆರೋಪವಿದೆ.
ಜೋಶಿ ಅವರು ನಂತರ ಕಾಂಗ್ರೆಸ್ ತೊರೆದು, ಬಿಜೆಪಿ ಸೇರಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಕೋರ್ಟಿನಿಂದ ಸಮನ್ಸ್ ಜಾರಿಯಾಗಿದ್ದರೂ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ, ಜಡ್ಜ್ ಪವನ್ ತಿವಾರಿ ಅವರು ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದ್ದಾರೆ.












Click it and Unblock the Notifications