ಉತ್ತರಪ್ರದೇಶ ಚುನಾವಣೆ: ಕಾನ್ಪುರ ಉದ್ಯಮಿಗೂ ಎಸ್‌ಪಿಗೂ ಸಂಬಂಧ ಕಲ್ಪಿಸಿದ ಮೋದಿ,ಶಾ
ಲಕ್ನೋ ಡಿಸೆಂಬರ್ 28: ನೂರಾರು ಕೋಟಿ ಹಣವನ್ನು ಐಟಿ ಅಧಿಕಾರಿಗಳು ಕಾನ್ಪುರದ ಜೈನ್ ಮನೆಯಲ್ಲಿ ವಶಪಡಿಸಿಕೊಂಡಿರುವುದು ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಎಸ್‌ಪಿ ನಡುವೆ ರಾಜಕೀಯ ಕದನಕ್ಕೆ ನಾಂದಿ ಹಾಡಿದೆ. ಪಿಯೂಷ್ ಜೈನ್ ತೆರಿಗೆ ವಂಚನೆಗೆ ಎರಡೂ ಪಕ್ಷಗಳು ಪರಸ್ಪರ ಆರೋಪಿಸಿಕೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಅಖಿಲೇಶ್ ಯಾದವ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೈಲಿನಲ್ಲಿರುವ ಸುಗಂಧ ದ್ರವ್ಯ ವ್ಯಾಪಾರಿ ಪಿಯೂಷ್ ಜೈನ್ ಅವರನ್ನು ಸಮಾಜವಾದಿ ಪಕ್ಷಕ್ಕೆ ಹೋಲಿಸಿದ್ದಾರೆ. ಅಖಿಲೇಶ್ ಯಾದವ್ ಅವರ ಕೆಲಸದ ಕ್ರೆಡಿಟ್ ಅನ್ನು ಬಿಜೆಪಿ ತೆಗೆದುಕೊಳ್ಳುತ್ತಿದೆ ಎಂದು ಆಗಾಗ್ಗೆ ಎಸ್‌ಪಿ ದೂರಿದ್ದಕ್ಕಾಗಿ ಮೋದಿ ಲೇವಡಿ ಮಾಡಿದ್ದಾರೆ.
ಭ್ರಷ್ಟಾಚಾರದ ಸುಗಂಧ ದ್ರವ್ಯ: ಕಾನ್ಪುರದಲ್ಲಿ ಮೆಟ್ರೋ ರೈಲು ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, "ನೋಟು ತುಂಬಿದ ಪೆಟ್ಟಿಗೆಗಳು ಹೊರಬಂದಿವೆ. ಅವರು (ಸಮಾಜವಾದಿ ಪಕ್ಷ) ಇದನ್ನು ನಾವೇ ಮಾಡಿದ್ದೇವೆ ಎಂದು ಹೇಳುತ್ತಾರೆ ಎಂದು ನಾನು ಭಾವಿಸಿದೆ. ಕಾನ್ಪುರದ ಜನರು ವ್ಯಾಪಾರವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. 2017 ರ ಮೊದಲು ಅವರು ಎಲ್ಲೆಡೆ ಎರಚಿದ್ದ ಭ್ರಷ್ಟಾಚಾರದ ಸುಗಂಧ ದ್ರವ್ಯ ಈಗ ಉತ್ತರ ಪ್ರದೇಶದಲ್ಲಿ ಎಲ್ಲರಿಗೂ ನೋಡಲು ಸಿಗುತ್ತಿದೆ "ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಲೂಟಿ
"ಆದರೆ ಈಗ ಅವರು (ಸಮಾಜವಾದಿ ಪಕ್ಷ) ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಇಡೀ ದೇಶವೇ ಕಂಡಿರುವ ನೋಟುಗಳ ಪರ್ವತಕ್ಕೆ ಸವಾಲು ಒಡ್ಡಲು ಮುಂದೆ ಬರುತ್ತಿಲ್ಲ. ಇದು ಅವರ ಸಾಧನೆ ಮತ್ತು ವಾಸ್ತವ. ಉತ್ತರ ಪ್ರದೇಶದ ಜನತೆ ಇದನ್ನು ನೋಡುತ್ತಿದ್ದಾರೆ ಮತ್ತು ಅರ್ಥಮಾಡಿಕೊಂಡಿದ್ದಾರೆ. ಎಲ್ಲರೂ ರಾಜ್ಯವನ್ನು ಮುಂದಕ್ಕೆ ಕೊಂಡೊಯ್ಯಲು ಶ್ರಮಿಸುತ್ತಿರುವವರ ಜೊತೆಗಿದ್ದಾರೆ'' ಎಂದು ಹೇಳಿದರು. ಉತ್ತರ ಪ್ರದೇಶದ ಹಿಂದಿನ ಸರ್ಕಾರಗಳು ಐದು ವರ್ಷಗಳ ಕಾಲ ರಾಜ್ಯವನ್ನು ಲೂಟಿ ಮಾಡಿವೆ. ನಾವು ಅದನ್ನು ಲಾಟರಿ ಹೊಡೆದಿದೆ ಎಂದು ಭಾವಿಸಿದ್ದೆವು. ಆದರೆ ಬಿಜೆಪಿ ಸರ್ಕಾರವು ಇದೆಲ್ಲವನ್ನು ಬಯಲಿಗೆಳೆಯುವ ಮೂಲಕ ಪ್ರಾಮಾಣಿಕತೆ ಮತ್ತು ಹೊಣೆಗಾರಿಕೆಯಿಂದ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಎಸ್‌ಪಿ ಪಕ್ಷಕ್ಕೂ ಉದ್ಯಮಿಗೂ ಲಿಂಕ್
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಖಿಲೇಶ್ ಯಾದವ್ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. "ಇತ್ತೀಚೆಗೆ ಸಮಾಜವಾದಿ ಪಕ್ಷದ ಸುಗಂಧ ದ್ರವ್ಯ ಉದ್ಯಮಿಯೊಬ್ಬರು ಸಿಕ್ಕಿಬಿದ್ದಿದ್ದಾರೆ. ನಾವೇಕೆ ದಾಳಿ ನಡೆಸಿದ್ದೇವೆ ಎಂದು ಅಖಿಲೇಶ್ ಜೀ ಕಿತ್ತಾಡುತ್ತಿದ್ದಾರೆ. ಅವರ (ಪಿಯೂಷ್ ಜೈನ್) ಮನೆಯಲ್ಲಿ 250 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಅಖಿಲೇಶ್ ಜೀ, ಈ ಹಣ ಎಲ್ಲಿಂದ ಬಂತು?" ಎಂದು ಉತ್ತರ ಪ್ರದೇಶದ ಸಾರ್ವಜನಿಕ ರ್ಯಾಲಿಯಲ್ಲಿ ಅಮಿತ್ ಶಾ ಪ್ರಶ್ನಿಸಿದ್ದಾರೆ.

ಬಿಜೆಪಿ ತನ್ನ ಸ್ವಂತ ಉದ್ಯಮಿಯ ಮೇಲೆ ತಪ್ಪಾಗಿ ದಾಳಿ
ಆದರೆ ಅಖಿಲೇಶ್ ಯಾದವ್ ತಮ್ಮ ಪಕ್ಷ ಮತ್ತು ಪಿಯೂಷ್ ಜೈನ್ ನಡುವಿನ ಯಾವುದೇ ಸಂಬಂಧವನ್ನು ಖಡಾಖಂಡಿತವಾಗಿ ನಿರಾಕರಿಸಿದರು. ಬಿಜೆಪಿ ತನ್ನ ಸ್ವಂತ ಉದ್ಯಮಿಯ ಮೇಲೆ ತಪ್ಪಾಗಿ ದಾಳಿ ಮಾಡಿದೆ ಎಂದು ವ್ಯಂಗ್ಯವಾಡಿದರು. ಉದ್ಯಮಿಯ ಕರೆ ದಾಖಲೆಗಳು ಆತನೊಂದಿಗೆ ಸಂಪರ್ಕದಲ್ಲಿರುವ ಹಲವು ಬಿಜೆಪಿ ನಾಯಕರ ಹೆಸರುಗಳನ್ನು ಬಹಿರಂಗಪಡಿಸುತ್ತವೆ ಎಂದು ಅವರು ಆರೋಪಿಸಿದರು. "ತಪ್ಪಾಗಿ, ಬಿಜೆಪಿ ತನ್ನದೇ ಉದ್ಯಮಿ ಮೇಲೆ ದಾಳಿ ಮಾಡಿತು. ಸಮಾಜವಾದಿ ಪಕ್ಷದ ನಾಯಕ ಪುಷ್ಪರಾಜ್ ಜೈನ್ ಬದಲಿಗೆ, ಅದು ಪಿಯೂಷ್ ಜೈನ್ ಮೇಲೆ ದಾಳಿ ಮಾಡಿದೆ" ಎಂದು ಸಮಾಜವಾದಿ ಮುಖ್ಯಸ್ಥ ಸುದ್ದಿಗಾರರಿಗೆ ತಿಳಿಸಿದರು.

ಶೋಧಕಾರ್ಯ ಪೂರ್ಣ
ಪಾನ್ ಮಸಾಲಾ ಬ್ರಾಂಡ್‌ಗೆ ಸುಗಂಧ ದ್ರವ್ಯವನ್ನು ಪೂರೈಸಿದ್ದ ಪಿಯೂಷ್ ಜೈನ್ ಅವರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಕಳೆದ ವಾರ ದಾಳಿ ಮಾಡಿತ್ತು. ಆರು ದಿನಗಳ ಕಾಲ ದಾಳಿ ನಡೆಸಿತ್ತು. ಕಾನ್ಪುರದ ಅವರ ಮನೆ ಮತ್ತು ಕನ್ನೌಜ್‌ನಲ್ಲಿರುವ ಕಾರ್ಖಾನೆಯಲ್ಲಿ ಸುಮಾರು 200 ಕೋಟಿ ರೂಪಾಯಿ ನಗದು, 23 ಕೆಜಿ ಚಿನ್ನ ಮತ್ತು 250 ಕೆಜಿ ಬೆಳ್ಳಿಯನ್ನು ಸಂಗ್ರಹಿಸಲಾಗಿದೆ ಎಂದು ದಾಳಿಗಳು ಬಹಿರಂಗಪಡಿಸಿವೆ. ಇಂದು ಶೋಧಕಾರ್ಯವನ್ನು ಪೂರ್ಣಗೊಳಿಸಿದೆ.












Click it and Unblock the Notifications