ಅಖಿಲೇಶ್- ಮಾಯಾವತಿ ಜಂಟಿ ಸುದ್ದಿಗೋಷ್ಠಿಯತ್ತ ಎಲ್ಲರ ಕಣ್ಣು!
ಲಕ್ನೋ, ಜನವರಿ 12: ಲೋಕಸಭೆ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿರುವ ಉತ್ತರಪ್ರದೇಶ ರಾಜ್ಯದಲ್ಲಿ ಸಮಾಜ ವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷಗಳು ಮೈತ್ರಿ ಘೋಷಣೆಯ ಕಾಲ ಸನ್ನಿಹಿತವಾಗಿದೆ.
ಶನಿವಾರ(ಜ.12)ದಂದು ಮಾಜಿ ಸಿಎಂಗಳಾದ ಅಖಿಲೇಶ್ ಯಾದವ್ ಹಾಗೂ ಮಯಾವತಿ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಮೈತ್ರಿ ಕುರಿತಂತೆ ಅಧಿಕೃತ ಘೋಷಣೆ ಸಾಧ್ಯತೆಯಿದೆ.
ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಪ್ರಭಾವ ತಗ್ಗಿಸಲು ಎಸ್ಪಿ ಹಾಗೂ ಬಿಎಸ್ಪಿ ಮೈತ್ರಿ ಮಾಡಿಕೊಂಡು ಉಪ ಚುನಾವಣೆಯಲ್ಲಿ ಯಶಸ್ಸುಗೊಳಿಸಿದ ಬಳಿಕ ಈ ಮೈತ್ರಿ ನಿರೀಕ್ಷಿತವಾಗಿತ್ತು. ಆದರೆ, ಕಾಂಗ್ರೆಸ್ ನೇತೃತ್ವದ ಮಹಾ ಘಟಬಂದನ್ ನಿಂದ ದೂರವುಳಿದಿದ್ದ ಬಹುಜನ ಸಮಾಜವಾದಿ ಪಕ್ಷದ ಜತೆ ಎಸ್ಪಿ ಕೂಡಾ ಕೈ ಜೋಡಿಸಿದೆ.

ಸೀಟು ಹಂಚಿಕೆ ಫೈನಲ್: ಸದ್ಯ ಲಭ್ಯ ಮಾಹಿತಿಯಂತೆ ಕಾಂಗ್ರೆಸ್ಸಿಗೆ ಎರಡು ಕ್ಷೇತ್ರಗಳನ್ನು ಬಿಟ್ಟುಕೊಡಲು ಸಿದ್ಧ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ರಾಯ್ ಬರೇಲಿ ಹಾಗೂ ಅಮೇಥಿ ಕ್ಷೇತ್ರ ಬಿಟ್ಟುಕೊಟ್ಟು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸ್ಪರ್ಧೆಗೆ ಅನುವು ಮಾಡಿಕೊಡಲು ಎಸ್ಪಿ ಮುಂದಾಗಿದೆ. ಮಿಕ್ಕಂತೆ ಎಸ್ಪಿ ಹಾಗೂ ಬಿಎಸ್ಪಿ ತಲಾ 37 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ.
2014ರಲ್ಲಿ 80 ಸ್ಥಾನಗಳ ಪೈಕಿ 73 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಶೇ 42.63ರಷ್ಟು ಮತ ಗಳಿಕೆ ಪಡೆದಿತ್ತು. ಬಿಜೆಪಿ ಮಿತ್ರ ಪಕ್ಷ ಅಪ್ನಾ ದಳ್ 2 ಸ್ಥಾನ ಪಡೆದಿತ್ತು. ಸಮಾಜವಾದಿ ಪಕ್ಷ ಶೇ 22.35 ಮತ ಗಳಿಕೆಯೊಂದಿಗೆ 5 ಸ್ಥಾನಗಳಿಸಿತ್ತು. ಬಿಎಸ್ಪಿಗೆ ಶೇ 19.77ರಷ್ಟು ಮತಗಳಿಕೆ ಬಂದರೂ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ.
ಆದರೆ, ಈ ಬಾರಿ ಎಸ್ಪಿ-ಬಿಎಸ್ಪಿ ಮೈತ್ರಿಯಿಂದ ಬಿಜೆಪಿಗೆ ಹಿನ್ನಡೆಯುಂಟಾಗುವ ಸಾಧ್ಯತೆಯಿದೆ. ಈಗಾಗಲೇ ಈ ಎರಡು ಪಕ್ಷಗಳ ಮೈತ್ರಿಕೂಟದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಗೋರಖಪುರ್, ಫುಲ್ ಪುರ್, ಕೈರಾನಾ ಕ್ಷೇತ್ರದಲ್ಲಿ ಕಳೆದ ವರ್ಷ ಜಯಭೇರಿ ಬಾರಿಸಿ, ಬಿಜೆಪಿಗೆ ಬಿಸಿ ಮುಟ್ಟಿಸಿದ್ದನ್ನು ಮರೆಯುವಂತಿಲ್ಲ.












Click it and Unblock the Notifications