'ಗಡ್ಕರಿ ಉಪ ಪ್ರಧಾನಿಯಾಗಲಿ, ಯೋಗಿ ತಮ್ಮ ಧಾರ್ಮಿಕ ಕೆಲಸ ನೋಡಿಕೊಳ್ಳಲಿ'
ಲಖನೌ, ಜನವರಿ 6: ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆ ಕಂಡ ಬಿಜೆಪಿಯೊಳಗೆ ಅಮಿತ್ ಶಾ ಹಾಗೂ ಮೋದಿ ಪ್ರಭಾವ ಕಡಿಮೆ ಆಗಿದೆ ಎನಿಸುವಂಥ ಬೆಳವಣಿಗೆಗಳು ಆಗುತ್ತಿವೆ. ಬಿಜೆಪಿಯ ಹಿರಿಯ ನಾಯಕ ಸಂಘ್ ಪ್ರಿಯ ಗೌತಮ್ ಹೇಳಿದ ಮಾತುಗಳನ್ನು ಕೇಳಿದರೆ ಈ ವಿಚಾರ ಇನ್ನಷ್ಟು ದೃಢವಾಗುತ್ತದೆ.
ನಿತಿನ್ ಗಡ್ಕರಿಯನ್ನು ಉಪ ಪ್ರಧಾನಿ ಆಗಿ ಮಾಡಬೇಕು, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರನ್ನು ಪಕ್ಷದ ರಾಷ್ಟ್ರಾಧ್ಯಕ್ಷರನ್ನಾಗಿಯೂ ಹಾಗೂ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ರನ್ನು ಉತ್ತರಪ್ರದೇಶದ ಉಸ್ತುವಾರಿಯಾಗಿ ನೇಮಿಸಬೇಕು ಎಂದು ಸಂಘ್ ಪ್ರಿಯ ಹೇಳಿದ್ದಾರೆ.
ದೇಶ ಕಂಡ ಶ್ರೇಷ್ಠ ನಾಯಕರಲ್ಲಿ ಮೋದಿ ಕೂಡ ಒಬ್ಬರು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಮುಂಬರುವ ಲೋಕಸಭೆ ಚುನಾವಣೆಗೆ ಮೋದಿ ಮಂತ್ರ ಕೆಲಸ ಮಾಡುವ ಸಾಧ್ಯತೆ ಇಲ್ಲ. ಖಾಸಗಿಯಾಗಿ ಮಾತನಾಡುವಾಗ ಬಿಜೆಪಿಯವರು ಒಪ್ಪುತ್ತಾರೆ. ಆದರೆ ಸಾರ್ವಜನಿಕವಾಗಿ ಹೇಳಿಕೊಳ್ಳುವಾಗ ಮೌನವಾಗುತ್ತಾರೆ ಎಂದಿದ್ದಾರೆ.

ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಧಾರ್ಮಿಕ ಕೆಲಸ-ಕಾರ್ಯಗಳಿಗೆ ವಾಪಸ್ ಕಳುಹಿಸಬೇಕು ಎಂದಿರುವ ಅವರು, ಕೇಂದ್ರ ಸರಕಾರದ ನೀತಿ ಬಗ್ಗೆ ದೊಡ್ಡ ಮಟ್ಟದಲ್ಲಿ ಸಿಟ್ಟಿದೆ. ಈಗಲೇ ಚುನಾವಣೆ ನಡೆದರೆ ಕಷ್ಟದ ಸನ್ನಿವೇಶ ಇದೆ ಎಂದು ಹೇಳಿದ್ದಾರೆ.
ಯೋಜನಾ ಆಯೋಗದ ಹೆಸರು ಬದಲಾವಣೆ, ಸಿಬಿಐ ತನಿಖೆ- ಆರ್ ಬಿಐ ಕಾರ್ಯ ನಿರ್ವಹಣೆಯಲ್ಲಿ ಹಸ್ತಕ್ಷೇಪ ಮತ್ತು ಉತ್ತರಾಖಂಡ್ ನಲ್ಲಿ ಚುನಾಯಿತ ಸರಕಾರವನ್ನು ಕೆಡವಲು ಯತ್ನಿಸಿದ್ದರ ಬಗ್ಗೆ ಕೂಡ ಮಾತನಾಡಿದ್ದಾರೆ. ಗೋವಾ, ಮಣಿಪುರದಲ್ಲಿ ಸರಕಾರ ರಚಿಸಲು ಮುಂದಾದ ನಿರ್ಧಾರ ಕೂಡ ಒಳ್ಳೆ ನಡೆಯಲ್ಲ ಎಂದಿದ್ದಾರೆ.
ಎಂಬತ್ತೆಂಟು ವರ್ಷದ ಸಂಘ್ ಪ್ರಿಯ ಗೌತಮ್ ಅವರು ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದ ಅವಧಿಯಲ್ಲಿ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.












Click it and Unblock the Notifications