ಲಖಿಂಪುರ್ ಖೇರಿ ಹಿಂಸಾಚಾರ: ಇಬ್ಬರ ಬಂಧನ, ಕೇಂದ್ರ ಸಚಿವರ ಮಗ ನಾಪತ್ತೆ
ಲಕ್ನೋ, ಅಕ್ಟೋಬರ್ 7: ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಕೇಂದ್ರ ಸಚಿವರ ಬೆಂಗಾವಲು ಕಾರು ಪ್ರತಿಭಟನಾಕಾರರ ಮೇಲೆ ಹರಿದು, ಎಂಟು ಜನರು ಸಾವನ್ನಪ್ಪಿದ ನಾಲ್ಕು ದಿನಗಳ ಬಳಿಕ, ಯುಪಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಲುವಕುಶ್ ರಾಣಾ ಮತ್ತು ಆಶಿಶ್ ಪಾಂಡೆ ಎಂದು ಗುರುತಿಸಲ್ಪಟ್ಟ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದು, ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಮಗ ಆಶಿಶ್ ಮಿಶ್ರಾ ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಬಂಧಿತರಿಬ್ಬರು ಆಶಿಶ್ ಮಿಶ್ರಾ ಆಪ್ತ ಸಹಾಯಕರಾಗಿದ್ದು, ಇನ್ನೂ ಹೆಚ್ಚಿನ ದಾಳಿ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಎಷ್ಟು ಜನರನ್ನು ಬಂಧಿಸಲಾಗಿದೆ ಎಂಬುದರ ಕುರಿತು ಒಂದು ದಿನದೊಳಗೆ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಉತ್ತರಪ್ರದೇಶ ಸರ್ಕಾರಕ್ಕೆ ಸೂಚಿಸಿದ ಕೆಲವೇ ಗಂಟೆಗಳ ನಂತರ ಇಬ್ಬರನ್ನು ಬಂಧಿಸಲಾಗಿದೆ.

ಲಖಿಂಪುರ್ ಖೇರಿ ಹಿಂಸಾಚಾರದ ಪ್ರಕರಣ ದುರದೃಷ್ಟಕರ ಘಟನೆ, ಸದ್ಯದ ಪರಿಸ್ಥಿತಿಯಲ್ಲಿ ರೈತರು, ಪತ್ರಕರ್ತರು ಇತ್ಯಾದಿ ಕೊಲ್ಲಲ್ಪಟ್ಟ ಎಂಟು ವ್ಯಕ್ತಿಗಳ ಬಗ್ಗೆಯೂ ತಿಳಿಸಿ. ಅಸಮಾಧಾನವೆಂದರೆ ನೀವು ಸರಿಯಾದ ಎಫ್‌ಐಆರ್ ದಾಖಲಿಸುತ್ತಿಲ್ಲ ಮತ್ತು ಸರಿಯಾದ ತನಿಖೆ ನಡೆಯುತ್ತಿಲ್ಲ,'' ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹೇಳಿದರು.
ಲಖಿಂಪುರ್ ಖೇರಿ ಹಿಂಸಾಚಾರವು ರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಬಿರುಗಾಳಿಯನ್ನು ಹುಟ್ಟುಹಾಕಿದ್ದು, ಪೊಲೀಸ್ ಎಫ್‌ಐಆರ್‌ನಲ್ಲಿ ಮುಖ್ಯ ಆರೋಪಿ ಆಶಿಶ್ ಮಿಶ್ರಾ ಹೆಸರಿಸಲ್ಪಟ್ಟಿದೆ. ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಮಗ ಅಜಯ್ ಮಿಶ್ರಾರನ್ನು ಪದಚ್ಯುತಗೊಳಿಸುವಂತೆ ಪ್ರತಿಪಕ್ಷ ನಾಯಕರು ಒತ್ತಾಯಿಸುತ್ತಿದ್ದಂತೆಯೇ, ಸಚಿವ ಅಜಯ್ ಮಿಶ್ರಾ ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ್ದರು.

ಪ್ರತಿಭಟನಾಕಾರರ ಮೇಲೆ ಹರಿದ ಕಾರಿನಲ್ಲಿ ತನ್ನ ಮಗ ಇರಲಿಲ್ಲ ಎಂದು ಅಜಯ್ ಮಿಶ್ರಾ ಹೇಳಿಕೊಂಡಿದ್ದಾರೆ. ಕಲ್ಲು ತೂರಾಟಗಾರರು ದಾಳಿ ಮಾಡಿದ ನಂತರ ಚಾಲಕ ಸಮತೋಲನ ಕಳೆದುಕೊಂಡಿದ್ದಾನೆ ಮತ್ತು ನಂತರ ಕೆಲವು ಪ್ರತಿಭಟನಾಕಾರರು ಕಾರಿನ ಕೆಳಗೆ ಬಂದರು. ನಂತರ ಕಾರು ಚಾಲಕನನ್ನು ಹತ್ಯೆ ಮಾಡಲಾಯಿತು ಮತ್ತು ಕಾರಿಗೆ ಬೆಂಕಿ ಹಚ್ಚಲಾಯಿತು ಎಂದು ಸಚಿವರು ಹೇಳಿದ್ದಾರೆ.
ಎಫ್‌ಐಆರ್‌ನಲ್ಲಿ ಆಶಿಶ್ ಮಿಶ್ರಾ ಎಂದು ಹೆಸರಿಸಲಾಗಿದೆ ಮತ್ತು ಪ್ರತಿಭಟನಾಕಾರರ ಮೇಲೆ ಓಡಿದ ಕಾರನ್ನು ಆತನೇ ಚಾಲನೆ ಮಾಡುತ್ತಿದ್ದನು ಎಂದು ದಾಖಲಿಸಿದೆ. ಎಫ್ಐಆರ್ ಪ್ರಕಾರ ಕಾರಿನಿಂದ ಕೆಳಗಿಳಿದ ನಂತರ ಆಶಿಶ್ ಮಿಶ್ರಾ ಕೂಡ ಗುಂಡು ಹಾರಿಸಿದ್ದು, ನಂತರ ಆತ ತಲೆಮರೆಸಿಕೊಂಡಿದ್ದಾನೆ.
ಇದರ ಮಧ್ಯೆ ಘಟನೆಯ ಒಂದು ವಿಡಿಯೋವು ಲಖಿಂಪುರ್ ಖೇರಿ ಹಿಂಸಾಚಾರದಲ್ಲಿ ಮೂರು ಕಾರುಗಳು ಭಾಗಿಯಾಗಿವೆ ಮತ್ತು ಆ ಕಾರುಗಳು ಯಾವುದೇ ದಾಳಿಗೆ ಒಳಗಾಗಿಲ್ಲ ಎಂದು ಸೂಚಿಸುತ್ತವೆ. ಮೊದಲ ಕಾರು ಅನಿರೀಕ್ಷಿತವಾಗಿ ಹೆಚ್ಚಿನ ವೇಗದಲ್ಲಿ ಧ್ವಜಗಳೊಂದಿಗೆ ನಡೆಯುತ್ತಿದ್ದ ಪ್ರತಿಭಟನಾಕಾರರ ಮೇಲೆ ಹರಿಯಿತು. ನಂತರ ಇತರ ಎರಡು ಕಾರುಗಳು ಬಂದವು ಎಂದು ತೋರಿಸುತ್ತದೆ.












Click it and Unblock the Notifications