ಲಖಿಂಪುರ ಖೇರಿ ಹಿಂಸಾಚಾರ; ಸುಪ್ರೀಂಗೆ ವಿವರಣೆ ಕೊಟ್ಟ ಯುಪಿ ಸರ್ಕಾರ
ಲಕ್ನೋ, ಅಕ್ಟೋಬರ್ 07; ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಭಾನುವಾರ ನಡೆದ ಹಿಂಸಾಚಾರದಲ್ಲಿ 4 ರೈತರು ಸೇರಿ 8 ಜನರು ಮೃತಪಟ್ಟಿದ್ದಾರೆ. ಈ ವಿಚಾರದ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಉತ್ತರ ಪ್ರದೇಶ ಘಟನೆಯ ತನಿಖೆ ಬಗ್ಗೆ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.
ಉತ್ತರ ಪ್ರದೇಶದ ಇಬ್ಬರು ವಕೀಲರು ಭಾನುವಾರ ನಡೆದ ಹಿಂಸಾಚಾರದ ಕುರಿತು ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಯಬೇಕು ಎಂದು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದರು. ಈ ಅರ್ಜಿಯ ವಿಚಾರಣೆಯ ವೇಳೆ ಉತ್ತರ ಪ್ರದೇಶ ಸರ್ಕಾರ ತನಿಖೆ ಬಗ್ಗೆ ಮಾಹಿತಿ ನೀಡಿದೆ.
ಗುರುವಾರ ಉತ್ತರ ಪ್ರದೇಶ ಸರ್ಕಾರ ಸುಪ್ರೀಂಕೋರ್ಟ್‌ಗೆ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಲಾಗಿದೆ. ಪ್ರಕರಣದ ಪರಿಸ್ಥಿತಿ ಬಗ್ಗೆ ವರದಿ ನೀಡಲು ಏಕ ಸದಸ್ಯ ಸಮಿತಿಯನ್ನು ರಚಿಸಲಾಗಿದೆ ಎಂದು ವಿವರಣೆ ನೀಡಿದೆ.

ಸುಪ್ರೀಂಕೋರ್ಟ್ ಉತ್ತರ ಪ್ರದೇಶ ಸರ್ಕಾರದಕ್ಕೆ ಪರಿಸ್ಥಿತಿ ಬಗ್ಗೆ ವರದಿ ಸಲ್ಲಿಕೆ ಮಾಡಿ. ಯಾರು ಆರೋಪಿಗಳು, ಯಾರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ, ಯಾರನ್ನು ಬಂಧಿಸಲಾಗಿದೆ? ಎಂದು ವರದಿ ನೀಡಬೇಕು ಎಂದು ಸೂಚನೆ ನೀಡಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠದ ಮುಂದೆ ಉತ್ತರ ಪ್ರದೇಶ ಸರ್ಕಾರ ಈ ಕುರಿತು ಮಾಹಿತಿ ನೀಡಿದೆ. ವರದಿ ನೀಡುವಂತೆ ಸೂಚನೆ ನೀಡಿರುವ ಕೋರ್ಟ್ ಶುಕ್ರವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ, ಘಟನೆಯಲ್ಲಿ ಮಗನನ್ನು ಕಳೆದುಕೊಂಡ ತಾಯಿಯೊಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಸಂದೇಶ ನಮಗೆ ಬಂದಿದೆ. ನಿಮ್ಮ ಸರ್ಕಾರದ ಜೊತೆ ಮಾತನಾಡಿ ತಕ್ಷಣ ಅವರಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸಿ ಎಂದು ವಕೀಲರಿಗೆ ಸೂಚನೆ ನೀಡಿದರು.
ಇಬ್ಬರು ವಕೀಲರು ಮಂಗಳವಾರ ನ್ಯಾಯಾಲಯಕ್ಕೆ ಪತ್ರ ಬರೆದಿದ್ದರು. ನಮ್ಮ ರಿಜಿಸ್ಟ್ರಾರ್‌ಗೆ ಪಿಐಎಲ್ ದಾಖಲಿಸಿಕೊಳ್ಳುವಂತೆ ನಾವು ಸೂಚಿಸಿದ್ದೆವು. ಆದರೆ ಸು-ಮೊಟೋ ಪ್ರಕರಣ ದಾಖಲಿಸಿದ್ದಾರೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅರ್ಜಿಯ ವಿಚಾರಣೆ ವೇಳೆ ಹೇಳಿದರು.
ಲಕ್ನೋ ವಿಭಾಗದ ಐಜಿ ಲಕ್ಷ್ಮೀ ಸಿಂಗ್ ಲಖಿಂಪುರ ಖೇರಿ ಗಲಭೆ ಬಗ್ಗೆ ಮಾತನಾಡಿದ್ದು, "ಜಿಲ್ಲಾ ಮಟ್ಟದ ಸಮಿತಿ ಘಟನೆ ಬಗ್ಗೆ ತನಿಖೆ ನಡೆಸಿ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದೆ. ನ್ಯಾಯಾಂಗ ತನಿಖೆಯೂ ನಡೆಯುತ್ತಿದೆ. ಸಾಕ್ಷ್ಯಗಳನ್ನು ಆಧರಿಸಿ ಘಟನೆಗೆ ಕಾರಣರಾದ ಆರೋಪಿಗಳನ್ನು ಬಂಧಿಸಲಾಗುತ್ತದೆ" ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ಸರ್ಕಾರ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಏಕಸದಸ್ಯ ಪೀಠವನ್ನು ರಚನೆ ಮಾಡಿದೆ.
ಅಲಹಾಬಾದ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪ್ರದೀಪ್ ಕುಮಾರ್ ಶ್ರೀವಾಸ್ತವ ನೇತೃತ್ವದ ಏಕ ಸದಸ್ಯ ಆಯೋಗವನ್ನು ರಚನೆ ಮಾಡಿ ರಾಜ್ಯಪಾಲರು ಅಧಿಸೂಚನೆ ಹೊರಡಿಸಿದ್ದಾರೆ. ವಿಚಾರಣೆ ನಡೆಸಲು 2 ತಿಂಗಳ ಕಾಲಾವಕಾಶವನ್ನು ಕೊಡಲಾಗಿದೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ ಮಿಶ್ರಾ ಬೆಂಗಾವಲು ಪಡೆ ವಾಹನಗಳು ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಹರಿದ ಪರಿಣಾಮ ನಾಲ್ವರು ಮೃತಪಟ್ಟಿದ್ದರು. ಬಳಿಕ ನಡೆದ ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಕಾರಿನಲ್ಲಿ ಅಜಯ್ ಕುಮಾರ್ ಮಿಶ್ರಾ ಪುತ್ರ ಇದ್ದರು ಎಂಬ ಮಾಹಿತಿ ಇದೆ.
ಭಾನುವಾರ ಘಟನೆ ನಡೆದರೂ ಇನ್ನು ಆರೋಪಿಗಳನ್ನು ಬಂಧಿಸಿಲ್ಲ ಎಂಬುದು ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಉತ್ತರ ಪ್ರದೇಶದ ಇಬ್ಬರು ವಕೀಲರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಗೆ ಪತ್ರವನ್ನು ಬರೆದಿದ್ದಾರೆ.












Click it and Unblock the Notifications