ರೈತರ ಬೇಡಿಕೆ ಈಡೇರಿಸುತ್ತೀರೋ, ಹೋರಾಟ ಪುನಾರಂಭಿಸಬೇಕೇ: ಕೇಂದ್ರಕ್ಕೆ ಎಚ್ಚರಿಕೆ
ಲಕ್ನೋ, ಜನವರಿ 31: ಕೇಂದ್ರ ಸರ್ಕಾರವು ರೈತರಿಗೆ 2021ರ ಡಿಸೆಂಬರ್ ತಿಂಗಳಿನಲ್ಲಿ ನೀಡಿದ ಭರವಸೆಗಳನ್ನು ಈಡೇರಿಸದಿದ್ದರೆ ರೈತರು ತಮ್ಮ ಹೋರಾಟವನ್ನು ಪುನಾರಂಭ ಮಾಡಬೇಕಾಗುತ್ತದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಎಚ್ಚರಿಕೆ ನೀಡಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ದೇಶದ ಅನ್ನದಾತರ ಹಿತ ಕಾಪಾಡುವುದು ರಾಷ್ಟ್ರಪತಿಗಳ ಸಾಂವಿಧಾನಿಕ ಬಾಧ್ಯತೆಯಾಗಿದೆ ಎಂದು ತಿಳಿಸಿದ್ದು, ರೈತರಿಗೆ ಈ ರೀತಿಯ ವಂಚನೆ ಮಾಡದಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ. ರೈತರ ಶ್ರಮದಿಂದಾಗಿ ದೇಶ ಆಹಾರ ಧಾನ್ಯದಲ್ಲಿ ಸ್ವಾವಲಂಬಿಯಾಗಿದೆ ಎಂದು ಸ್ಮರಣಿಕೆಯಲ್ಲಿ ತಿಳಿಸಲಾಗಿದೆ.
"ರೈತರ ಅವಿರತ ಶ್ರಮದಿಂದಾಗಿ ದೇಶದಲ್ಲಿ ಲಾಕ್‌ಡೌನ್ ಮತ್ತು ಆರ್ಥಿಕತೆ ಕುಸಿತದ ನಡುವೆಯೂ ಕೃಷಿ ಉತ್ಪಾದನೆಯು ನಿರಂತರವಾಗಿ ಹೆಚ್ಚಿದೆ. ರೈತರ ವಿಷಯದಲ್ಲಿ ತಂತ್ರ ಮಾಡಿದರೆ ಅದು ದೇಶಕ್ಕೆ ಅಪಾಯಕಾರಿ ಆಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ.

ದೇಶದ ಹಲವು ರಾಜ್ಯಗಳಲ್ಲಿ ದ್ರೋಹದ ದಿನ:
2020-21ರ ಐತಿಹಾಸಿಕ ಕಿಸಾನ್ ಆಂದೋಲನ ನಡೆಸಿದ ರೈತರಿಗೆ ನೀಡಿದ ಭರವಸೆಗಳನ್ನು ಕೇಂದ್ರ ಸರ್ಕಾರವು ತಿರಸ್ಕರಿಸಿದೆ ಎಂದು ಆರೋಪಿಸಿ "ದ್ರೋಹದ ದಿನ"ವನ್ನು ಆಚರಿಸಲಾಯಿತು. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಆಂಧ್ರಪ್ರದೇಶ, ಹಿಮಾಚಲ ಪ್ರದೇಶ, ತೆಲಂಗಾಣ, ಒಡಿಶಾ, ತಮಿಳುನಾಡು, ರಾಜಸ್ಥಾನ, ಗುಜರಾತ್, ತ್ರಿಪುರಾ ಸೇರಿದಂತೆ ಇತರ ರಾಜ್ಯಗಳಲ್ಲಿ ಸೋಮವಾರ ರೈತರು ಪ್ರತಿಭಟನೆ, ಮೆರವಣಿಗೆ ನಡೆಸಿ ನಾಯಕರ ಪ್ರತಿಕೃತಿ ದಹಿಸಿದರು.
ರೈತರ ಪ್ರತಿಭಟನೆ ಪುನಾರಂಭದ ಎಚ್ಚರಿಕೆ:
ಕಳೆದ ಡಿಸೆಂಬರ್ 9, 2021ರಂದು ಕೇಂದ್ರ ಸರ್ಕಾರವು ನೀಡಿದ ಲಿಖಿತ ಭರವಸೆಗಳಲ್ಲಿ ಒಂದನ್ನು ಈಡೇರಿಸಲಾಗಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ದೂಷಿಸಿದೆ. ರೈತರ ತಾಳ್ಮೆಗೆ ಸವಾಲು ಹಾಕುವ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಸಂಯುಕ್ತ ಕಿಸಾನ್ ಮೋರ್ಚಾ, ಭರವಸೆಗಳನ್ನು ಶೀಘ್ರವಾಗಿ ಈಡೇರಿಸದಿದ್ದರೆ ರೈತರು ಪ್ರತಿಭಟನೆಯನ್ನು ಪುನರಾರಂಭಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಘೋಷಿಸಿದೆ.
ಕನಿಷ್ಠ ಬೆಂಬಲ ಬೆಲೆ ಬಗ್ಗೆ ಸರ್ಕಾರದ ಸುಳ್ಳು:
ಕೇಂದ್ರ ಸರ್ಕಾರವು ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸುವುದಕ್ಕೆ ಸಂಬಂಧಿಸಿದಂತೆ ತನ್ನ ಸುಳ್ಳುಗಳನ್ನೇ ಮುಂದುವರಿಸುತ್ತಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಆರೋಪಿಸಿದೆ. "ಉತ್ಪಾದನೆಯ C2 ವೆಚ್ಚವನ್ನು ನಿರ್ಲಕ್ಷಿಸಿ, ರೈತರಿಗೆ ಅವರ ನಿಜವಾದ ಅರ್ಹತೆಯನ್ನು ನಿರಾಕರಿಸುವ A2+ ಕುಟುಂಬ ಕಾರ್ಮಿಕ ವೆಚ್ಚದ ಪರಿಕಲ್ಪನೆ ಬಳಸಲಾಗುತ್ತಿದೆ," ಎಂದು ಹೇಳಿದೆ.
ಕಾರ್ಮಿಕರ ಮುಷ್ಕರಕ್ಕೆ ರೈತರ ಬೆಂಬಲ:
ದೇಶದ ಐದು ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆ ನಡುವೆ ಮಾರ್ಚ್ 28 ಮತ್ತು 29 ಅನ್ನು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗುತ್ತಿದೆ. ಕಾರ್ಮಿಕರು ಕರೆ ನೀಡುತ್ತಿರುವ ಮುಷ್ಕರಕ್ಕೆ ರೈತ ಸಂಘಟನೆಗಳು ಬೆಂಬಲ ಘೋಷಿಸುತ್ತವೆ ಎಂದು ಎಚ್ಚರಿಕೆ ನೀಡಿದೆ.
ರೈತರ ಬೇಡಿಕೆಗೆ ಒಪ್ಪಿಕೊಂಡಿದ್ದ ಕೇಂದ್ರ ಸರ್ಕಾರ:
ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆ ಕಾನೂನು, ವಿದ್ಯುತ್ ಬಿಲ್ ಮತ್ತು ಪಾರಾಲಿ ಬಿಲ್ ಜಂಕ್, ರೈತರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯುವುದು, ಆಂದೋಲನದ ವೇಳೆ ಮೃತಪಟ್ಟ 700 ರೈತರ ಕುಟುಂಬಗಳಿಗೆ ಪರಿಹಾರ ನೀಡುವುದು. ಇದಲ್ಲದೇ ನವದೆಹಲಿಯ ಕೆಂಪು ಕೋಟೆ ಹಿಂಸಾಚಾರದ ಸಂದರ್ಭದಲ್ಲಿ ದಾಖಲಿಸಲಾದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಬೇಕು. ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ರನ್ನು ಸಂಪುಟದಿಂದ ವಜಾಗೊಳಿಸಬೇಕು ಹಾಗೂ ಕೊಲೆ ಆರೋಪದಡಿಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಬೇಕೆಂದು ಸಂಯುಕ್ತ ಕಿಸಾನ್ ಮೋರ್ಚಾ ಒತ್ತಾಯಿಸಿತು. ಈ ಬಗ್ಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಡಿಸೆಂಬರ್ 9ರಂದು ರೈತರು ತಮ್ಮ ಆಂದೋಲನವನ್ನು ಅಂತ್ಯಗೊಳಿಸಿದ್ದರು.












Click it and Unblock the Notifications