ಎಲ್ಲಾ ಅಂದುಕೊಂಡಂತೇ ಆದರೆ.... ಮಾಯಾವತಿ ಪ್ರಧಾನಿ!
ಲಕ್ನೋ, ಮೇ 06: "ಎಲ್ಲವೂ ಅಂದುಕೊಂಡಂತೆ ಆದರೆ... ನಾನು ಉತ್ತರ ಪ್ರದೇಶದ ಅಂಬೇಡ್ಕರ್ ನಗರದಿಂದ ಸ್ಪರ್ಧಿಸುತ್ತೇನೆ" ಎಂದು ಬಿಎಸ್ಪಿ ನಾಯಕಿ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಹೇಳಿದ್ದಾರೆ.
ಈ ಮೂಲಕ ತಾವು ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಸ್ಪಷ್ಟ ಸೂಚನೆಯನ್ನು ಮಾಯಾವತಿ ನೀಡಿದ್ದಾರೆ. "ಅಂಬೇಡ್ಕರ್ ನಗರ ನನ್ನ ರಾಷ್ಟ್ರ ರಾಜಕಾರಣದ ಹಾದಿಯಾದರೆ ಅಚ್ಚರಿಯಿಲ್ಲ" ಎಂದು ಅವರು ಹೇಳಿದ್ದಾರೆ.
ಅಕ್ಬರ್ಪುರ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ನಾಲ್ಕುಬಾರಿ ಆಯ್ಕೆಯಾಗಿದ್ದ 63 ವರ್ಷ ವಯಸ್ಸಿನ ಮಾಯಾವತಿ, ಕ್ಷೇತ್ರ ಮರುವಿಂಗಡಣೆಯ ನಂತರ ಸೃಷ್ಟಿಯಾದ ಅಂಬೇಡ್ಕರ ನಗರ ಕ್ಷೇತ್ರದಿಂದ ಈ ಬಾರಿ ಸ್ಪರ್ಧಿಸುತ್ತಾರೆ ಎಂಬ ವದಂತಿ ಇತ್ತು. ಆದರೆ ಅವರು ಲೋಕಸಭಾ ಚುನಾವಣೆ ಸ್ಪರ್ಧಿಸದೆ ಅಚ್ಚರಿ ನೀಡಿದರು.

ಆದರೆ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಅಕಸ್ಮಾತ್ ಮಹಾಘಟಬಂಧನದ ಸರ್ಕಾರ ಅಸ್ತಿತ್ವಕ್ಕೆ ಬರುವ ಸನ್ನಿವೇಶ ಸೃಷ್ಟಿಯಾಗಿದ್ದೇ ಆದರೆ, ಪ್ರಧಾನಿ ಹುದ್ದೆಯ ಆಕಾಂಕ್ಷಿಗಳಲ್ಲಿ ಮಾಯಾವತಿ ಸಹ ಒಬ್ಬರು. ಆದ್ದರಿಂದ ಅಂಥ ಸಂದರ್ಭ ಎದುರಾದರೆ ತಾವು ಅಂಬೇಡ್ಕರ್ ನಗರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದರು.
ಇಷ್ಟು ದಿನ ದೇಶದಲ್ಲಿ 'ನಮೋ ನಮೋ' ಮಂತ್ರ ಕೇಳಿಸುತ್ತಿತ್ತು. ಆದರೆ ಫಲಿತಾಂಶದ ನಂತರ 'ಜೈ ಭೀಮ್' ಮಂತ್ರ ಕೇಳಿಸಲಿದೆ ಎಂದು ಮಾಯಾವತಿ ಹೇಳಿದರು. ಅಂದ ಹಾಗೆ, 2014ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ, ಉತ್ತರ ಪ್ರದೇಶದಲ್ಲಿ ಮಾಯಾವತಿ ಅವರ ಬಹುಜನ ಸಮಾಜ ಪಕ್ಷ ಒಂದೂ ಕ್ಷೇತ್ರದಲ್ಲಿ ಜಯ ಗಳಿಸಿರಲಿಲ್ಲ. ಆದರೂ, ಈ ಬಾರಿ ಅವರು ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ.
ಈ ನಡುವೆ, ಅಖಿಲೇಶ್ ಯಾದವ್ ಅವರು ಸಮಾಜವಾದಿ ಪಕ್ಷ, ಮಾಯಾವತಿ ಅವರನ್ನು ಬಳಸಿಕೊಳ್ಳುತ್ತಿದ್ದು, ಬಹುಜನ ಸಮಾಜ ಪಕ್ಷದ ನಾಯಕಿ ಹುಷಾರಾಗಿರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಚರಿಸಿದ್ದಾರೆ. ಕಳೆದ ಚುನಾವಣೆಯಲ್ಲಿ 80ರಲ್ಲಿ 71 ಕ್ಷೇತ್ರಗಳಲ್ಲಿ ಗೆದ್ದಿದ್ದ ಭಾರತೀಯ ಜನತಾ ಪಕ್ಷವನ್ನು ಉತ್ತರ ಪ್ರದೇಶದಲ್ಲಿ ಬಗ್ಗುಬಡಿಯಲು ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಮೈತ್ರಿ ಮಾಡಿಕೊಂಡಿವೆ. ಈ ಮೈತ್ರಿಕೂಟದಿಂದ ಕಾಂಗ್ರೆಸ್ಸನ್ನು ಉದ್ದೇಶಪೂರ್ವಕವಾಗಿಯೇ ಹೊರಗೆ ಇರಿಸಲಾಗಿದೆ. ಇದು ಉತ್ತರ ಪ್ರದೇಶದ ಫಲಿತಾಂಶದ ಮೇಲೆ ಪರಿಣಾಮ ಬೀರುವುದೆ?












Click it and Unblock the Notifications