ಉತ್ತರ ಪ್ರದೇಶದಲ್ಲಿ ಜಾಟ್ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿಗೆ ಆರ್‌ಎಲ್‌ಡಿ ಸವಾಲ್
ಲಕ್ನೋ, ಜನವರಿ 21: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗದ್ದುಗೆ ಹಿಡಿದುಕೊಳ್ಳಲು ಭಾರತೀಯ ಜನತಾ ಪಕ್ಷ ಹಲವು ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ಕಳೆದ 2017ರಲ್ಲಿ ರಾಜ್ಯದ ಪಶ್ಚಿಮ ಭಾಗದಲ್ಲಿ ಜಾಟ್ ಮತಗಳ ಕ್ರೋಢೀಕರಣವು ಬಿಜೆಪಿಗೆ ಭಾರಿ ಗೆಲುವಿಗೆ ಕಾರಣವಾಗಿತ್ತು. ಆದರೆ ಈ ಬಾರಿ ಬಿಜೆಪಿ ಲೆಕ್ಕಾಚಾರ ಉಲ್ಟಾ ಹೊಡೆಯುವ ಲಕ್ಷಣಗಳು ಗೋಚರಿಸುತ್ತಿವೆ.
ಕೇಂದ್ರ ಸರ್ಕಾರ ಜಾರಿಗೊಳಿಸಿದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ನಡೆಸಿದ ಪ್ರತಿಭಟನೆಯು ರಾಷ್ಟ್ರೀಯ ಲೋಕದಳ (RLD) ಪಕ್ಷದ ಜನಪ್ರಿಯತೆ ಮತ್ತು ಪ್ರಭಾವವನ್ನು ಹೆಚ್ಚಿಸಿದೆ. ಇದು ಭಾರತೀಯ ಜನತಾ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಈ ಮಧ್ಯೆ ಎಲ್ಲಾ ಜಾಟ್ ಮತಗಳು ಆರ್‌ಎಲ್‌ಡಿಯೊಂದಿಗೆ ಇಲ್ಲ ಎಂದು ಬಿಜೆಪಿ ಸಮರ್ಥಿಸಿಕೊಳ್ಳುತ್ತಿದೆ. ಅದಾಗ್ಯೂ, ಪ್ರಾದೇಶಿಕ ಸಂಘಟನೆಯು ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಮುಸ್ಲಿಮರ ಮತಗಳನ್ನು ಭದ್ರಪಡಿಸುವ ಸಾಧ್ಯತೆಯಿದೆ.
"ರಾಷ್ಟ್ರೀಯ ಲೋಕದಳ ಪಕ್ಷವನ್ನು ಸಾಂಪ್ರದಾಯಿಕವಾಗಿ ಜಾಟ್ ಪಕ್ಷವೆಂದು ಪರಿಗಣಿಸಲಾಗುತ್ತದೆ. ಆದರೆ ಮುಸ್ಲಿಂ ಸಮುದಾಯದ ಮತಗಳು ಬಿಜೆಪಿ ವಿರುದ್ಧ ಬೀಳುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಈ ಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷ ಅಥವಾ ಸಮಾಜವಾದಿ ಪಕ್ಷ ಇಲ್ಲದಿರುವುದರಿಂದ ಮುಸ್ಲಿಮರು ಆರ್‌ಎಲ್‌ಡಿ ಅನ್ನು ಬೆಂಬಲಿಸುವ ಸಾಧ್ಯತೆಗಳು ಹೆಚ್ಚಾಗಿವೆ.

ಬಿಜೆಪಿಗೆ ಪ್ರಬಲ ಪೈಪೋಟಿಯೇ ಎಸ್‌ಪಿ:
"ರೈತರ ಪ್ರತಿಭಟನೆಯಿಂದ ಆರ್‌ಎಲ್‌ಡಿ ಲಾಭ ಪಡೆದುಕೊಂಡಿದೆಯೇ ವಿನಃ ಬೇರೇನಿಲ್ಲ. ಬಹುಜನ ಸಮಾಜ ಪಕ್ಷವು ಕೆಲವು ಸ್ಥಾನಗಳನ್ನು ಹೊರತುಪಡಿಸಿ ಅಷ್ಟರ ಮಟ್ಟಿಗೆ ದೀರ್ಘ ಪೈಪೋಟಿ ನೀಡುವ ಸಾಮರ್ಯವನ್ನು ಹೊಂದಿಲ್ಲ. ಇದು ಸಮಾಜವಾದಿ ಪಕ್ಷ ಮಾತ್ರ ಬಿಜೆಪಿಯನ್ನು ಸೋಲಿಸಬಲ್ಲದು ಎಂಬ ತೀರ್ಮಾನಕ್ಕೆ ಕಾರಣವಾಗುತ್ತದೆ," ಎಂದು ಭಾಗಪತ್‌ನ ಬಿಜೆಪಿ ಸಂಸದ ಸತ್ಯಪಾಲ್ ಸಿಂಗ್ ಹೇಳಿದ್ದಾರೆ.
"ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಕೆಲವು ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳನ್ನು ಹೊರತುಪಡಿಸಿದರೆ ಬೇರೆ ಎಲ್ಲೂ ಸಮಾಜವಾದಿ ಪಕ್ಷವು ಅಸ್ತಿತ್ವದಲ್ಲಿಲ್ಲ. ಅದಕ್ಕಾಗಿಯೇ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಆರ್‌ಎಲ್‌ಡಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ," ಎಂದು ಬಿಜೆಪಿ ನಾಯಕ ಸತ್ಯಪಾಲ್ ಸಿಂಗ್ ಹೇಳಿದ್ದಾರೆ.
ಮೈತ್ರಿಕೂಟದಲ್ಲಿ ಎಸ್‌ಪಿ ಪ್ರಾಬಲ್ಯ:
ಉತ್ತರ ಪ್ರದೇಶದ ಭಾಗ್ಪತ್ ಜಿಲ್ಲೆಯ ಛಪ್ರೌಲಿ ಮತ್ತು ಸಿವಾಲ್ಖಾಸ್ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಆಯ್ಕೆ ಮಾಡಿರುವುದಕ್ಕೆ ಜಾಟ್ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ಹಿನ್ನೆಲೆ ಎಸ್‌ಪಿ-ಆರ್‌ಎಲ್‌ಡಿ ಮೈತ್ರಿಕೂಟವು ತನ್ನ ಅಭ್ಯರ್ಥಿಗಳನ್ನು ಬದಲಾಯಿಸಿತು. ಮೈತ್ರಿಕೂಟದಲ್ಲಿ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷವು ಹೆಚ್ಚು ಪ್ರಾಬಲ್ಯವನ್ನು ಹೊಂದಿದೆ ಎಂದು ಅವಲೋಕಿಸಲಾಗುತ್ತಿದೆ.
ಭಾರತೀಯ ಕಿಸಾನ್ ಯೂನಿಯನ್ ಬಿಜೆಪಿ ವಿರೋಧಿಯಲ್ಲ:
ಕೇಂದ್ರ ಸರ್ಕಾರ ಜಾರಿಗೊಳಿಸಿದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಸಮರ ಸಾರಿದ ಭಾರತೀಯ ಕಿಸಾನ್ ಯೂನಿಯನ್ ಬಿಜೆಪಿಯ ವಿರೋಧಿಯಲ್ಲ ಎಂದು ಸತ್ಯಪಾಲ್ ಸಿಂಗ್ ಹೇಳಿದ್ದಾರೆ. ರೈತ ಸಂಘಟನೆಯು ಕೆಲವು ಸಮಸ್ಯೆಗಳನ್ನು ಹೊಂದಿದ್ದು, ಚುನಾವಣೆಗೂ ಪೂರ್ವದಲ್ಲಿಯೇ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಹಂತದಲ್ಲಿ ಬಿಕೆಯು ಸಂಘಟನೆಯು ತಟಸ್ಥ ನಿಲುವು ಪ್ರದರ್ಶಿಸಲಿದೆ ಎಂಬು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರ:
ಕೇಂದ್ರ ಸರ್ಕಾರದ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ 2020, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ 2020, (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ 2020 ಅನ್ನು ರದ್ದುಗೊಳಿಸುವುದಕ್ಕಾಗಿ ಕೃಷಿ ಕಾಯ್ದೆ ರದ್ಧತಿ 2021ರ ಮಸೂದೆಯನ್ನು ರಚಿಸಲಾಗಿತ್ತು. ಈ ಹಿಂದೆ ನವೆಂಬರ್ 24ರಂದು ಈ ಸಂಬಂಧ ಕೇಂದ್ರ ಸಂಪುಟದ ಅನುಮೋದನೆ ಪಡೆದುಕೊಳ್ಳಲಾಗಿತ್ತು. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ನವೆಂಬರ್ 29ರಂದು ಕೃಷಿ ಕಾಯ್ದೆಗಳ ರದ್ದತಿ ಮಸೂದೆ, 2021 ಅನ್ನು ಲೋಕಸಭೆಯಲ್ಲಿ ಮಂಡಿಸಿದರು. ಧ್ವನಿಮತದ ಮೂಲಕ ಮಸೂದೆ ಅಂಗೀಕರಿಸಲಾಗಿದ್ದು, ರಾಜ್ಯಸಭೆಯಲ್ಲೂ ಅಂಗೀಕರಿಸಲಾಯಿತು.












Click it and Unblock the Notifications