ಹಗಲು ಜನ ಸೇರಿಸೋದು, ರಾತ್ರಿ ಕರ್ಫ್ಯೂ ವಿಧಿಸೋದು; ಇದೇನ್ರಿ ಕಾನೂನು?; ವರುಣ್ ಗಾಂಧಿ ಟೀಕೆ
ಲಕ್ನೋ, ಡಿಸೆಂಬರ್ 27: ಭಾರತದಲ್ಲಿ ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವುದರ ನಡುವೆ ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರವನ್ನು ನಡೆಸುತ್ತಿರುವುದಕ್ಕಾಗಿ ಬಿಜೆಪಿ ಪಿಲಿಭಿತ್ ಸಂಸದ ವರುಣ್ ಗಾಂಧಿ ಸ್ವಪಕ್ಷವನ್ನೇ ಟೀಕಿಸಿದ್ದಾರೆ. "ರಾತ್ರಿಯಲ್ಲಿ ಕರ್ಫ್ಯೂ ಹೇರುವುದು ಮತ್ತು ಹಗಲಿನಲ್ಲಿ ಲಕ್ಷಾಂತರ ಜನರನ್ನು ರ್‍ಯಾಲಿಗಳಿಗೆ ಕರೆಯುವುದು ಸಾಮಾನ್ಯ ಜನರ ಗ್ರಹಿಕೆಗೂ ಮೀರಿದೆ," ಎಂದು ಸಂಸದ ವರುಣ್ ಗಾಂಧಿಯವರು ತಮ್ಮ ಪಕ್ಷದ ನಾಯಕತ್ವದ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.
"ಉತ್ತರ ಪ್ರದೇಶದ ಸೀಮಿತ ಆರೋಗ್ಯ ವ್ಯವಸ್ಥೆಗಳನ್ನು ಗಮನಿಸಲೇಬೇಕು. ಓಮಿಕ್ರಾನ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವುದು ಅಥವಾ ಚುನಾವಣೆಗಳಲ್ಲಿ ಶಕ್ತಿ ಪ್ರದರ್ಶನ ಮಾಡುವುದು, ಇವುಗಳಲ್ಲಿ ನಮ್ಮ ಮೊದಲ ಆದ್ಯತೆ ಯಾವುದು ಎಂಬುದನ್ನು ಪ್ರಾಮಾಣಿಕವಾಗಿ ನಿರ್ಧರಿಸಬೇಕಿದೆ," ಎಂದು ಹೇಳಿದರು.

ಉತ್ತರ ಪ್ರದೇಶ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ
ಕಳೆದ ಡಿಸೆಂಬರ್ 25ರಂದು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 'ಜನ್ ವಿಶ್ವಾಸ ಯಾತ್ರೆ' ನಡೆಸಿದರು. ಸಿಎಂ ಜೊತೆಗೆ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಸಹ ಪ್ರಚಾರ ಮೆರವಣಿಗೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಇಂಥ ಘಟನೆಗಳು ಆಗಾಗ ನಡೆಯುತ್ತಿವೆ.

ರಾಜ್ಯ, ಕೇಂದ್ರಾಡಳಿತ ಪ್ರದೇಶ ಅಧಿಕಾರಿಗಳ ಜೊತೆ ಸಭೆ
ಉತ್ತರ ಪ್ರದೇಶದಲ್ಲಿ ಚುನಾವಣಾ ಮೆರವಣಿಗೆಯಲ್ಲಿ ಭಾಗವಹಿಸುವುದಕ್ಕೂ ಎರಡು ದಿನಗಳ ಹಿಂದೆಯಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುನ್ನೆಚ್ಚರಿಕೆ ಮತ್ತು ಜಾಗರೂಕತೆ ಪಾಠ ಮಾಡಿದ್ದರು. ಡಿಸೆಂಬರ್ 23ರಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಧಿಕಾರಿಗಳ ಜೊತೆಯಲ್ಲಿ ಪ್ರಧಾನಿ ಸಭೆ ನಡೆಸಿದ್ದರು. ಅಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೊನಾವೈರಸ್ ಸೋಂಕಿನ ಹರಡುವಿಕೆ ಮತ್ತು ಓಮಿಕ್ರಾನ್ ಸೋಂಕಿತ ಪ್ರಕರಣಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಿದ್ದರು ಎಂಬುದನ್ನು ವರುಣ್ ಗಾಂಧಿ ಉಲ್ಲೇಖಿಸಿದ್ದಾರೆ.

ಎಲ್ಲ ರಾಜಕೀಯ ಪಕ್ಷಗಳಿಂದ ಶಕ್ತಿ ಪ್ರದರ್ಶನ
ಭಾರತೀಯ ಜನತಾ ಪಕ್ಷದ ನಾಯಕರು ಆಯೋಜಿಸುತ್ತಿರುವ ರಾಜಕೀಯ ಸಭೆ ಸಮಾರಂಭಗಳು ಹಾಗೂ ಪ್ರಚಾರದ ಮೆರವಣಿಗೆಗಳ ಬಗ್ಗೆ ಸಂಸದ ವರುಣ್ ಗಾಂಧಿ ಟೀಕಿಸಿದ್ದಾರೆ. ಬಿಜೆಪಿ ಹೊರತಾಗಿ ಇತರೆ ಎಲ್ಲಾ ಪಕ್ಷಗಳು ಪ್ರಚಾರ ಮೆರವಣಿಗೆಗಳನ್ನು ನಡೆಸುತ್ತಿವೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ 2022ರ ಹಿನ್ನೆಲೆ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವ ಸಮಾಜವಾದಿ ಪಕ್ಷ, ಕಾಂಗ್ರೆಸ್ ಹಾಗೂ ಬಹುಜನ ಸಮಾಜವಾದಿ ಪಕ್ಷಗಳು ಸಹ ಬೃಹತ್ ಮೆರವಣಿಗೆಗಳನ್ನು ನಡೆಸುತ್ತಿರುವ ಬಗ್ಗೆ ಕಿಡಿ ಕಾರಿದ್ದಾರೆ.

ಓಮಿಕ್ರಾನ್ ಸೋಂಕು ನಿಯಂತ್ರಣಕ್ಕಾಗಿ ರಾತ್ರಿ ಕರ್ಫ್ಯೂ ಜಾರಿ
ಉತ್ತರ ಪ್ರದೇಶದಲ್ಲಿ ಒಂದು ಕಡೆ ರಾಜಕೀಯ ಶಕ್ತಿ ಪ್ರದರ್ಶಿಸುವ ಉದ್ದೇಶದಿಂದ ಬೃಹತ್ ಮೆರವಣಿಗೆಗಳನ್ನು ನಡೆಸುತ್ತಿದೆ. ಇನ್ನೊಂದು ಮಗ್ಗಲಿನಲ್ಲಿ ರಾಜ್ಯ ಸರ್ಕಾರವು ಓಮಿಕ್ರಾನ್ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಸಾರ್ವಜನಿಕರ ಮೇಲೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರುತ್ತಿದೆ. ಕಳೆದ ಡಿಸೆಂಬರ್ 25ರ ಶುಕ್ರವಾರದಿಂದಲೇ ಉತ್ತರ ಪ್ರದೇಶದಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಿದೆ. ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ಕರ್ಫ್ಯೂ ವಿಧಿಸಲಾಗಿದ್ದು, ಇತರ ನಿರ್ಬಂಧಗಳನ್ನು ಸಹ ಜಾರಿಗೆ ತರಲಾಗಿದೆ. ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ 200ಕ್ಕಿಂತ ಹೆಚ್ಚು ಜನರಿಗೆ ಮದುವೆಗೆ ಅವಕಾಶ ನೀಡುವಂತಿಲ್ಲ. ದೇಶದಲ್ಲಿ ಹೆಚ್ಚುತ್ತಿರುವ ಓಮಿಕ್ರಾನ್ ಪ್ರಕರಣಗಳಿಂದಾಗಿ ಹೆಚ್ಚಿನ ನಿಗಾದ ನಡುವೆ ಹೊಸ ನಿರ್ದೇಶನಗಳನ್ನು ನೀಡಲಾಗಿದೆ.












Click it and Unblock the Notifications