ಕೊರೊನಾವೈರಸ್ ಹೈ ರಿಸ್ಕ್, ಕಡ್ಡಾಯವಾಯ್ತು ಈ ಜಿಲ್ಲೆಗಳಲ್ಲಿ ಮಾಸ್ಕ್
ಲಕ್ನೋ, ಏಪ್ರಿಲ್, 18 : ಕೊರೊನಾ ಕಡಿಮೆಯಾಯ್ತು, ಇನ್ನೇನು.. ಮಾಸ್ಕ್‌ಗೂ ಗುಡ್‌ಬೈ ಹೇಳೋಣ ಅಂದುಕೊಂಡಿದ್ದವರಿಗೆ, ಈಗ ಮತ್ತೆ ಕೊರೊನಾ ಹೆಚ್ಚಳದಿಂದ ಮಾಸ್ಕ್ ಗತಿ ಎಂಬ ಸ್ಥಿತಿ ಎದುರಾಗಿದೆ. ಸದ್ಯ ಉತ್ತರ ಪ್ರದೇಶದಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಕಾರಣ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ರಾಜಧಾನಿ ಲಕ್ನೋ ಮತ್ತು 6 ಎನ್‌ಸಿಆರ್ ಜಿಲ್ಲೆಗಳಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಸೂಚಿಸಿದೆ.
ದೇಶದಲ್ಲಿ ಮತ್ತೆ ಕೊರೊನಾ ಲಗ್ಗೆ ಇಡುತ್ತಿದ್ದು, ಶೇಕಡ 90 ರಷ್ಟು ಕೋವಿಡ್ ಕೇಸ್‌ಗಳು ಹೆಚ್ಚಾಗ್ತಿವೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದರಂತೆ ಉತ್ತರ ಪ್ರದೇಶದಲ್ಲೂ ಸಹ ಸೋಂಕಿತರ ಸಂಖ್ಯೆ ಏರುತ್ತಿದೆ. ಹೀಗಾಗಿ ಉತ್ತರ ಪ್ರದೇಶ ಸರ್ಕಾರ ರಾಜಧಾನಿ ಲಖನೌ ಸೇರಿದಂತೆ ಗೌತಮ ಬುದ್ದ ನಗರ, ಗಾಜಿಯಾಬಾದ್, ಹರ್ಪುರ, ಮೀರತ್, ಬುಲಂದಶಹರ್, ಭಾಗ್‌ಪೇಟ್ ಜಿಲ್ಲೆಗಳಲ್ಲಿ ಜನರು ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಅಂಹವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಅಂತ ಸರ್ಕಾರದ ವಕ್ತಾರ ಸೂಚಿಸಿದ್ದಾರೆ.
ಕಳೆದ 24 ಗಂಟೆಯಲ್ಲೇ ಹೆಚ್ಚಾಗಿ ಗೌತಮ ಬುದ್ದ ನಗರದಲ್ಲಿ 65 ಕೋವಿಡ್ ಕೇಸ್‌ಗಳು ಪತ್ತೆಯಾಗಿದೆ. ಉಳಿದಂತೆ ಗಾಜಿಯಾಬಾದ್‌ನಲ್ಲಿ 20 ಮತ್ತು ಲಕ್ನೋದಲ್ಲಿ 10 ಕೊರೊನಾ ಕೇಸ್‌ಗಳು ಕಂಡುಬಂದಿದೆ, ಸದ್ಯಕ್ಕೆ ಉತ್ತರ ಪ್ರದೇಶದಲ್ಲಿ ಈವರೆಗೂ 20 ಲಕ್ಷದ 47 ಸಾವಿರದ 511ಜನರು ಕೊರೊನಾದಿಂದ ಪೂರ್ಣ ಗುಣಮುಖರಾಗಿದ್ದಾರೆ. ಒಟ್ಟು ಈವರೆಗೂ ಕೊರೊನಾ ಮಹಾಮಾರಿಗೆ 23 ಸಾವಿರದ 500 ಜನರು ಪ್ರಾಣ ಕಳೆದು ಕೊಂಡಿದ್ದಾರೆ. ಸದ್ಯಕ್ಕೆ ರಾಜ್ಯದಲ್ಲಿ 600 ಕ್ಕೂ ಹೆಚ್ಚು ಕೊರೊನಾ ಸಕ್ರಿಯ ಪ್ರಕರಣಗಳಿವೆ.

ಹೀಗಾಗಿ ರಾಜ್ಯದ ಆರು ಜಿಲ್ಲೆಗಳಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಹರಡುವಿಕೆಯನ್ನು ತಡೆಯಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಅಲ್ಲದೆ ಸಿಎಂ ಯೋಗಿ ಆದಿತ್ಯ ನಾಥ್ ಕೂಡ ಈ ಆರು ಜಿಲ್ಲೆಗಳಲ್ಲಿ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಕೊರೊನಾ ಲಸಿಕೆಯನ್ನ ಹಾಕುವಂತೆ ಹಾಗೂ ಹಾಕಿಸಿಕೊಳ್ಳುವಂತೆ ಸೂಚಿಸಿದ್ದಾರೆ.
ಕಳೆದ ತಿಂಗಳಷ್ಟೇ ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ ಅಂತ ಘೋಷಿಸಿತ್ತು. ಆದ್ರೆ ಈಗ ಪರಿಸ್ಥಿತಿ ಬದಲಾಗಿದ್ದು, ಕೊರೊನಾ ಸಂಖ್ಯೆ ದಿನದಿಂದ ಏರಿಕೆಯಾಗುತ್ತಿದೆ ಹೀಗಾಗಿ ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಇನ್ನಿತರ ನಿಯಮಗಳನ್ನು ಜಾರಿಗೆ ತರಲು ಯೋಗಿ ಆದಿತ್ಯ ನಾಥ್ ಸರ್ಕಾರ ಮುಂದಾಗಿದೆ.

ದೇಶದಲ್ಲಿ ಕಳೆದ ಒಂದು ವಾರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ದಿನೇ ದಿನೇ ಸೋಂಕಿತರ ಪ್ರಮಾಣ ದ್ವಿಗುಣವಾಗುತ್ತಿದೆ. ಅದರಲ್ಲೂ ಕೇರಳ, ದೆಹಲಿ, ಉತ್ತರ ಪ್ರದೇಶದಲ್ಲಿ ಕೊರೊನಾ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ಸೋಂಕು ನಿಯಂತ್ರಿಸಲು ಈ ರಾಜ್ಯಗಳಲ್ಲಿ ಮತ್ತೆ ಕೊರೊನಾ ನಿಯಮಗಳನ್ನ ಜಾರಿಗೆ ತರಲಾಗುತ್ತಿದೆ.
ಇನ್ನು ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ ಹೊಸದಾಗಿ 54 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 39,46,369 ಕ್ಕೇ ಏರಿಕೆಯಾಗಿದೆ. ರಾಜ್ಯದಲ್ಲಿ 1,464 ಸಕ್ರಿಯ ಪ್ರಕರಣಳಿವೆ ಅಂತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಸದ್ಯ ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಿದೆ ಅಂತ ಮೈ ಮರೆತರೇ ಮತ್ತೆ ದೆಹಲಿ, ಕೇರಳದಂತೆ ಕೇಸ್‌ಗಳೂ ದಾಖಲಾಗುವ ದಿನ ದೂರ ಇಲ್ಲ.












Click it and Unblock the Notifications