ಉತ್ತರ ಪ್ರದೇಶ ಚುನಾವಣೆಗೂ ಮುನ್ನ, 3 ಕೃಷಿ ಕಾನೂನುಗಳು ವಾಪಸ್: ಬಿಜೆಪಿ ನಾಯಕ
ಲಕ್ನೋ, ಆಗಸ್ಟ್ 10: ಉತ್ತರ ಪ್ರದೇಶ ಚುನಾವಣೆಗೂ ಮುನ್ನ '3 ಕೃಷಿ ಕಾನೂನು'ಗಳನ್ನು ಹಿಂಪಡೆಯುವ ಸಾಧ್ಯತೆ ಇದೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.
"ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಸನಿಹದಲ್ಲಿದ್ದು, ಇದಕ್ಕೂ ಮುನ್ನ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಸಾಧ್ಯತೆ ಇದೆ" ಎಂದು ಉತ್ತರ ಪ್ರದೇಶ ಬಿಜೆಪಿ ಕಾರ್ಯಸಮಿತಿಯ ಸದಸ್ಯ ರಾಮ್ ಇಕ್ಬಾಲ್ ಸಿಂಗ್ ಹೇಳಿದ್ದಾರೆ.
ರೈತರ ಬೇಡಿಕೆಗಳು ಸರಿಯಾಗಿವೆ. ವಿಧಾನಸಭಾ ಚುನಾವಣೆ ಹಾಗೂ ರೈತರ ಆಕ್ರೋಶಗಳನ್ನು ಗಮನದಲ್ಲಿಟ್ಟುಕೊಂಡು, ಮೋದಿ ಸರ್ಕಾರ ಹೊಸ ಕೃಷಿ ಕಾಯ್ದೆಗಳನ್ನು ಹಿಂಪಡೆಯಬಹುದು ಎಂದು ರಾಮ್ ಇಕ್ಬಾಲ್ ಸಿಂಗ್ ಹೇಳಿದ್ದಾರೆ.

ಇದೇ ವೇಳೆ ಪೆಗಾಸಸ್ ಗೂಢಚರ್ಯೆ ವಿಷಯವಾಗಿ ಸಂಸತ್ ನಲ್ಲಿ ಚರ್ಚೆಗೆ ಆಗ್ರಹಿಸಿರುವ ಪ್ರತಿಪಕ್ಷಗಳ ಬೇಡಿಕೆಯನ್ನೂ ಸಮರ್ಥಿಸಿಕೊಂಡಿರುವ ರಾಮ್ ಇಕ್ಬಾಲ್ ಸಿಂಗ್, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಪಕ್ಷಗಳ ಬೇಡಿಕೆಗಳನ್ನು ಪರಿಗಣಿಸಬೇಕಾಗುತ್ತದೆ ಎಂದಿದ್ದಾರೆ.
"ಪ್ರತಿಪಕ್ಷಗಳು ತನಿಖೆಗೆ ಆಗ್ರಹಿಸಿದರೆ, ಸರ್ಕಾರ ಅದಕ್ಕೆ ಒಪ್ಪಿಕೊಳ್ಳಬೇಕಾಗುತ್ತದೆ. ಸಂಸತ್ ಸುಗಮವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ" ಎಂದೂ ರಾಮ್ ಇಕ್ಬಾಲ್ ಸಿಂಗ್ ಹೇಳಿದ್ದಾರೆ.
ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯಿಂದಾಗಿ ಇಬ್ಜೆಪಿ ನಾಯಕರು ಪಶ್ಚಿಮ ಉತ್ತರ ಪ್ರದೇಶದ ಗ್ರಾಮಗಳಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ರೈತರು ಅವರನ್ನು ಮುಂದಿನ ದಿನಗಳಲ್ಲಿ ಘೇರಾವ್ ಹಾಕಬಹುದು ಎಂದೂ ರಾಮ್ ಇಕ್ಬಾಲ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಕೋವಿಡ್-19 ನ ಮೂರನೆ ಅಲೆ ಎದುರಿಸುವುದರ ಬಗ್ಗೆಯೂ ಮಾತನಾಡಿರುವ ಅವರು, ಎರಡನೇ ಅಲೆಯಿಂದ ಸರ್ಕಾರ ಕಲಿಯಲಿಲ್ಲ, ತಿಂಗಳಾಂತ್ಯಕ್ಕೆ ಎದುರಾಗಲಿರುವ ಮೂರನೇ ಅಲೆಗೆ ಪರಿಣಾಮಕಾರಿಯಾದ ವ್ಯವಸ್ಥೆ ಮಾಡಲಾಗಿಲ್ಲ ಎಂದು ಬಿಜೆಪಿ ನಾಯಕ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರವು ಈ ವರ್ಷ ಜಾರಿ ಮಾಡಿರುವ ನೂತನ ಕೃಷಿ ಕಾನೂನುಗಳ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಕೃಷಿ ಕಾನೂನುಗಳ ಪರ-ವಿರೋಧ ಚರ್ಚೆಗಳ ನಡುನಡುವೆ ತಪ್ಪು ಮಾಹಿತಿಗಳ ಮಹಾಪೂರವೂ ಹರಿದುಬರುತ್ತಿದೆ, ಈ ಕಾನೂನುಗಳ ಬಗ್ಗೆ ಸಮಾಜದಲ್ಲಿರುವ ಗೊಂದಲಗಳನ್ನು ಇಂಥ ತಪ್ಪು ಮಾಹಿತಿಗಳು ಹೆಚ್ಚಿಸಿವೆ.
ಕೃಷಿ ಕಾನೂನು ಎಂದು ರೂಢಿಯಲ್ಲಿರುವ ಪಾರಿಭಾಷಿಕ ಪದವು ವಾಸ್ತವವಾಗಿ ಮೂರು ಕಾಯ್ದೆಗಳನ್ನು ಧ್ವನಿಸುತ್ತದೆ. ಕಳೆದ ಸೆ.14ರಂದು ಕೃಷಿ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿತ್ತು, 17ಕ್ಕೆ ಮಸೂದೆಗೆ ಅಂಗೀಕಾರ ಲಭಿಸಿತ್ತು.
ಸೆ.20ಕ್ಕೆ ರಾಜ್ಯಸಭೆಯಲ್ಲಿಯೂ ಅಂಗೀಕಾರ ಲಭಿಸಿ, 27ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಮೂರು ಮಸೂದೆಗಳಿಗೂ ಅಂಕಿತ ಹಾಕಿದ್ದರು. ಆ ಮೂಲಕ ಈ ಮಸೂದೆಗಳು ಕಾಯ್ದೆಗಳಾಗಿ ಚಾಲ್ತಿಗೆ ಬಂದವು.
'ರೈತರ ಅನುಕೂಲಕ್ಕಾಗಿ ಹೊಸ ಕೃಷಿ ಕಾನೂನುಗಳನ್ನು ತರಲಾಗಿದೆ' ಎಂಬುದು ಪ್ರಧಾನಿ ನರೇಂದ್ರ ಮೋದಿ ಮಾತು. 'ಕಾರ್ಪೊರೇಟ್ ಲಾಬಿಗೆ ಮಣಿಗೆ ಈ ಕಾನೂನು ಜಾರಿ ಮಾಡಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಗೆ ಧಕ್ಕೆಯಾಗಲಿದೆ' ಎನ್ನುವುದು ರೈತರ ಆಕ್ಷೇಪ.
ಸಂಸತ್ತಿನಲ್ಲಿ ಅಂಗೀಕಾರವಾದ ಮೂರು ಮಸೂದೆಗಳು
1. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ, 2020
2. ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಖಾತ್ರಿ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ
3. ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ, 2020
ಹೊಸ ಕಾಯ್ದೆಯು ರೈತರು ಮತ್ತು ವ್ಯಾಪಾರಿಗಳಿಗೆ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಖರೀದಿಯ ಸ್ವಾತಂತ್ರ್ಯವನ್ನು ನೀಡುವ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ಈ ಕಾಯ್ದೆಯು ರಾಜ್ಯ ಕೃಷಿ ಉತ್ಪಾದನಾ ಮಾರುಕಟ್ಟೆ ಕಾಯ್ದೆಗಳ ಅಡಿಯಲ್ಲಿ ಅಧಿಸೂಚಿಸಲ್ಪಟ್ಟ ಮಾರುಕಟ್ಟೆಗಳ ಭೌತಿಕ ಆವರಣದ ಹೊರಗೆ ಜಿಲ್ಲೆ ಮತ್ತು ರಾಜ್ಯಗಳ ನಿರ್ಬಂಧವಿಲ್ಲದ ವ್ಯಾಪಾರ ಮತ್ತು ವಾಣಿಜ್ಯವನ್ನು ಉತ್ತೇಜಿಸುತ್ತದೆ.
ನಿಗದಿತ ವ್ಯಾಪಾರ ಪ್ರದೇಶದಲ್ಲಿ ನಿಗದಿತ ರೈತರ ಉತ್ಪನ್ನಗಳ ಎಲೆಕ್ಟ್ರಾನಿಕ್ ವ್ಯಾಪಾರವನ್ನು (ಯಾವುದೇ ರಾಜ್ಯ ಎಪಿಎಂಸಿ ಕಾಯ್ದೆಯಡಿ ನಿಯಂತ್ರಿಸಲಾಗುವ ಕೃಷಿ ಉತ್ಪನ್ನಗಳನ್ನು) ಇದು ಅನುಮತಿಸುತ್ತದೆ. ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಅಂತರ್ಜಾಲದ ಮೂಲಕ ಕೃಷಿ ಉತ್ಪನ್ನಗಳನ್ನು ನೇರ ಮತ್ತು ಆನ್‌ಲೈನ್ ಖರೀದಿಸಲು ಮತ್ತು ಮಾರಾಟ ಮಾಡಲು ಸಹ ಇದು ಅನುಕೂಲವಾಗಲಿದೆ.
ಈ ಕಾಯ್ದೆ ಪ್ರಕಾರ ರೈತರು, ವ್ಯಾಪಾರಿಗಳು ಮತ್ತು ಎಲೆಕ್ಟ್ರಾನಿಕ್ ವ್ಯಾಪಾರ ವೇದಿಕೆಗಳಿಗೆ ರಾಜ್ಯ ಸರ್ಕಾರಗಳು ಯಾವುದೇ ಮಾರುಕಟ್ಟೆ ಶುಲ್ಕ ಅಥವಾ ಸೆಸ್ ವಿಧಿಸುವಂತಿಲ್ಲ.
ರೈತರಿಗೆ ತಮ್ಮ ವಾಣಿಜ್ಯ ವಲಯಗಳಿಂದ ಹೊರಗೆ ಅಂದರೆ ಫಾರ್ಮ್‌ಗೇಟ್, ಕೋಲ್ಡ್ ಸ್ಟೋರೇಜ್, ಗೋದಾಮು, ಸಂಸ್ಕರಣಾ ಘಟಕಗಳಲ್ಲಿ ವ್ಯಾಪಾರ ಮಾಡುವ ಸ್ವಾತಂತ್ರ್ಯ ದೊರೆಯುತ್ತದೆ.
ಈ ಹಿಂದೆ ಎಪಿಎಂಸಿ ಯಾರ್ಡ್ ಅಥವಾ ಮಂಡಿಗಳಲ್ಲಿ ಮಾತ್ರ ರೈತರಿಗೆ ಮಾರಾಟ ಮಾಡಲು ಸಾಧ್ಯವಾಗುತ್ತಿತ್ತು. ಪರ್ಯಾಯ ವಾಣಿಜ್ಯ ಮಾರ್ಗದ ಮೂಲಕ ರೈತರಿಗೆ ಇದು ಲಾಭದಾಯಕ ಬೆಲೆಯನ್ನು ಒದಗಿಸುತ್ತದೆ. ಅಂದರೆ ಅಂತರ ರಾಜ್ಯ ಮತ್ತು ಅಂತರ್ ರಾಜ್ಯ ಕೃಷಿ ಉತ್ಪನ್ನಗಳ ಮಾರಾಟವನ್ನು ಇದು ಉತ್ತೇಜಿಸುತ್ತದೆ.












Click it and Unblock the Notifications