ಮುಂಗೈ ಕತ್ತರಿಸಿಕೊಂಡು ಬಿಜೆಪಿ ಸಂಸದನ ಸೊಸೆ ಆತ್ಮಹತ್ಯೆಗೆ ಯತ್ನ
ಲಕ್ನೋ, ಮಾರ್ಚ್ 15: ಉತ್ತರ ಪ್ರದೇಶದ ಬಿಜೆಪಿ ಸಂಸದ ಕೌಶಾಲ್ ಕಿಶೋರ್ ಅವರ ಕುಟುಂಬದ ಜಗಳ ಬೀದಿಗೆ ಬಂದಿದೆ. ಕಳೆದ ಎರಡು ವಾರಗಳಿಂದ ಅವರ ಮನೆಯಲ್ಲಿ ನಡೆಯುತ್ತಿದ್ದ ಕೌಟುಂಬಿಕ ಕಲಹಕ್ಕೆ ನಾಟಕೀಯ ತಿರುವು ಸಿಕ್ಕಿದೆ. ತಮ್ಮ ಮುಂಗೈ ಕೊಯ್ದುಕೊಳ್ಳುವ ಮೂಲಕ ಕೌಶಾಲ್ ಅವರ ಸೊಸೆ ಸೋಮವಾರ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.
ತಮ್ಮ ಮುಂಗೈ ಕತ್ತರಿಸಿಕೊಳ್ಳುವ ಮುನ್ನ ಅಂಕಿತಾ ಸಿಂಗ್ ಅವರು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಪತಿ ಆಯುಷ್ ಮತ್ತು ಅವರ ಕುಟುಂಬದವರಿಂದ ಕಿರುಕುಳ ಅನುಭವಿಸುತ್ತಿರುವುದಾಗಿ ಆರೋಪಿಸಿದ್ದಾರೆ.
ಕೌಶಾಲ್ ಕಿಶೋರ್ ಅವರ ನಿವಾಸದ ಹೊರಗೆ ತೆರಳಿದ್ದ ಅಂಕಿತಾ, ಅಲ್ಲಿ ಕೈ ಕೊಯ್ದುಕೊಂಡಿದ್ದಾರೆ. ಅವರನ್ನು ಕೂಡಲೇ ಅಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಪತಿ ಆಯುಷ್ ಮತ್ತು ಅವರ ಕುಟುಂಬದವರು ನಡೆಸಿದ ದೌರ್ಜನ್ಯಗಳ ಬಗ್ಗೆ ದೊಡ್ಡ ಪಟ್ಟಿಯನ್ನೇ ವಿಡಿಯೋದಲ್ಲಿ ನೀಡಿರುವ ಅಂಕಿತಾ ಸಿಂಗ್, 'ನಾನು ಯಾರ ವಿರುದ್ಧವೂ ಹೋರಾಡಲು ಸಾಧ್ಯವಿಲ್ಲ. ಏಕೆಂದರೆ ನಿಮ್ಮ ತಂದೆ ಸಂಸದ ಮತ್ತು ತಾಯಿ ಶಾಸಕಿ. ನನ್ನ ಮಾತನ್ನು ಯಾರೂ ಕೇಳುವುದಿಲ್ಲ. ನಿಮ್ಮನ್ನು ಮುಟ್ಟಲು ಕೂಡ ಯಾರಿಗೂ ನಾನು ಬಿಟ್ಟಿಲ್ಲ. ನಾನು ಹೇಗೆ ತಾನೆ ಹಾಗೆ ಮಾಡಲು ಸಾಧ್ಯ? ನೀವು ಸುಳ್ಳು ಹೇಳುತ್ತಿದ್ದೀರಿ. ನೀವು ಮತ್ತು ನಿಮ್ಮ ಕುಟುಂಬದವರು ನನಗೆ ಬದುಕಲು ಬಿಡುತ್ತಿಲ್ಲ' ಎಂದು ಹೇಳಿದ್ದಾರೆ.
ಆಯುಷ್ ತಮ್ಮ ಬದುಕನ್ನೇ ನಾಶ ಮಾಡಿದ್ದಾರೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅಂಕಿತಾ ತಿಳಿಸಿದ್ದಾರೆ. ಇದೇ ನಾನು ನಿಮಗೆ ನೀಡಲಿರುವ ದೊಡ್ಡ ಶಿಕ್ಷೆ. ನಾನು ಈ ಜಗತ್ತು ತೊರೆಯಲಿದ್ದೇನೆ. ನಾನು ನಿಮ್ಮ ಬದುಕಿನಲ್ಲಿ ಮರಳಿ ಬರುವುದಿಲ್ಲ. ನೀವು ಖುಷಿಯಾಗಿರಿ ಎಂದಿದ್ದಾರೆ.
ಅಂಕಿತಾ ಅವರು ತಮ್ಮ ಹಾಗೂ ತಮ್ಮ ಕುಟುಂಬಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಕೌಶಾಲ್ ಕಿಶೋರ್ ಆರೋಪಿಸಿದ್ದಾರೆ. 'ಆಕೆಯನ್ನು ನನ್ನ ಸೊಸೆ ಎಂದು ಕರೆಯಬೇಡಿ. ನಾನು ಆಕೆಯನ್ನು ಹಾಗೆ ಪರಿಗಣಿಸಿಲ್ಲ. ಅಯುಷ್ ಮತ್ತು ಆಕೆಯ ಮದುವೆ ನನ್ನ ಇಚ್ಛೆಗೆ ವಿರುದ್ಧವಾಗಿ ನಡೆದಿತ್ತು. ನಮಗೆ ಕೆಟ್ಟ ಹೆಸರು ತರಲು ಆಕೆಯನ್ನು ಯಾರೊ ಎತ್ತಿಕಟ್ಟುತ್ತಿದ್ದಾರೆ' ಎಂದು ಅವರು ಹೇಳಿದ್ದಾರೆ.
ಎರಡು ವಾರಗಳ ಹಿಂದೆ ಕೌಶಾಲ್ ಕಿಶೋರ್ ಅವರ ಮಗ ಆಯುಷ್ ಹಾಗೂ ಆತನ ಭಾವ (ಅಂಕಿತಾ ಸಹೋದರ) ಆದರ್ಶ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಕೆಲವು ವ್ಯಕ್ತಿಗಳನ್ನು ಪ್ರಕರಣದಲ್ಲಿ ಸಿಲುಕಿಸುವ ಸಲುವಾಗಿ ನಾಟಕ ಮಾಡಿದ್ದ ಆಯುಷ್, ತನ್ನ ಮೇಲೆ ಯಾರೋ ಗುಂಡು ಹಾರಿಸಿದ್ದಂತೆ ಕಥೆ ಹೆಣೆದಿದ್ದರು. ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ಆಯುಷ್ ಅವರ ಸೊಂಟ ಮತ್ತು ಭುಜದ ಕೆಳಭಾಗಕ್ಕೆ ಗುಂಡು ತಾಗಿತ್ತು. ಆಯುಷ್ ಸೂಚನೆಯಂತೆ ತಾವೇ ಗುಂಡು ಹಾರಿಸಿದ್ದಾಗಿ ಆದರ್ಶ್ ತಪ್ಪೊಪ್ಪಿಕೊಂಡಿದ್ದರು.












Click it and Unblock the Notifications