2005 ರ ಅಯೋಧ್ಯಾ ಸ್ಫೋಟದ ತೀರ್ಪು ಪ್ರಕಟ: ನಾಲ್ವರಿಗೆ ಜೀವಾವಧಿ ಶಿಕ್ಷೆ
ಪ್ರಯಾಗರಾಜ್, ಜೂನ್ 18: 2005 ರಲ್ಲಿ ಅಯೋಧ್ಯಯ ರಾಮಜನ್ಮಭೂಮಿಯಲ್ಲಿ ನಡೆದಿದ್ದ ಉಗ್ರ ದಾಳಿಯ ತೀರ್ಪನ್ನು ಉತ್ತರ ಪ್ರದೇಶದ ವಿಶೇಷ ನ್ಯಾಯಾಲಯ ಇಂದು ಪ್ರಕಟಿಸಿದೆ.
ಒಟ್ತು ಐವರು ಆರೋಪಿಗಳಲ್ಲಿ ನಾಲ್ವರಿಗೆ ಜೀವಾವಧಿ ಶಿಕ್ಷೆ ಘೋಷಿಸಲಾಗಿದ್ದು, ಓರ್ವನನ್ನು ನಿರಪರಾಧಿ ಎಂದು ಬಿಡುಗಡೆ ಮಾಡಲಾಗಿದೆ.
2005 ರ ಜುಲೈ 5 ರಂದು ಪಾಕ್ಮೂಲದ ಉಗ್ರರು ವಿವಾದಿತ ರಾಮಜನ್ಮಭೂಮಿ ಸ್ಥಳದಲ್ಲಿ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಐವರು ಉಗ್ರರನ್ನು ಅಲ್ಲಿಯೇ ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಮತ್ತು ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿದ್ದರು.

ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ಸಮೀಪ ಜೀಪೊಂದರಲ್ಲಿ ಸ್ಫೋಟಕವನ್ನಿಟ್ಟು ಸ್ಫೋಟಿಸಲಾಗಿತ್ತು. ಅಷ್ಟೇ ಅಲ್ಲ, ದೇವಾಲಯದೊಳಗೂ ಸ್ಫೋಟ ನಡೆಸಲು ಉಗ್ರರು ರಾಕೆಟ್ ಬಳಸಿದ್ದರು.
ಈ ಸಂದರ್ಭದಲ್ಲಿ ಸತತ ಐದು ಘಂಟೆಗಳ ಕಾರ್ಯಾಚರಣೆಯಲ್ಲಿ ಐವರು ಉಗ್ರರನ್ನು ಕೊಲ್ಲಲಾಗಿತ್ತು. ಐವರನ್ನು ಸೆರೆ ಹಿಡಿಯಲಾಗಿತ್ತು. ಇವರಲ್ಲಿ ನಾಲ್ವರ ಕೈವಾಡ ಸಾಬೀತಾದ ಹಿನ್ನೆಲೆಯಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ಘೋಷಿಸಲಾಗಿದ್ದು, ಓರ್ವನನ್ನು ನಿರಪರಾಧಿ ಎಂದು ಬಿಡುಗಡೆ ಮಾಡಲಾಗಿದೆ.
ಈ ನಾಲ್ವರನ್ನೂ ಜಮ್ಮು-ಕಾಶ್ಮೀರದಲ್ಲಿ ಬಂಧಿಸಲಾಗಿತ್ತು. ಈ ದಾಳಿಯಲ್ಲಿ ಏಳು ಸಿಆರ್ ಪಿಎಫ್ ಸಿಬ್ಬಂದಿ ಗಂಭಿರವಾಗಿ ಗಾಯಗೊಂಡಿದ್ದರು. ಮೊದಲಿಗೆ ಈ ಪ್ರಕರಣವನ್ನು ಫೈಜಾಬಾದ್ ನಲ್ಲಿ ನಡೆಸಲಾಗುತ್ತಿತ್ತು. ಆದರೆ ಅಲ್ಲಿ ಆರೋಪಿ ಪರ ವಾದಕ್ಕೆ ಯಾವ ವಕೀಲರೂ ಸಿದ್ಧವಿಲ್ಲದ ಕಾರಣ ಅದನ್ನು ಪ್ರಯಾಗ್ ರಾಜ್(ಅಲಹಾಬಾದ್)ಗೆ ವರ್ಗಾಯಿಸಲಾಯಿತು.












Click it and Unblock the Notifications